ಚಾಮರಾಜನಗರ ಜಿಲ್ಲೆ ಅಭಿವೃದ್ಧಿಯಲ್ಲಿ ಹಿಂದುಳಿಯಲು ತಲಾ ಆದಾಯ ಕಡಿಮೆ ಇರುವುದೂ ಕಾರಣ. ಜನರ ಜೀವನ ಮಟ್ಟ ಸುಧಾರಣೆಯಾಗದೆ ಇರಲು ಅನಕ್ಷರತೆ, ಬಡತನ, ನಿರುದ್ಯೋಗದ ಜತೆಗೆ ಕಡಿಮೆ ಕೂಲಿ ಸಿಗುವ ಕೆಲಸಗಳೂ ಪ್ರಮುಖ ಪಾತ್ರವಹಿಸುತ್ತಿವೆ. ಜಿಲ್ಲೆಯಲ್ಲಿ ಕೃಷಿ ಪ್ರಧಾನ ಉದ್ಯೋಗವಾಗಿದ್ದು, ಇದನ್ನು ಹೊರತು ಪಡಿಸಿದರೆ ಜಮೀನುಗಳಿಗೆ ಕೂಲಿಗೆ ಹೋಗುವುದು ಮತ್ತು ಕಟ್ಟಡ ನಿರ್ಮಾಣ ಕೆಲಸ ಮಾಡುವುದು ಪ್ರಧಾನವಾಗಿದೆ. ಹೀಗಾಗಿ ಚಾಮರಾಜನಗರ ಜಿಲ್ಲೆಯನ್ನು ಶ್ರಮಿಕರ ನಗರ ಎಂದು ಕರೆದರೆ ತಪ್ಪಾಗಲಾರದು. ನಗರ ಮತ್ತು ಪಟ್ಟಣ ಪ್ರದೇಶಗಳ ಪ್ರಮುಖ ವೃತ್ತಗಳಲ್ಲಿ ಮುಂಜಾನೆಯ ಆ ದಿನದ ಕೂಲಿಗಾಗಿ ಶ್ರಮಿಕರು ಗುಂಪು ಸೇರುವ ಮೂಲಕ ದಿನದ ದುಡಿಮೆಗೆ ಮುನ್ನುಡಿ ಬರೆಯುತ್ತಾರೆ. ದಿನಗೂಲಿ ಸಿಕ್ಕರೆ ಆ ದಿನ ಆದಾಯ, ಇಲ್ಲದಿದ್ದರೆ ಬರಿಗೈಯಲ್ಲಿ ವಾಪಸ್ ಬರುವ ಸ್ಥಿತಿ ಇದೆ. ಜಮೀನುಗಳಿರುವ ರೈತರಲ್ಲಿ ಹಲವರು ನೀರಿನ ಸೌಲಭ್ಯವಿಲ್ಲದೆ ಕಟ್ಟಡ ನಿರ್ಮಾಣ ಕೆಲಸಕ್ಕೆ ಹೋಗಿ ಕೂಲಿ ಮಾಡುತ್ತಿದ್ದಾರೆ. ಪಕ್ಕ ಜಿಲ್ಲೆ ಮೈಸೂರಿಗೆ ಇಲ್ಲಿನ ವಿದ್ಯಾವಂತರು ಮಾತ್ರ ಕೆಲಸಕ್ಕೆ ಹೋಗುತ್ತಿಲ್ಲ. ಕಟ್ಟಡ ನಿರ್ಮಾಣ ಕಾರ್ಮಿಕರೂ ಸಹ ಬಸ್, ರೈಲು ಹತ್ತಿ ಹೋಗಿ ಕೆಲಸ ಮಾಡಿ ಬರುತ್ತಿದ್ದಾರೆ. ಈ ಕಾರ್ಮಿಕರು ಸಂಘಟಿತರಾದ ಬಳಿಕ ಶಿಕ್ಷಣದ ಮಹತ್ವದ ಅರಿವಾಗಿದೆ. ಮಕ್ಕಳಿಗೆ ಶಿಕ್ಷಣ ಕೊಡಿಸಬೇಕೆಂಬ ತಿಳವಳಿಕೆ ಇರುವ ಕಾರಣ ಆಯಾ ಗ್ರಾಮ, ಪಟ್ಟಣಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಸೇರಿಸಿದ್ದಾರೆ. ಕಾರ್ಮಿಕರ ಬಹುಪಾಲು ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿ ಖಾಸಗಿ ಶಾಲೆಗಳ ಮಕ್ಕಳಿಗೆ ಸೆಡ್ಡು ಹೊಡೆದಿದ್ದಾರೆ.