ರಾತ್ರಿ ಪಾದಯಾತ್ರೆ ನಿಷೇಧಕ್ಕಾಗಿ ಕೋರಿಕೆ

ಚಾಮರಾಜನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಚಿವ ಕೆ.ವೆಂಕಟೇಶ್ ಮಾತನಾಡಿದರು. ಬಿಶ್ವಜೀತ್ ಮಿಶ್ರಾ, ಮಾಲತಿ ಪ್ರಿಯಾ, ಶ್ರೀರೂಪಾ, ಟಿ.ಜವರೇಗೌಡ, ಮುತ್ತುರಾಜು, ಭಾಸ್ಕರ್ ಇನ್ನಿತರರಿದ್ದರು.
ಚಾಮರಾಜನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಚಿವ ಕೆ.ವೆಂಕಟೇಶ್ ಮಾತನಾಡಿದರು. ಬಿಶ್ವಜೀತ್ ಮಿಶ್ರಾ, ಮಾಲತಿ ಪ್ರಿಯಾ, ಶ್ರೀರೂಪಾ, ಟಿ.ಜವರೇಗೌಡ, ಮುತ್ತುರಾಜು, ಭಾಸ್ಕರ್ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಇರುಳಲ್ಲಿ ತಾಳುಬೆಟ್ಟದಿಂದ ಮಹದೇಶ್ವರ ಬೆಟ್ಟಕ್ಕೆ ಸಾಗುವ ಭಕ್ತರ ಕಾಲ್ನಡಿಗೆ
  • ನಿರ್ಬಂಧಿಸಲು ಜಿಲ್ಲಾಡಳಿತಕ್ಕೆ ಮನವಿ ಮಾಡಿದ ಅರಣ್ಯ ಇಲಾಖೆ
  • ಚಿರತೆ ದಾಳಿ ಬೆನ್ನಲ್ಲೇ ನಿಯಮ ಪಾಲನೆವಾದ ಮುನ್ನಲೆಗೆ
ಚಾಮರಾಜನಗರ: ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಮಲೆ ಮಹದೇಶ್ವರ ಬೆಟ್ಟಕ್ಕೆ ತಾಳುಬೆಟ್ಟದಿಂದ ರಾತ್ರಿ ವೇಳೆ ಭಕ್ತರು ಪಾದಯಾತ್ರೆ ಮಾಡುವುದನ್ನು ನಿಷೇಧಿಸಬೇಕೆಂಬ ಅರಣ್ಯ ಇಲಾಖೆ ಮನವಿ ಮಾಡಿದೆ.
ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ಮಹದೇಶ್ವರ ಬೆಟ್ಟದ ರಂಗಸ್ವಾಮಿ ಒಡ್ಡುವಿನ ಬಳಿ ಪಾದಯಾತ್ರೆಯಲ್ಲಿ ತೆರಳುತ್ತಿದ್ದ ಮಂಡ್ಯದ ಚೀರನಹಳ್ಳಿಯ ಭಕ್ತ ಪ್ರವೀಣ್ ಬುಧವಾರ ಚಿರತೆ ದಾಳಿಗೆ ಬಲಿಯಾದರು. ಈ ಹಿನ್ನೆಲೆ ಇತರೆ ಭಕ್ತರ ಸುರಕ್ಷತೆ ದೃಷ್ಟಿಯಿಂದ ಜ.21ರ ಸಂಜೆ 6 ಗಂಟೆಯಿಂದ ಜ.24ರ ಮಧ್ಯರಾತ್ರಿವರೆಗೆ ಪಾದಯಾತ್ರೆ ಮತ್ತು ದ್ವಿಚಕ್ರ ವಾಹನಗಳು ತೆರಳಲು ನಿರ್ಬಂಧಿಸಿ ಅಪರ ಜಿಲ್ಲಾಧಿಕಾರಿ ಜವರೇಗೌಡ ಆದೇಶ ಹೊರಡಿಸಿದ್ದಾರೆ. ಈ ಆದೇಶದ ರೀತಿಯಲ್ಲೇ ತಾಳುಬೆಟ್ಟದಿಂದ ನಡುಮಲೆಯಲ್ಲಿರುವ ಮಹದೇಶ್ವರಸ್ವಾಮಿಯ ಸನ್ನಿಧಿಗೆ ಮಧ್ಯಾಹ್ನ 3.30ರಿಂದ ಬೆಳಗ್ಗೆ 7.30ವರೆಗೆ ವಾಹನಗಳಲ್ಲಿ ತೆರಳುವವರನ್ನು ಹೊರತು ಪಡಿಸಿ, ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ಅವಕಾಶ ನೀಡಬಾರದು ಎಂದು ನಗರದ ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅರಣ್ಯ ಇಲಾಖೆ ಕೇಳಿಕೊಂಡಿತು.
