ಬಂಡೀಪುರದಲ್ಲಿ ಸಫಾರಿ ತುಸು ದುಬಾರಿ

ಬಂಡೀಪುರದ ಮೇಲುಕಾಮನಹಳ್ಳಿಯ ಸಫಾರಿ ಟಿಕೆಟ್ ಕೌಂಟರಿನಿಂದ ಸಫಾರಿಗೆ ಹೋಗಲು ಸಿದ್ಧವಾಗಿರುವ ವಾಹನಗಳು ಹಾಗೂ ಪ್ರವಾಸಿಗರು.
ಬಂಡೀಪುರದ ಮೇಲುಕಾಮನಹಳ್ಳಿಯ ಸಫಾರಿ ಟಿಕೆಟ್ ಕೌಂಟರಿನಿಂದ ಸಫಾರಿಗೆ ಹೋಗಲು ಸಿದ್ಧವಾಗಿರುವ ವಾಹನಗಳು ಹಾಗೂ ಪ್ರವಾಸಿಗರು.
Published on

ಪ್ರಮುಖ ಮುಖ್ಯಾಂಶಗಳು

  • ಹೊಸ ದರಿ ಸೆ.1ರಿಂದ ಅನ್ವಯ
  • ಒಂದು ಗಂಟೆ ಅವಧಿ ಸುತ್ತಾಟ ಹೆಚ್ಚು ಮಾಡಿದ ಅರಣ್ಯ ಇಲಾಖೆ
  • ಪೂರ್ಣ ಪ್ರಮಾಣದಲ್ಲಿ ಸಫಾರಿಗೆ ಸರ್ಕಾರ ಅನುಮತಿ ನೀಡಿದ ಹಿನ್ನೆಲೆ

ಗುಂಡ್ಲುಪೇಟೆ:

ಸರ್ಕಾರ ಫುಲ್ ಟೈಂ ಸಫಾರಿಗೆ ಅನುಮತಿ ನೀಡಿದ ನಂತರ ಹೊಸ ದರ ಪ್ರಕಟಿಸಿದ್ದು, ಬಂಡೀಪುರದಲ್ಲಿ ಸೆ.1ರಿಂದ ಅನ್ವಯವಾಗಲಿದೆ.

