ನಿವೃತ್ತಿ ಶಿಕ್ಷಕ ಈಗ ಮಾದರಿ ಕೃಷಿಕ

ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ಸಾಹಿತಿ ಶಿವಣ್ಣ ಇದ್ವಾಂಡಿ ಅವರ ತೋಟದಲ್ಲಿ ಸಾವಯವ ಕೃಷಿಯಿಂದ ಸೊಗ ಸಾಗಿ ಬೆಳೆದಿರುವ ತೆಂಗಿನ ಫಸಲು.
ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ಸಾಹಿತಿ ಶಿವಣ್ಣ ಇದ್ವಾಂಡಿ ಅವರ ತೋಟದಲ್ಲಿ ಸಾವಯವ ಕೃಷಿಯಿಂದ ಸೊಗ ಸಾಗಿ ಬೆಳೆದಿರುವ ತೆಂಗಿನ ಫಸಲು.
Published on

ಪ್ರಮುಖ ಮುಖ್ಯಾಂಶಗಳು

  • ದೊಡ್ಡಿಂದುವಾಡಿ ಗ್ರಾಮದ ಶಿವಣ್ಣ ಇದ್ವಾಂಡಿಅವರಿಂದ ಸಾವಯವ ಬೇಸಾಯ
  • ವ್ಯವಸಾಯದಲ್ಲೂ ಕಾಯಕ ನಿಷ್ಠೆ
ಕೊಳ್ಳೇಗಾಲ: ಕಾಯಕ ನಿಷ್ಠೆಯಿಂದಲೆ ಎಲ್ಲರ ನೆಚ್ಚಿನ ಶಿಕ್ಷಕರಾಗಿದ್ದರು. ಇದೀಗ ನಿವೃತ್ತಿ ಬುದುಕಿನಲ್ಲಿ ವಿಶ್ರಮಿಸದೆ ಸಾವಯವ ಕೃಷಿ ಮಾಡುತ್ತ ಮಾದರಿ ರೈತರಾಗಿ ಭೂಮಿ ತಾಯಿಯ ಋಣ ತೀರಿಸುತ್ತಿದ್ದಾರೆ.
ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ಸಾಹಿತಿ ಶಿವಣ್ಣ ಇದ್ವಾಂಡಿ ಅವರು ಶಿಕ್ಷಕ ವೃತ್ತಿಯಲ್ಲಿ ಮೆರೆದಿದ್ದ ನಿಷ್ಠ್ಠೆಯನ್ನು ಕೃಷಿ ಕಾಯಕದಲ್ಲೂ ಮುಂದುವರೆಸಿದ್ದಾರೆ. 2022ರಲ್ಲಿ ಶಿಕ್ಷಣ ಇಲಾಖೆಯಲ್ಲಿ ನಿವೃತ್ತರಾದ ಬಳಿಕ ಭೂಮಿ ತಾಯಿಯ ಸೇವೆ ಆರಂಭಿಸಿದ್ದಾರೆ. ನಿವೃತ್ತಿ ಕೆಲಸಕಷ್ಟೇ ಬದುಕಿಗಲ್ಲ ಎಂಬುದನ್ನು ತೋರಿಸಿದ್ದಾರೆ.
ಆಧುನಿಕ ಕೃಷಿ ಜಗ್ಗತ್ತಿನಲ್ಲಿ ಭೂಮಿ ತಾಯಿಯ ಒಡಲಿಗೆ ರಾಸಾಯನಿಕ ಗೊಬ್ಬರ ಸುರಿಯುತ್ತಿರುವುದ್ದರಿಂದ ಮಣ್ಣಿನ ಫಲವತ್ತತೆ ಹಾಳಾಗುವ ಜತೆಗೆ ಮಾನವನ ಆರೋಗ್ಯದ ಮೇಲು ಪರಿಣಾಮ ಬೀರುತ್ತಿರುವ ಈ ಕೃಷಿ ಪದ್ಧತಿಯ ಅಂತ್ಯ ಕಾಣ ಬೇಕೆಂಬ ಅಭಿಲಾಷೆಹೊಂದಿ, ಪಿತ್ರಾರ್ಜಿತವಾಗಿ ಒದಗಿರುವ 5 ಎಕರೆ ಭೂಮಿಯಲ್ಲಿ ಸಂಪೂರ್ಣ ಸಾವಯವ ಕೃಷಿ, ತೋಟಗಾರಿಕೆ ಮಾಡುತ್ತಿದ್ದು, ನಿವೃತ್ತ ಜೀವನದಲ್ಲಿ ನೆಮ್ಮದಿ ಕಂಡು ಕೊಂಡಿದ್ದಾರೆ.