ಈ ಸಂಬಂಧ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ರೇಷ್ಮೆ, ಪಶು ಸಂಗೋಪನೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಗುರುವಾರ ಆಯೋಜಿಸಿದ್ದ ಅರಣ್ಯಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಮಲೆಮಹದೇಶ್ವರಬೆಟ್ಟಕ್ಕೆ ಭಕ್ತರು ಪಾದಯಾತ್ರೆ ಮೂಲಕ ಸಾಗುವುದು ತಲತಲಾಂತರಗಳಿಂದ ನಡೆದುಕೊಂಡು ಬಂದಿದ್ದು, ಪಾದಯಾತ್ರಿಗಳ ಸುರಕ್ಷತೆಗೆ ಅರಣ್ಯ ಅಧಿಕಾರಿಗಳು ಆದ್ಯತೆ ನೀಡಬೇಕಿದೆ ಎಂದರು. ಮಹದೇಶ್ವರಸ್ವಾಮಿಯ ಹೆಚ್ಚಿನ ಭಕ್ತರು ಬಡವರು ಮತ್ತು ಮಧ್ಯಮ ವರ್ಗದವರೇ ಆಗಿದ್ದು, ಅವರು ಪಾದಯಾತ್ರೆಗಳ ಮೂಲಕ ಸಾಗಿ ಬರುವುದು ವಾಡಿಕೆಯಾಗಿದೆ. ಅವರಿಗೆ ನಿರ್ಬಂಧ ವಿಧಿಸುವುದು, ಸಮಯ ನಿಗದಿಮಾಡುವುದು ಸರಿಯಾದ ನಡೆಯಲ್ಲ. ಆದರೆ ಅರಣ್ಯ ಇಲಾಖೆ ಸಮಯ ನಿಗದಿ ಮಾಡಿರುವ ಕುರಿತು ಚಿಂತನೆ ನಡೆಸಲಾಗುವುದು. ಅಲ್ಲಿಯವರೆಗೆ ಅರಣ್ಯ ಇಲಾಖೆ ಮತ್ತು ಪೊಲೀಸರು ಪಾದಯಾತ್ರಿಗಳಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿಶ್ವಜೀತ್ ಮಿಶ್ರಾ, ಚಾಮರಾಜನಗರ ವಿಭಾಗದ ಸಿಸಿಎ್ ಮಾಲತಿ ಪ್ರಿಯಾ, ಜಿಲ್ಲಾಧಿಕಾರಿ ಶ್ರೀರೂಪಾ, ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು, ಮಲೆಮಹದೇಶ್ವರ ವನ್‌ಉಜೀವಿಧಾಮದ ಡಿಸಿಎ್ ಭಾಸ್ಕರ್ ಹಾಗೂ ಇನ್ನಿತರೆ ಅಧಿಕಾರಿಗಳು ಹಾಜರಿದ್ದರು.
