ಗುಂಡ್ಲುಪೇಟೆ: ಟಿಪ್ಪರ್‌ಗಳ ಸಂಚಾರಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಶುಕ್ರವಾರ ಬಿಜೆಪಿಯಿಂದ ಪ್ರತಿಭಟನೆ ನಡೆಯಿತು.
ಹಗಲಿರುಳು ಎನ್ನದೆ ಸಂಚರಿಸುವ ಟಿಪ್ಪರ್‌ಗಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿದ ಬಿಜೆಪಿ ಮುಖಂಡರು, ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಸರ್ಕಾರ ಹಾಗೂ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ತಾಲೂಕಿನಲ್ಲಿ ಸಕ್ರಿಯವಾಗಿರುವ ಅಕ್ರಮ ಗಣಿಗಾರಿಕೆ, ಕ್ವಾರಿ, ಅನಧಿಕೃತ ಕೇರಳ ಟಿಪ್ಪರ್‌ಗಳಿಗೆ ಕಡಿವಾಣ ಹಾಕುವಲ್ಲಿ ವಿಫಲರಾಗಿರುವ ಅಧಿಕಾರಿಗಳು ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಅಣತಿಯಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ಘೋಷಿಸುವ ಮೂಲಕ ಅಧಿಕಾರದ ಗದ್ದುಗೆಯೇರಿದರೆ ಇತ್ತ ಸ್ಥಳೀಯ ಶಾಸಕರು ಜನಸಾಮಾನ್ಯರಿಗೆ ಸಾವಿನ ಭಾಗ್ಯ ಕರುಣಿಸುತ್ತಿದ್ದಾರೆ ಎಂದು ಪ್ರತಿಭಟನಾನಿರತರು ಕಿಡಿಕಾರಿದರು.
ಶಾಸಕರು ಗಣಿ ಲೂಟಿಕೊರರಿಂದ ಪಡೆಯುತ್ತಿರುವ ಕಮಿಷನ್ ಹಣದ ಆಸೆಗೆ ಅಮಾಯಕರ ಹೆಣ ಉರುಳಿಸುತ್ತಿದ್ದಾರೆ. ಕೇರಳ ಮಾಫಿಯಾಗೆ ಬೆಂಬಲಿಸುವ ಶಾಸಕರು ಕ್ಷೇತ್ರದ ಹಿತವನ್ನೇ ಅಡಮಾನವಿಟ್ಟಿದ್ದಾರೆ ಎಂದು ಹರಿಹಾಯ್ದರು.
ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ಮಾತನಾಡಿ, ಕಳೆದ ಹಲವು ದಿನಗಳಿಂದ ಟಿಪ್ಪರ್‌ಗಳಿಂದ ಸಾವು-ನೋವು ಸಂಭವಿಸಿದರೂ ಸಹ ಶಾಸಕರು ಹಾಗೂ ಜಿಲ್ಲಾಡಳಿತ ಮೌನಕ್ಕೆ ಶರಣಾಗಿದೆ. ಕಳೆದ ಹತ್ತು ದಿನಗಳಿಂದ ರೈತರು ಧರಣಿ ನಡೆಸುತ್ತಿದ್ದರೂ ಶಾಸಕ ಗಣೇಶ್ ಪ್ರಸಾದ್ ತಲೆಕೆಡಿಸಿಕೊಂಡಿಲ್ಲ. ಕ್ಷೇತ್ರದಲ್ಲಿನ ಸಮಸ್ಯೆ ಕುರಿತು ಗ್ರಹಿಕೆ ಇಲ್ಲದೆ ತಮ್ಮ ವ್ಯವಹಾರಗಳನ್ನು ಮಾತ್ರ ಮುಂದುವರಿಸಿದ್ದಾರೆ. ಕಳೆದ ಬಾರಿ 37 ದಿನ ಆಹೋರಾತ್ರಿ ಮುಷ್ಕರ ನಡೆಸಿದ್ದ ರೈತರಿಗೆ ನೀಡಿದ್ದ ಭರವಸೆ ಹುಸಿಯಾಗಿದೆ ಎಂದು ಕಿಡಿಕಾರಿದರು.