ನಳ ನಳಿಸುತ್ತಿರುವ ತೆಂಗು; 3 ವಷರ್ದ ಈಚೆಗೆ ಜಮೀನಿನಲ್ಲಿ ಸಾವಯವ ಕೃಷಿ ಕೈಗೊಂಡಿದ್ದ ಫಲವಾಗಿ ಭೂಮಿಯ ಫಲವತ್ತತೆ ಕಾಣತೊಡಗಿತು. 5 ಎಕರೆ ಜಮೀನಿನಲ್ಲಿ 300 ನಾಟಿ ತೆಂಗು, 200 ಗುಂಪು ಬಾಳೆ ಮತ್ತು ನೆರಳೆ, ಹಲಸು, ಚೆರಿ, ತೇಗ, ಸೀಬೆ, ನುಗ್ಗೆ, ನಿಂಬೆ, ಮಹಾಗನಿ ಗಿಡಗಳನ್ನು ಬೆಳೆಸಲಾಗಿದೆ. ವಿಶೇಷ ವೆಂದರೆ ನೈಸರ್ಗಿಕ ವ್ಯವಸಾಯದಿಂದ ತೆಂಗಿನ ಬೆಳೆ ನಳನಳಿಸುತ್ತಿದೆ. ಮುಂದಿನ ದಿನಗಳಲ್ಲಿ ತೆಂಗಿನ ಬೆಳೆ ಮಧ್ಯ ಅವಕಾಡು, ಅಡಿಕೆ, ಮಾವು ಇನ್ನಿತರ ಹಣ್ಣು ಬೆಳೆಸುವ ಯೋಜನೆಯನ್ನು ಹೊಂದಿದ್ದಾರೆ. ಸದ್ಯಕ್ಕೆ ಯಾವುದೇ ಆದಾಯ ನಿರೀಕ್ಷೆಯನ್ನು ಇಟ್ಟು ಕೊಳ್ಳದೆ ವಿಷಮುಕ್ತ ತೋಟ ನಿರ್ಮಾಣಕ್ಕೆ ಶಿವಣ್ಣ ಇದ್ವಾಂಡಿ ಅವರು ಶ್ರಮಿಸುತ್ತಿದ್ದಾರೆ.
ಸಾವಯವ ಕೃಷಿ ಮಾಡುವುದೇ ಉದ್ದೇಶ: ಶಿವಣ್ಣ ಇದ್ವಾಂಡಿ ರೈತ ಕುಟುಂಬಕ್ಕೆ ಸೇರಿದವರು. ಮಳೆ ಆಶ್ರಯಿಸಿ ತಂದೆ-ತಾಯಿ ಮಾಡುತ್ತಿದ್ದ ಬೇಸಾಯವನ್ನು ಬಾಲ್ಯದಲ್ಲಿ ನೋಡುತ್ತ ಬೆಳೆದಿದ್ದರು. ದೊಡ್ಡಿಂದುವಾಡಿ ಗ್ರಾಮದಲ್ಲಿ ಎರಡೂವರೆ ಎಕರೆ ಮತ್ತು ಮಧುವನಹಳ್ಳಿಯಲ್ಲಿ ಗ್ರಾಮದಲ್ಲಿರುವ ಎರಡುವರೆ ಎಕರೆ ಜಮೀನಿನಲ್ಲಿ ಹಿಂದೆ ರಾಗಿ, ಜೋಳ ಇನ್ನಿತರ ಫಸಲನ್ನು ಬೆಳೆಯುತ್ತಿದ್ದರು. ಶಿಕ್ಷಕ ವೃತ್ತಿಯಿಂದ ನಿವೃತ್ತಿ ಹೊಂದಿದ ಬಳಿಕ ಶಿವಣ್ಣ ಇದ್ವಾಂಡಿ ಅವರು ಕೃಷಿಯತ್ತ ಮುಖಮಾಡಿದರು. ಜಮೀನಿನ ಸುತ್ತಲೂ ಫೆನ್ಸಿಂಗ್ ಅಳವಡಿಸಿದರು. ಪ್ರತ್ಯೇಕ ಎರಡು ಜಮೀನಿಗೂ ಬೋರ್ ಹಾಕಿಸಿದರು. ಹನಿ ನೀರಾವರಿ ವ್ಯವಸ್ಥೆ ಕಲ್ಪಿಸಿದರು. ಸಾವಯವ ಕೃಷಿಯನ್ನೇ ಮಾಡಬೇಕೆಂಬ ಉದ್ದೇಶದಿಂದ ಪ್ರಥಮವಾಗಿ ಭೂಮಿಯನ್ನು ಫಲವತ್ತತೆ ಮಾಡುವುದಕ್ಕೆ ಆಧ್ಯತೆ ನೀಡಿದರು. ಅಲಸಂದೆ, ಹುರುಳಿ ಬಿತ್ತಿ ಉಳುಮೆ ಮಾಡಿದರು. ವಷರ್ಕ್ಕೆ ಎರಡು ಬಾರಿ ದನ, ಆಡು- ಕುರಿ ಗೊಬ್ಬರವನ್ನು ಹಾಕಿದರು. ಜಮೀನಿನಲ್ಲಿ ಬೆಳೆದ ಕಳೆಯನ್ನು ಭೂಮಿಯಲ್ಲೆ ಕೊಳೆಯಿಸಿ ಮಲ್ಚಿಂಗ್ ಮಾಡಿಸಿದರು. ಹಂತ ಹಂತವಾಗಿ ಮಣ್ಣು ಮೃದುವಾಗಿ ಫಲವತ್ತತೆ ಕಡೆಗೆ ತಿರುಗಿತು. ತಂದೆ ಶಿವಣ್ಣ ಅವರ ಸಾವಯವ ಕೃಷಿ ಪ್ರಾರಂಭಕ್ಕೆ ಪುತ್ರ ಎಂ.ಎಸ್.ಸಿ ಪಿಎಚ್.ಡಿ ಪದವಿಧರ ಸಚ್ಚಿದಾನಂದ ಅವರು ಮಾರ್ಗದರ್ಶನ ನೀಡುವ ಮೂಲಕ ಸಹಾಯ ಮಾಡುತ್ತಿದ್ದಾನೆ.