ಅಧಿಕಾರಿಗಳಿಗೆ ಸಚಿವರಿಂದ ತರಾಟೆ:
ಮಲೆಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಈ ಮೊದಲು ಚಿರತೆ ಓಡಾಟದ ಕುರಿತು ವಿಡಿಯೋಗಳು ಹರಿದಾಡಿದ್ದು, ಅರಣ್ಯ ಇಲಾಖೆ ಗಮನಕ್ಕೆ ಬಂದರೂ ಯಾಕೇ ಯಾವುದೇ ಕ್ರಮವಹಿಸಿಲ್ಲ. ಅರಣ್ಯ ಇಲಾಖೆ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ಸಚಿವ ಕೆ.ವೆಂಕಟೇಶ್ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ವರೆಗೂ ಎಷ್ಟು ಅರಣ್ಯ ಅಧಿಕಾರಿಗಳು ಹುಲಿ, ಚಿರತೆ ದಾಳಿಗೆ ಬಲಿಯಾಗಿದ್ದೀರಿ. ಸಾಮಾನ್ಯ ಜನರು ಮತ್ತು ರೈತರು ಮಾತ್ರ ಬಲಿಯಾಗುತ್ತಿದ್ದಾರೆ. ಅರಣ್ಯ ಇಲಾಖೆಯವರು ಪೆಟ್ರೋಲಿನ್ ಮಾಡುತ್ತಿಲ್ಲವೆ. ಇಂತಹ ಪ್ರಕರಣಗಳು ಸರ್ಕಾರಕ್ಕೆ ಮುಜುಗರವನ್ನು ಉಂಟುಮಾಡುತ್ತವೆ ಎಂದು ಬೇಸರ ವ್ಯಕ್ತಪಡಿಸಿದರು. ಸಿಸಿಎ್ ಮಾಲತಿ ಪ್ರಿಯಾ ಪ್ರತಿಕ್ರಿಯಿಸಿ, ಕಳೆದ 2 ತಿಂಗಳಿಂದ ಪ್ರಾಣಿ ಸಂಘರ್ಷಗಳು ಹೆಚ್ಚಾಗುತ್ತಿದೆ. ಇದೇ ಮೊದಲ ಬಾರಿಗೆ ಚಿರತೆ ದಾಳಿಯಿಂದ ವ್ಯಕ್ತಿ ಮೃತಪಟ್ಟಿದ್ದಾರೆ. ಚಾಮರಾಜನಗರ ವೃತ್ತದಲ್ಲಿ ಸಿಬ್ಬಂದಿಗಳ ಕೊರತೆ ಇದೆ ಎಂದರು. ಈ ವೇಳೆ ಸಚಿವರು ಮಾತನಾಡಿ, ಇರುವ ಸಿಬ್ಬಂದಿಗಳು ಮತ್ತು ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಜನರನ್ನು ಪ್ರಾಣಿಗಳಿಂದ ರಕ್ಷಣೆ ಮಾಡಬೇಕು. ಈ ತರಹದ ಅನಾಹುತಗಳು ಆಗದಂತೆ ನೋಡಿಕೊಳ್ಳಬೇಕು ಎಂದರು.
ಅರಣ್ಯ ಇಲಾಖೆ ಮನವಿ:
ತಾಳುಬೆಟ್ಟದಿಂದ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ಸಾಗುವ ಭಕ್ತರಿಗೆ ಮಧ್ಯಾಹ್ನ 3.30 ರಿಂದ ಬೆಳಗ್ಗೆ 7.30 ರವರೆಗೆ ನಿರ್ಬಂಧವನ್ನು ವಿಧಿಸಬೇಕು. ಶಿವರಾತ್ರಿ, ದೀಪಾವಳಿ ಹಾಗೂ ಇನ್ನಿತರೆ ವಿಶೇಷ ದಿನಗಳಲ್ಲಿ ಮಾತ್ರ ಅವಕಾಶವನ್ನು ಮಾಡಿಕೊಡಬೇಕು. ಪ್ರತಿ 5 ಕಿ.ಮೀ ಗೆ ಒಬ್ಬರಂತೆ 40-50 ವಾಚರ್‌ಗಳನ್ನು ವಿಶೇಷ ದಿನಗಳಲ್ಲಿ ನೇಮಿಸಬೇಕು. ಹೆಚ್ಚಿನ ಗಸ್ತು ವಾಹನಗಳನ್ನು ಇಲಾಖೆಗೆ ನೀಡಬೇಕು ಹಾಗೂ ಕಾಡುಪ್ರಾಣಿಗಳ ಚಲನವಲನವನ್ನು ಮೇಲ್ವಿಚಾರಣೆ ಮಾಡಲು 03 ಥರ್ಮಲ್ ಡ್ರೋಣ್‌ಗಳನ್ನು ನೀಡಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸಚಿವರಲ್ಲಿ ಮನವಿ ಮಾಡಿದರು.