ತಮ್ಮ ಮೂರು ವರ್ಷದ ಅವಧಿಯಲ್ಲಿ ಒಂದೂ ಕೆರೆ ತುಂಬಿಸಲಿಲ್ಲ. 110 ಕೆರೆಗೆ ನೀರು ಹರಿಸುವ ವಿಚಾರದಲ್ಲಿನಾಟಕ ಮಾಡುತ್ತಿದ್ದಾರೆ. ವಿಪಕ್ಷದವರ ಪ್ರಶ್ನೆಗೆ ಉತ್ತರ ನೀಡದೆ ಪಲಾಯನ ಮಾಡುವ ಶಾಸಕರು. ಬಿಜೆಪಿ ಸರ್ಕಾರದ ಅವಧಿಯಲ್ಲಿನ ಕೆಲಸಗಳನ್ನು ತಮ್ಮ ಸಾದನೆ ಎಂದು ಬಿಂಬಿಸಲು ಹೊರಟಿದ್ದಾರೆ. ಬೇಗೂರು ಹತ್ತಿ ಮಾರುಕಟ್ಟೆಗೆ ಆರು ಕೋಟಿ ರೂ.ಬಿಡುಗಡೆಯಾಗಿದ್ದು ಬಿಜೆಪಿ ಸರ್ಕಾರದ ಅವಧಿಯಲ್ಲಿ. ಅಂಬೇಡ್ಕರ್ ವಸತಿ ಶಾಲೆ ನನ್ನ ಅವಧಿಯದ್ದು. ನನ್ನ ಪ್ರಯತ್ನದ ಫಲವಾಗಿ ಕಟ್ಟಡ ನಿರ್ಮಾಣವಾಗಿದೆ. ಇನ್ನು ಅರೇಪುರದ ಕೆಇಬಿ ಸಬ್ ಸ್ಟೇಷನ್ ನಿರ್ಮಾಣಕ್ಕೆ ಅಡಿಗಲ್ಲಾಕಿದ್ದು ಬಿಜೆಪಿ. ಪ್ರತಿ ವಾರ ನಡೆಯುತ್ತಿದ್ದ ಜನಸಂಪರ್ಕ ಸಭೆಯಿಂದ ಫಲಾನುಭವಿಗಳಿಗೆ ಹಕ್ಕುಪತ್ರ ದೊರಕಿದೆ ಎಂದರು.
ಟಿಪ್ಪರ್ ಸಂಚಾರದಿಂದ ನಿರಂತರ ಪ್ರಾಣಹಾನಿ ಆಗುತ್ತಿದ್ದು, ಕೇರಳ ಮೂಲದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದರೂ ಅಂತಕರಣವಿಲ್ಲದೆ ವರ್ತಿಸುತ್ತಿದ್ದಾರೆ. 100 ಮೀಟರ್‌ಗಿಂತ ಅಧಿಕ ಆಳದಲ್ಲಿ ಗಣಿಗಾರಿಕೆ ನಡೆಯುತ್ತಿದ್ದು, ಗುಮ್ಮಕಲ್ಲು ಗುಡ್ಡದಲ್ಲಿ ಗಣಿಗಾರಿಕೆ ಮರು ಆರಂಭ ಮಾಡಿರುವುದೇ ಇವರ ಸಾಧನೆ. ನಿತ್ಯ 250 ರಿಂದ 300 ಲಾರಿಗಳು ಸಂಚರಿಸುತ್ತಿದ್ದು, ಇದು ಮುಂದುವರಿ ದರೆ ನಾಮವಶೇಷ ಆಗುತ್ತದೆ ಎಂದು ಎಚ್ಚರಿಸಿದರು.
ಪಕ್ಷದ ಮಂಡಲಾಧ್ಯಕ್ಷ ಸಿ.ಮಹದೇವಪ್ರಸಾದ್, ಮಾಜಿ ಅಧ್ಯಕ್ಷರಾದ ಎಲ್.ಸುರೇಶ್, ಎನ್.ಮಲ್ಲೇಶ್, ಮುಖಂಡರಾದ ನಾಗೇಂದ್ರ, ಮಲ್ಲೇಶ್, ಮಂಜು, ಡಾ.ನವೀನಮೌರ್ಯ, ಬಸವರಾಜ, ನಾಗೇಂದ್ರ, ರೇವಣ್ಣ, ಶಿವಪ್ರಸಾದ್, ಸುನಿಲ್, ಮಹೇಂದ್ರ ಗೌಡ ಸೇರಿದಂತೆ ಹಲವರು ಇದ್ದರು.