ಸರ್ಕಾರ ಪರಿಸರ ಪ್ರವಾಸೋದ್ಯಮಕ್ಕೆ ಪೂರಕವಾಗಿ ಬಂಡೀಪುರ ಹಾಗೂ ನಾಗರಹೊಳೆಯಲ್ಲಿ ಪೂರ್ಣಪ್ರಮಾಣದ ಸಫಾರಿಗೆ ಜುಲೈ 1ರಿಂದ ಅರಣ್ಯ ಇಲಾಖೆಗೆ ಅನುಮತಿ ನೀಡಿತ್ತು. ಆದರೂ ಬಂಡೀಪುರದಲ್ಲಿ ಸಫಾರಿ ಬಂದ್ ಮಾಡಿದ್ದ ಸಂದರ್ಭದಲ್ಲಿ ತಿಂಗಳುಗಟ್ಟಲೆ ಬಳಸದೆ ನಿಲ್ಲಿಸಿದ್ದ ವಾಹನಗಳನ್ನು ರಿಪೇರಿ ಮಾಡಿಸಲು ಕಾಲಾವಕಾಶ ಬೇಕಾಗಿದ್ದರಿಂದ ಸೆ.1ರವರೆಗೆ ಮುಂದೂಡಲಾಗಿತ್ತು.
ಒಂದು ಗಂಟೆ ಸಫಾರಿ ಅವಧಿಯನ್ನು ಹೆಚ್ಚಿಸಿದ ಅರಣ್ಯ ಇಲಾಖೆ ಹಿಂದೆ ವಯಸ್ಕರಿಗೆ (ಬಸ್) 650 ರೂಪಾಯಿ ಶುಲ್ಕವನ್ನು 1 ಸಾವಿರ ರೂ.(ಮಕ್ಕಳಿಗೆ 500), ಜೀಪಿನಲ್ಲಿ 12 ವರ್ಷ ಮೇಲ್ಪಟ್ಟ ವಯಸ್ಕರಿಗೆ 1500, 3ರಿಂದ 12 ವರ್ಷದೊಳಗಿನ ಮಕ್ಕಳಿಗೆ 750 ರೂ. ಏರಿಕೆಯಾಗಿದೆ. 200 ಎಂಎಂ ಲೆನ್ಸ್ ಇರುವ ಕ್ಯಾಮರಾಗೆ 1500+ಜಿಎಸ್‌ಟಿ ಶುಲ್ಕವಿದ್ದು ಇದು ಸೆ.1 ರಿಂದ ಜಾರಿಗೆ ಬರಲಿದೆ.
ಬಂಡೀಪುರದಲ್ಲಿ ಸಫಾರಿಗೆಂದು 10 ಬಸ್‌ಗಳು, 4 ಕ್ಯಾಂಪರ್‌ಗಳು ಹಾಗೂ 5 ಜಿಪ್ಸಿಗಳಿದ್ದರೂ, ಈ ಪೈಕಿ ಮೂರು ರಿಪೇರಿಯಾಗಿರುವ ಪರಿಣಾಮ ಕೇವಲ 2ನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಒಂದು ಅವಧಿಗೆ 250ರಿಂದ 300 ಜನರು ಸಫಾರಿಗೆ ಹೋಗಲು ಸಾಧ್ಯವಾಗುತ್ತದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಅವಧಿ ವಿಸ್ತರಣೆ, ವಾಹನಗಳ ಸಂಖ್ಯೆ ನಿಗದಿ
ಸರ್ಕಾರದ ಹೊಸ ಆದೇಶದಂತೆ ಸಫಾರಿ ಅವಧಿಯಂತೆ ಹಿಂದೆ 1.30 ಗಂಟೆಗಳ ಕಾಲ ಇದ್ದ ಅವಧಿಯನ್ನು 2.30 ಗಂಟೆಗಳ ಅವಧಿಗೆ ವಿಸ್ತರಿಸಲಾಗಿದೆ. ಪ್ರತಿ ದಿನ ಬೆಳಗ್ಗೆ 6 ರಿಂದ 9.30 ಮತ್ತು ಮಧ್ಯಾಹ್ನ 3.00 ರಿಂದ 6.30 ರವರೆಗೆ 56 ವಾಹನಗಳು ಸಫಾರಿ ನಡೆಸಲು ಅನುಮತಿ ನೀಡಲಾಗಿದೆ. ಇದರಲ್ಲಿ ಅರಣ್ಯ ಇಲಾಖೆಯ 34 ವಾಹನಗಳು (ಬೆಳಗ್ಗೆ ಮತ್ತು ಮಧ್ಯಾಹ್ನ ತಲಾ 17 ವಾಹನಗಳಂತೆ) ಹಾಗೂ ಜಂಗಲ್ ಲಾಡ್ಜ್‌ನ 22 ವಾಹನಗಳಿಗೆ ಬೆಳಗ್ಗೆ ಮತ್ತು ಮಧ್ಯಾಹ್ನ ತಲಾ 11ರಂತೆ ಅವಕಾಶ ನೀಡಲಾಗಿದೆ.
ಸ್ವಲ್ಪಮಟ್ಟಿಗೆ ರಿಪೇರಿ, ಎಫ್‌ಸಿ ಚಾಲ್ತಿ
