ಹನೂರು:ತಾಲೂಕಿನ ಮಲೆಮಹದೇಶ್ವರ ಬೆಟ್ಟ ತಪ್ಪಲಿನ ತೋಕೆರೆ, ದೊಡ್ಡಾಣೆ ಹಾಗೂ ಕೊಕ್ಕಬರೆ ಗ್ರಾಮಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವ ಸಂಬಂಧ ಬುಧವಾರ ಜಿಲ್ಲಾಧಿಕಾರಿ ಶ್ರೀರೂಪಾ ಭೇಟಿ ನೀಡಿ ಗ್ರಾಮಸ್ಥರಿಂದ ಸಮಸ್ಯೆ ಆಲಿಸಿದರು.
ಹಲವು ದಶಕಗಳಿಂದ ಇಲ್ಲಿ ವಾಸಿಸುತ್ತಿದ್ದು, ಮೂಲ ಸೌಕರ್ಯವಿಲ್ಲ. ಈವರೆಗೂ ಈ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಇದರಿಂದ ರಾತ್ರಿಯನ್ನು ಕತ್ತಲೆಯಲ್ಲಿ ಕಳೆಯುವಂತಾಗಿದೆ. ಸಮರ್ಪಕ ರಸ್ತೆ ಇಲ್ಲದ ಪರಿಣಾಮ ಸಾರಿಗೆ ಸೌಕರ್ಯದಿಂದ ವಂಚಿತರಾಗಿದ್ದು, ನಡೆದುಕೊಂಡೇ ತೆರಳಬೇಕಾದ ಸ್ಥಿತಿ ಇದೆ. ಇತ್ತ ಜಲಜೀವನ ಮೀಷನ್ ಯೋಜನೆ ಕಾಮಗಾರಿ ಅಪೂರ್ಣವಾಗಿದೆ. ಇದರಿಂದ ಸಮಸ್ಯೆ ಎದುರಿಸುತ್ತಿದ್ದೇವೆ. ಆದ್ದರಿಂದ ಈ ಬಗ್ಗೆ ಮುತುವರ್ಜಿ ವಹಿಸಿ ಅಗತ್ಯ ಮೂಲ ಸೌಕರ್ಯ ಕಲ್ಪಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಶ್ರೀರೂಪಾ, ಕಾಡಂಚಿನ ಗ್ರಾಮಗಳಿಗೆ ರಸ್ತೆ ಹಾಗೂ ವಿದ್ಯುತ್ ಸೌಕರ್ಯ ಒದಗಿಸುವ ಸಂಬಂಧ ಈಗಾಗಲೇ ಕೇಂದ್ರ ಸರ್ಕಾರದಿಂದ ಅನುಮತಿ ದೊರಕಿದೆ. ಹಾಗಾಗಿ 20 ದಿನದೊಳಗಾಗಿ ರಸ್ತೆ ಹಾಗೂ ವಿದ್ಯುತ್ ಸೌಕರ್ಯ ಒದಗಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ತೋಕೆರೆ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಡಿಸಿ ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಬಾಣಂತಿಯೊಬ್ಬರೂ ಮಗುವನ್ನು ಡಿಸಿ ಅವರ ಕೈಗೆ ನೀಡಿ ಸಾರಿಗೆ ವ್ಯವಸ್ಥೆ ಇಲ್ಲದೆ ಮಾರ್ಗಮಧ್ಯೆ ಜನಿಸಿದ ಮಗು ಇದು. ಆದ್ದರಿಂದ ಗ್ರಾಮಕ್ಕೆ ಸಾರಿಗೆ ಸೌಕರ್ಯ ಕಲ್ಪಿಸುವಂತೆ ಮನವಿ ಮಾಡಿದರು. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಡಿಸಿ ಭರವಸೆ ನೀಡಿದರು.
ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು, ಡಿಸಿಎಫ್ ಭಾಸ್ಕರ್, ಭೂ ಮಾಪನ ಇಲಾಖೆಯ ಉಪ ನಿರ್ದೇಶಕಿ ವಿದ್ಯಾಯಿನಿ, ಸಹಾಯಕ ನಿದೇಶಕ ನಟರಾಜು, ಪಿಡಬ್ಲ್ಯುಡಿ ಎಇಇ ಚಿನ್ನಣ್ಣ, ಪಿಡಿಒ ಕಿರಣ್, ಗ್ರಾಮ ಆಡಳಿತ ಅಧಿಕಾರಿ ವಿನೋದ್ ಇತರರು ಇದ್ದರು.