ತಾಳುಬೆಟ್ಟದಲ್ಲಿ ಶೆಡ್ ನಿರ್ಮಾಣ:
ದೂರದ ಓರುಗಳಿಂದ ಬರುವ ಪಾದಯಾತ್ರಿಗಳು ತಾಳುಬೆಟ್ಟದಿಂದ ರಾತ್ರಿಯ ವೇಳೆಯಲ್ಲಿ ಸಂಚಾರ ಮಾಡದೆ ಅಲ್ಲೇ ಉಳಿದುಕೊಳ್ಳುವಂತೆ ತಾಳುಬೆಟ್ಟದಲ್ಲಿ ಸುಸಜ್ಜಿತವಾದ ಶೆಡ್ ನಿರ್ಮಾಣ ಮಾಡಲು ಕ್ರಮವಹಿಸಲಾಗುವುದು. ಮೆಟ್ಟಿಲುಗಳಿಗೆ ಬ್ಯಾರಿಕೇಡ್ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗುವುದು. ಎಲ್ಲೆಲ್ಲಿ ಪ್ರಾಣಿಗಳ ಓಡಾಟ ಹೆಚ್ಚಾಗಿದೆಯೋ ಅಲ್ಲಿ ಬ್ಯಾರಿಕೇಡ್ ಅಳವಡಿಸಬೇಕು. ಆ ಸ್ಥಳಗಳಲ್ಲಿ ಎಚ್ಚರಿಕೆಯ ಬೋರ್ಡ್‌ಗಳನ್ನು ದೊಡ್ಡದಾಗಿ ಪ್ರದರ್ಶಿಸಬೇಕು. ಅರಣ್ಯ ಸಚಿವರಲ್ಲಿ ಬ್ಯಾರಿಕೇಡ್ ಮಾದರಿಯನ್ನು ಬದಲಾಯಿಸುವಂತೆ ಮನವಿ ಮಾಡಿದ್ದು, ಅರಣ್ಯ ಇಲಾಖೆ ನವನವೀನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂದು ಸಚಿವರು ಸಲಹೆ ನೀಡಿದರು.
ಕಣ್ಣೀರಿಟ್ಟ ಮೃತನ ತಾಯಿ:
ಚಿರತೆ ದಾಳಿಯಿಂದ ಮೃತಪಟ್ಟ ಪ್ರವೀಣ್ ಅವರ ಕುಟುಂಬಕ್ಕೆ ಅರಣ್ಯ ಇಲಾಖೆ ವತಿಯಿಂದ 25 ಲಕ್ಷ ರೂ, ಪರಿಹಾರವನ್ನು ೋಷಣೆ ಮಾಡಲಾಗಿದ್ದು, ಗುರುವಾರ ಸಚಿವ ಕೆ.ವೆಂಕಟೇಶ್ ಅವರು 5 ಲಕ್ಷ ರೂ, ಪರಿಹಾರದ ಚೆಕ್ ಅನ್ನು ಮೃತನ ತಾಯಿಗೆ ನೀಡಿದರು. ಈ ಸಂದರ್ಭದಲ್ಲಿ ಮಗನನ್ನು ನೆನೆದು ತಾಯಿ ಕಣ್ಣೀರಿಟ್ಟರು.
ಮಲೆಮಹದೇಶ್ವರ ಬೆಟ್ಟಕ್ಕೆ ಬಡ ಮತ್ತು ಮಧ್ಯಮ ವರ್ಗದವರೇ ಹೆಚ್ಚಾಗಿ ಹೋಗುತ್ತಾರೆ. ಪಾದಯಾತ್ರೆ ಮೂಲಕ ಬರುತ್ತೇವೆ ಎಂದು ಹರಕೆ ಕಟ್ಟಿಕೊಂಡಿರುತ್ತಾರೆ. ಅವರ ಸಂಪ್ರದಾಯಗಳಿಗೆ ಚ್ಯುತಿ ಬರದಂತೆ ನೋಡಿಕೊಳ್ಳಬೇಕಿದೆ. ಪಾದಯಾತ್ರಿಗಳಿಗೆ ಸಮಯ ನಿಗದಿ ಮಾಡುವ ಸಂಬಂಧ ಚರ್ಚೆ ನಡೆಸಲಾಗವುದು.
ಕೆ.ವೆಂಕಟೇಶ್, ಜಿಲ್ಲಾ ಉಸ್ತವಾರಿ ಸಚಿವ, ಚಾಮರಾಜನಗರ
ನನಗೆ ಇದ್ದದ್ದು ಇಬ್ಬರು ಗಂಡು ಮಕ್ಕಳು, ಅದರಲ್ಲಿ ಹಿರಿಯ ಮಗನಿಗೆ ಮದುವೆ ಮಾಡಿದ್ದೇನೆ. ಕಿರಿಯ ಮಗನಾದ ಪ್ರವೀಣ್ ಜತೆಗೆ ನಾನು ವಾಸಮಾಡುತ್ತಿದ್ದೆ. ಇಬ್ಬರು ಮಕ್ಕಳು ಕೂಲಿ ಕೆಲಸ ಮಾಡುತ್ತಿದ್ದರು. ನನಗೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡಿದ್ದೇನೆ.
ಸುಶೀಲಾಮ್ಮ, ಮೃತ ಪ್ರವೀಣ್ ತಾಯಿ, ಮಂಡ್ಯ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net