ತಿಂಗಳುಗಟ್ಟಲೆ ನಿಲ್ಲಿಸಿದ್ದ ಬಸ್ ಹಾಗೂ ಕ್ಯಾಂಪರ್‌ಗಳನ್ನು ರಿಪೇರಿ ಮಾಡಿಸಿ ಅವುಗಳ ಫಿಟ್ನೆಸ್ ಹಾಗೂ ಇನ್ಶೂರೆನ್ಸ್‌ಗಳನ್ನು ಚಾಲ್ತಿಗೆ ತರಲಾಗಿದೆ. ಸಫಾರಿ ಟಿಕೆಟ್‌ಗೆ ಹೆಚ್ಚಿನ ಶುಲ್ಕ ನಿಗದಿಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಫಾರಿ ವಾಹನಗಳಲ್ಲಿ ಗುಣಮಟ್ಟದ ಸೀಟುಗಳ ಅಳವಡಿಕೆ ಸೇರಿದಂತೆ ಪ್ರವಾಸಿಗರಿಗೆ ಗುಣಮಟ್ಟದ ಅನುಭವ ನೀಡಲು ಮುಂದಾಗಿದೆ.
ಮಾನವ-ವನ್ಯಜೀವಿ ಸಂಘರ್ಷದಿಂದ ಬಂದ್ ಆಗಿತ್ತು
ಬಂಡೀಪುರ ಹುಲಿ ಯೋಜನೆಯ ಕಾಡಂಚಿನ ಗ್ರಾಮಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷಕ್ಕೇರಿದ್ದ ಹಿನ್ನೆಲೆಯಲ್ಲಿ ರೈತ ಸಂಘಟನೆಗಳ ಒತ್ತಾಯದ ಮೇರೆಗೆ ಸರ್ಕಾರ 2025ರ ನ.7ರಿಂದ ಸಫಾರಿ ಬಂದ್ ಮಾಡಿತ್ತು. ಈ ಸಂದರ್ಭದಲ್ಲಿ ಸಫಾರಿ ಬಂದ್ ಪರ ಹಾಗೂ ವಿರೋಧ ಹೋರಾಟಗಳು ಹೆಚ್ಚಿದ್ದರಿಂದ ಸರ್ಕಾರ ತಜ್ಞರ ಸಮಿತಿ ನೇಮಿಸಿ ವರದಿಯಂತೆ ಷರತ್ತುಬದ್ದ ಸಫಾರಿ ಆರಂಭಿಸಿತ್ತು.
ಆದರೆ ಇದರಿಂದ ರಜೆ ದಿನಗಳಲ್ಲಿ ಹೆಚ್ಚಿನ ಜನರು ಬಂದರೆ ಸಫಾರಿ ಟಿಕೆಟ್ ಸಿಗದೆ ಪ್ರವಾಸಿಗರು ನಿರಾಶರಾಗುತ್ತಿದ್ದರು. ಇಲ್ಲವೆ ನೆರೆಯ ಮಧುಮಲೈನ ಸಫಾರಿಗೆ ಹೋಗುವಂತಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಅರಣ್ಯ ಇಲಾಖೆ ಪ್ರಮುಖ ಆದಾಯದ ಮೂಲವೇ ಕಡಿತವಾಗಿ, ಅಭಿವೃದ್ದಿ ಕಾರ್ಯಗಳಿಗೆ ಹಾಗೂ ದಿನಗೂಲಿ ನೌಕರರಿಗೆ ಸಂಬಳ ನೀಡಲು ಅಗತ್ಯವಾದ ಅನುದಾನದ ಕೊರತೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ತಜ್ಞರ ವರದಿಯನ್ವಯ ಪರಿಸರ ಪ್ರವಾಸೋದ್ಯಮಕ್ಕೆ ಪೂರಕವಾಗಿ ಪೂರ್ಣ ಪ್ರಮಾಣದ ಸಫಾರಿಗೆ ಅನುಮತಿ ನೀಡಿದೆ.
ಸರಾಯ್‌ಗೆ ಪ್ರತ್ಯೇಕ ಕ್ಯಾಂಪರ್
ಪ್ರವಾಸೋದ್ಯಮದಲ್ಲಿ ದೊಡ್ಡ ಹೆಸರು ಮಾಡಿರುವ ಸರಾಯ್ ರೆಸಾರ್ಟ್‌ಗೆ ಬರುವ ಅತಿಥಿಗಳನ್ನು ನೇರವಾಗಿ ಸಫಾರಿಗೆ ಕರೆದೊಯ್ಯಲು ಒಂದು ಪ್ರತ್ಯೇಕ ಕ್ಯಾಂಪರ್ ನೀಡಲಾಗುತ್ತಿದೆ.
ಸಫಾರಿ ಬಂದ್ ಮಾಡಿದ ಸಂದರ್ಭದಲ್ಲಿ ವಾಹನಗಳನ್ನು ನಿಲ್ಲಿಸಿದ್ದರಿಂದ ಅವುಗಳಲ್ಲಿ ನಾನಾ ಸಮಸ್ಯೆಗಳು ತಲೆದೋರಿತ್ತು. ಹಾಗಾಗಿ ಸರಿಪಡಿಸಿದ ನಂತರ ಸೆ.1ರಿಂದ ಹೊಸ ದರದೊಂದಿಗೆ ಪೂರ್ಣಪ್ರಮಾಣದ ಸಫಾರಿ ಆರಂಭಿಸಲಾಗುತ್ತಿದೆ.
ಎಲ್.ನಂದೀಶ್ ಕ್ಷೇತ್ರ ನಿರ್ದೇಶಕ, ಬಂಡೀಪುರ ಹುಲಿ ಯೋಜನೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net