ಬಿಳಿಗಿರಿ ರಂಗನಬೆಟ್ಟದಲ್ಲಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ
ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ಗ್ರಾಪಂನಲ್ಲಿ ಶುಕ್ರವಾರ ನಡೆದ ಗ್ರಾಮಸಭೆಯಲ್ಲಿ ಪಿಡಿಒ ಶಶಿಕಲಾ ಮಾತನಾಡಿದರು. ಅಧ್ಯಕ್ಷ ಸಿ.ಡಿ. ಮಾದೇವ ಸೇರಿದಂತೆ ಅನೇಕರು ಇದ್ದರು.
Published on:
Copied
Follow Us
ಯಳಂದೂರು: ತಾಲೂಕಿನ ಬಿಳಿಗಿರಿ ರಂಗನಬೆಟ್ಟದಲ್ಲಿ ಅಕ್ರಮವಾಗಿ ಅವ್ಯಾಹತವಾಗಿ ಮದ್ಯವನ್ನು ಮಾರಾಟ ಮಾಡಲಾಗುತ್ತಿದೆ. ಇದರಿಂದ ಇಲ್ಲಿನ ಸೋಲಿಗರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಇಲ್ಲಿನ ನಾಗರಿಕರು ಒತ್ತಾಯಿಸಿದರು.
ಶುಕ್ರವಾರ ಬೆಟ್ಟದ ಗ್ರಾಮ ಪಂಚಾಯಿತಿಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಸೋಲಿಗ ಮುಖಂಡರು ಭಾಗವಹಿಸಿ ಈ ಬಗ್ಗೆ ಪಿಡಿಒಗೆ ದೂರು ನೀಡಿದರು. ಬೆಟ್ಟದಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಅರಣ್ಯ ಇಲಾಖೆಯ ಚೆಕ್‌ಪೋಸ್ಟ್ ಇದ್ದರೂ ಮದ್ಯವನ್ನು ತರಲಾಗುತ್ತಿದೆ. ಇಲ್ಲಿನ ಸ್ಥಳೀಯರ ವಾಹನವನ್ನು ತಪಾಸಣೆ ಮಾಡಬೇಕು. ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ವಹಿಸಬೇಕು ಎಂದು ದೂರಲಾಯಿತು. ಇದಕ್ಕೆ ಪಿಡಿಒ ಶಶಿಕಲಾ ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಗಮನಕ್ಕೆ ತರಲಾಗುವುದು ಎಂದರು.
ಗ್ರಾಮಕ್ಕೆ ಜಲಜೀವನ್ ಯೋಜನೆಯಡಿ ಶುದ್ಧ ಕುಡಿಯುವ ನೀರು ಯೋಜನೆಗೆ ಅರಣ್ಯ ಇಲಾಖೆ ಇಲ್ಲದ ತಡೆಯೊಡ್ಡುತ್ತಿದೆ. ಕುಡಿಯುವ ನೀರು ಪೂರೈಕೆಯ ಕಾಮಗಾರಿ ಅರ್ಧಕ್ಕೆ ನಿಂತಿದೆ. ಪೋಡುಗಳಲ್ಲಿ ಪೈಪ್‌ಲೈನ್ ಕಾಮಗಾರಿಗೆ ತೋಡಿರುವ ಹಳ್ಳ ಮುಚ್ಚಿಲ್ಲ. ಕಾಂಕ್ರೀಟ್ ರಸ್ತೆಯನ್ನು ಕತ್ತರಿಸಲಾಗಿದೆ. ಇದನ್ನು ಹಾಗೆ ಬಿಟ್ಟಿರುವುದರಿಂದ ಹಲವರು ಬಿದ್ದು ಗಾಯಗೊಂಡಿರುವ ಘಟನೆಯೂ ನಡೆದಿದೆ. ಈ ಕಾಮಗಾರಿಯನ್ನು ಪೂರ್ಣವಾಗಿ ಮುಗಿಸುವಂತೆ ಕ್ರಮ ವಹಿಸಬೇಕು.
ನರೇಗಾ ಕಾಮಗಾರಿಗೆ ಕ್ರಿಯಾಯೋಜನೆಯಲ್ಲಿ ಹೊರಗಿನವರಿಗೆ ಕೆಲಸ ನೀಡಲಾಗುತ್ತಿದೆ. ಜಾಬ್ ಕಾರ್ಡ್ ಹೊಂದಿರುವ ಸ್ಥಳೀಯರಿಗೆ ಕೆಲಸ ನೀಡಬೇಕು ಎಂದು ಮುಖಂಡ ವೆಂಕಟೇಶ್ ಸಲಹೆ ನೀಡಿದರು. ಇಲ್ಲಿ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಸೂಕ್ತ ಸ್ಥಳವಿಲ್ಲ. ಈಗಿರುವ ಕಟ್ಟಡ ಶಿಥಿಲವಾಗಿದೆ. ಇದನ್ನು ದುರಸ್ತಿ ಮಾಡಿಸಿಕೊಡಬೇಕು. ಡಿ. 21 ರಿಂದ 24 ರವರೆಗೆ ಪಲ್ಸ್ ಪೊಲೀಯೋ ಕಾರ್ಯಕ್ರಮ ನಡೆಯಲಿದ್ದು, ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ನೆರವು ನೀಡಬೇಕು ಎಂದು ದಾದಿಯರು ಮನವಿ ಮಾಡಿದರು. ಪ್ರತಿ ಪೋಡಿಗೂ ಕುಡಿಯುವ ನೀರು, ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸಾರ್ವಜನಿಕರು ಮನವಿ ಮಾಡಿದರು.
ಈ ಬಗ್ಗೆ ಪಿಡಿಒ ಶಶಿಕಲಾ ಎಲ್ಲ ಸಮಸ್ಯೆಗಳ ನಿವಾರಣೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ರವಾನೆ ಮಾಡಲಾಗುವುದು. ಪಂಚಾಯಿತಿ ಹಂತದ ಎಲ್ಲ ಸಮಸ್ಯೆಗಳ ನಿವಾರಣೆಗೆ ಕ್ರಮ ವಹಿಸಲಾಗುವುದು ಎಂದರು.
ಗ್ರಾಪಂ ಅಧ್ಯಕ್ಷ ಸಿ.ಡಿ. ಮಾದೇವ, ಉಪಾಧ್ಯಕ್ಷೆ ಸಾಕಮ್ಮ ಸದಸ್ಯರಾದ ರಂಗಮ್ಮ, ಕಮಲಮ್ಮ, ಪ್ರತೀಪ್‌ಕುಮಾರ್, ಮಾದಮ್ಮ, ಬಿ.ಎನ್. ಬಸವಣ್ಣ ಅರಣ್ಯ ಇಲಾಖೆಯ ನಾಗರಾಜು ಬೊಮ್ಮಯ್ಯ ಕಾರ್ಯದರ್ಶಿ ನಟರಾಜು ನಾಗೇಂದ್ರ, ಚಂದು ಸೇರಿದಂತೆ ಅನೇಕರು ಇದ್ದರು.