ಮುಂದಿನ ಪೀಳಿಗೆಗೆ ಮಣ್ಣೇ ಆಸರೆ: ಸಂಪದ್ಭರಿತ, ಫಲವತ್ತತೆಯಿಂದ ಕೂಡಿದ್ದ ಮಣ್ಣು ಕಾಲ ಕ್ರಮೇಣ ಸತ್ವವನ್ನು ಕಳೆದುಕೊಳ್ಳುತ್ತಿದೆ. ಹಾಗಾಗಿ ಮಣ್ಣಿನ ಫಲವತ್ತತೆಯನ್ನು ಉಳಿಸಿ, ಬೆಳೆಸುವುದು ಪ್ರತಿಯೊಬ್ಬ ನೇಗಿಲಯೋಗಿಯ ಕರ್ತವ್ಯವೂ ಆಗಿದೆ. ರಾಸಾಯನಿಕ ಗೊಬ್ಬರಗಳು, ಕೀಟ ನಾಶಕಗಳನ್ನು ಬಳಸದೆ ನೈಸರ್ಗಿಕವಾಗಿ ಕೊಟ್ಟಿಗೆ ಗೊಬ್ಬರ, ಹಸಿರು ಎಲೆಗೊಬ್ಬರ ಅವಲಂಬಿಸಿ ಕೃಷಿ ಮಾಡಿದಲ್ಲಿ ಮುಂದಿನ ಪೀಳಿಗೆಯ ಬದುಕಿಗೆ ಭೂಮಿ ಉಳಿಸಬಹುದೆಂಬುದನ್ನು ತಿಳಿದ ಶಿವಣ್ಣ ಇದ್ವಾಂಡಿ ಅವರು ಸಾವಯವ ಕೃಷಿ ಮಾಡುತ್ತಿದ್ದಾರೆ.
ಉತ್ತಮ ವಾಗ್ಮಿ ಎಂಬ ಜನಪ್ರಿಯತೆ :ಕನ್ನಡ ಶಿಕ್ಷಕರಾಗಿದ್ದ ಶಿವಣ್ಣ ಇದ್ವಾಂಡಿ ಅವರು ಸಾಹಿತಿಗಳು ಹೌದು. ಹಲವು ಪುಸ್ತಕಗಳು, ಕಾವ್ಯ ಸಂಕಲನ ಇವರಿಂದ ರಚಿಸಲ್ಪಟಿದೆ. ಹಳೆ ಗನ್ನಡ, ನಡು ಗನ್ನಡ, ಆಧುನಿಕ ಕನ್ನಡ, ಕಾವ್ಯ, ಗಮಕ, ಛಂದಸ್ಸು, ಅಲಂಕಾರ ಮತ್ತು ಮಹನೀಯರ ವಿಷಯದಲ್ಲಿ ಪರಿಣತಿ ಪಡೆದಿದ್ದಾರೆ. ರಾಜ್ಯ ಸಂಪನ್ಮೂಲ ಶಿಕ್ಷಕರಾಗಿ ರಾಜ್ಯಾದ್ಯಂತ ಸರ್ಕಾರ ನಡೆಸುವ ಮತ್ತು ವಿವಿಧ ಸಂಘ-ಸಂಸ್ಥೆಗಳು ಆಯೋಜನೆ ಮಾಡುವ ಕಾರ್ಯಕ್ರಮಗಳಲ್ಲಿ ಉಪನ್ಯಾಸ ನೀಡಿ ಉತ್ತಮ ವಾಗ್ಮಿ ಎಂಬ ಹೆಸರಿಗೆ ಪಾತ್ರರಾ ಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net