ವರ್ಷದ ಬಳಿಕ ಸಾರ್ವಜನಿಕ ಶೌಚಗೃಹ ಸೇವೆಗೆ ಲಭ್ಯ

ಹನೂರಿನ ತಹಸೀಲ್ದಾರ್ ಕಚೇರಿಯ ಪ್ರವೇಶ ದ್ವಾರದ ಬಳಿ ಬಳಕೆಗೆ ಲಭ್ಯವಾಗಿರುವ ಸಾರ್ವಜನಿಕರ ಶೌಚಗೃಹ.
ಹನೂರಿನ ತಹಸೀಲ್ದಾರ್ ಕಚೇರಿಯ ಪ್ರವೇಶ ದ್ವಾರದ ಬಳಿ ಬಳಕೆಗೆ ಲಭ್ಯವಾಗಿರುವ ಸಾರ್ವಜನಿಕರ ಶೌಚಗೃಹ.
Published on
ಹನೂರು: ಪಟ್ಟಣದ ತಹಸೀಲ್ದಾರ್ ಕಚೇರಿಯ ಪ್ರವೇಶ ದ್ವಾರದ ಬಳಿ ಪಟ್ಟಣ ಪಂಚಾಯಿತಿ ವತಿಯಿಂದ ನಿರ್ಮಿಸಿರುವ ಸಾರ್ವಜನಿಕರ ಶೌಚಗೃಹ ಅಂತೂ ಇಂತು ಒಂದು ವರ್ಷದ ಬಳಿಕ ಜನರ ಸೇವೆಗೆ ಲಭ್ಯವಾಗಿದೆ.
ತಾಲೂಕು ಕೇಂದ್ರವಾದ ಹನೂರಿನ ತಹಸೀಲ್ದಾರ್ ಕಚೇರಿಗೆ ಕೆಲಸ ಕಾರ್ಯಗಳ ನಿಮಿತ್ತ ನಿತ್ಯ ನೂರಾರು ಸಾರ್ವಜನಿಕರು ಆಗಮಿಸುತ್ತಾರೆ. 5 ವರ್ಷದ ಹಿಂದೆ ಕಚೇರಿಯ ಹಿಂಭಾಗ ನಿರ್ಮಿಸಿದ್ದ ಶೌಚಗೃಹಕ್ಕೆ ನೀರಿನ ಸೌಕರ್ಯ ಕಲ್ಪಿಸದ ಪರಿಣಾಮ ಬಳಕೆಗೆ ಲಭ್ಯವಾಗಿರಲಿಲ್ಲ. ಇದರಿಂದ ಸಾರ್ವಜನಿಕರು ಶೌಚಕ್ಕಾಗಿ ಖಾಸಗಿ ಹಾಗೂ ಸರ್ಕಾರಿ ಬಸ್ ನಿಲ್ದಾಣದ ಶೌಚಗೃಹ ಹಾಗೂ ಬಯಲಿನ ಮೊರೆ ಹೋಗಬೇಕಿತ್ತು. ಇದರಿಂದ ಸಾರ್ವಜನಿಕರು ಅದರಲ್ಲೂ ಮಹಿಳೆಯರು ಹಾಗೂ ವೃದ್ಧರು ಹೆಚ್ಚಿನ ತೊಂದರೆ ಅನುಭವಿಸುವಂತಾಗಿತ್ತು. ಈ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪಪಂ ವತಿಯಿಂದ 3 ಲಕ್ಷ ರೂ. ವೆಚ್ಚದಲ್ಲಿ ತಹಸೀಲ್ದಾರ್ ಕಚೇರಿಯ ಪ್ರವೇಶ ದ್ವಾರದ ಬಳಿ ಒಂದು ವರ್ಷದ ಹಿಂದೆ ಮಹಿಳೆ ಹಾಗೂ ಪುರುಷರಿಗೆ ಪತ್ಯೇಕವಾಗಿ ಶೌಚಗೃಹ ನಿರ್ಮಿಸಲಾಗಿತ್ತು. ಆದರೆ ನೀರಿನ ಸೌಕರ್ಯ ಕಲ್ಪಿಸದ ಪರಿಣಾಮ ಬೀಗ ಹಾಕಲಾಗಿತ್ತು. ಈ ಬಗ್ಗೆ ಇತ್ತೀಚೆಗೆ ಶಾಸಕ ಎಂ.ಆರ್ ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕರು ಗಮನಕ್ಕೆ ತಂದಿದ್ದರು. ಶಾಸಕರು ಈ ಸಂಬಂಧ ಅಗತ್ಯ ಕ್ರಮವಹಿಸಿ ಶೌಚಗೃಹಕ್ಕೆ ನೀರಿನ ಸೌಕರ್ಯ ಕಲ್ಪಿಸಿ ಸಾರ್ವಜನಿಕರ ಬಳಕೆಗೆ ನೀಡುವಂತೆ ಪಪಂ ಅಧಿಕಾರಿಗಳಿಗೆ ಸೂಚಿಸಿದ್ದರು. ಅಗತ್ಯ ಕ್ರಮವಹಿಸಿದ ಅಧಿಕಾರಿಗಳು ಸಂಬಂಧಪಟ್ಟವರಿಗೆ ಸೂಚಿಸಿ ನೀರಾವರಿ ಸೌಕರ್ಯವನ್ನು ಕಲ್ಪಿಸುವುದರ ಮೂಲಕ ಕಳೆದ 3 ದಿನಗಳಿಂದ ಸಾರ್ವಜನಿಕರ ಸೇವೆಗೆ ಲಭ್ಯವಾಗಿದ್ದು, ಜನರು ಬಳಕೆ ಮಾಡುತ್ತಿದ್ದಾರೆ. ಇದರಿಂದ ಈವರೆಗೂ ಶೌಚಕ್ಕಾಗಿ ಅನುಭವಿಸುತ್ತಿದ್ದ ಸಮಸ್ಯೆಯಿಂದ ಸಾರ್ವಜನಿಕರು ನಿಟ್ಟುಸಿರು ಬಿಟ್ಟಂತಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net