ಸಮರ್ಪಕ ಬಸ್ ಸೌಕರ್ಯ ಒದಗಿಸಿ

 ಶಾಗ್ಯ ಗ್ರಾಮದಲ್ಲಿ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಗ್ರಾಮಸ್ಥರು ಸಮಸ್ಯೆ ಹೇಳಿಕೊಂಡರು.ಉಮೇಶ್,  ರಂಗಸ್ವಾಮಿ, ವಿಷ್ಣುಕುಮಾರ್ ಇತರರಿದ್ದರು.
ಶಾಗ್ಯ ಗ್ರಾಮದಲ್ಲಿ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಗ್ರಾಮಸ್ಥರು ಸಮಸ್ಯೆ ಹೇಳಿಕೊಂಡರು.ಉಮೇಶ್, ರಂಗಸ್ವಾಮಿ, ವಿಷ್ಣುಕುಮಾರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಗ್ಯ ಗ್ರಾಮದ ಗ್ರಾಮಸ್ಥರ ಒತ್ತಾಯ
  • ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ
ಹನೂರು: ಗ್ರಾಮಕ್ಕೆ ಸಮರ್ಪಕ ಬಸ್ ಸೌಕರ್ಯ ಒದಗಿಸುವಂತೆ ಹಾಗೂ ಗೃಹಲಕ್ಷ್ಮೀ ಯೋಜನೆಯ ಹಣ ನೀಡುವಾಗ ಪಡೆಯುತ್ತಿರುವ ಕಮಿಷನ್‌ಗೆ ಕಡಿವಾಣ ಹಾಕುವಂತೆ ಶುಕ್ರವಾರ ತಾಲೂಕಿನ ಶಾಗ್ಯ ಗ್ರಾಮದಲ್ಲಿ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದರು.
ಈ ವೇಳೆ ಗ್ರಾಮಸ್ಥರು ಮಾತನಾಡಿ, ಗ್ರಾಮದಿಂದ ಹೆಚ್ಚಿನ ಮಕ್ಕಳು ಹನೂರು ಹಾಗೂ ಕೊಳ್ಳೇಗಾಲದ ಶಾಲಾ, ಕಾಲೇಜಿಗೆ ತೆರಳುತ್ತಾರೆ. ಆದರೆ ನಿಗದಿತ ವೇಳೆಗೆ ಬಸ್ ಆಗಮಿಸುತ್ತಿಲ್ಲ. ಇದರಿಂದ ಖಾಸಗಿ ಬಸ್‌ಗಳ ಮೊರೆ ಹೋಗಬೇಕಾದ ಸ್ಥಿತಿ ಇದ್ದು, ಮಕ್ಕಳು ನಿತ್ಯ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಇದೀಗ ಪರೀಕ್ಷೆ ಸಮಯವಾದ್ದರಿಂದ ಸಕಾಲಕ್ಕೆ ಬಸ್ ಬರುವಂತೆ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಇನ್ನು ಈ ಹಿಂದೆ ಗ್ರಾಮದಿಂದ ಕುಶಾಲನಗರಕ್ಕೆ ಬಸ್ ಸಂಚಾರವಿತ್ತು. ಆದರೀಗ ಸ್ಥಗಿತಗೊಳಿಸಲಾಗಿದೆ. ಇದರಿಂದ ಜನರು ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಈ ಬಗ್ಗೆ ಕ್ರಮವಹಿಸುವಂತೆ ಒತ್ತಾಯಿಸಿದರು.
ಇದಕ್ಕೆ ಸಾರಿಗೆ ಬಸ್ ಡಿಪೋ ವ್ಯವಸ್ಥಾಪಕ ಭೋಗನಾಯಕ ಅವರು ಪ್ರತಿಕ್ರಿಯಿಸಿ, ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ಸಕಾಲಕ್ಕೆ ಬಸ್ ಸೌಕರ್ಯ ಕಲ್ಪಿಸಲಾಗುವುದು. ಇನ್ನು ಕುಶಾಲನಗರಕ್ಕೆ ಸಂಚರಿಸುತ್ತಿದ್ದ ಬಸ್ ಸ್ಥಗಿತಗೊಂಡಿರುವ ಬಗ್ಗೆ ಮನವಿ ಸಲ್ಲಿಸಿದ್ದಲ್ಲಿ ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ತೊಮಿಯಾರ್‌ಪಾಳ್ಯದ ವಿನ್ಸೆಂಟ್ ಎಂಬುವರು ಮಾತನಾಡಿ, ಗ್ರಾಮದಲ್ಲಿ ಮಹಿಳೆಯರು ಗೃಹಲಕ್ಷ್ಮೀ ಯೋಜನೆ ಹಣ ಪಡೆಯಬೇಕಾದರೆ ಇಲ್ಲಿನ ಪೋಸ್ಟ್‌ಮೆನ್ ಕಮಿಷನ್ ಪಡೆಯುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಇಲ್ಲಸಲ್ಲದ ಕಾರಣ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಈ ಬಗ್ಗೆ ಅಗತ್ಯ ಕ್ರಮವಹಿಸುವುದಾಗಿ ಸಿಡಿಪಿಒ ಅಂಬಿಕಾ ತಿಳಿಸಿದರು.
ಯೋಜನೆಗಳು ಫಲಾನುಭವಿಗಳಿಗೆ ಸಿಗಬೇಕು: ಗ್ಯಾರಂಟಿ ಯೋಜನಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಪಾಳ್ಯ ರಾಚಯ್ಯ ಮಾತನಾಡಿ, ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಯು ಜನರಿಗೆ ಅನುಕೂಲವಾಗುತ್ತಿದ್ದು, ಜನಮನ್ನಣೆ ಗಳಿಸಿದೆ. ಸಮರ್ಪಕ ಅನುಷ್ಠಾನಕ್ಕಾಗಿ ಸಮಿತಿಯನ್ನು ರಚಿಸಲಾಗಿದೆ. ಈ ಹಿಂದೆ ತಾಲೂಕು ಕೇಂದ್ರದಲ್ಲಿ ಸಭೆಯನ್ನು ನಡೆಸಲಾಗುತ್ತಿತ್ತು. ಇದೀಗ ಗ್ರಾಮ ಮಟ್ಟದಲ್ಲಿ ಸಭೆಯನ್ನು ಆಯೋಜಿಸಲಾಗುತ್ತಿದೆ. ಆದ್ದರಿಂದ ಯೋಜನೆಯ ಫಲಾನುಭವಿಗಳು ಸಮಸ್ಯೆಗಳಿದ್ದಲ್ಲಿ ತಿಳಿಸಬಹುದು. ಅಧಿಕಾರಿಗಳ ಸಮಸ್ಯೆಯನ್ನು ಬಗಹರಿಸುವುದರ ಮೂಲಕ ಆರ್ಹ ಪ್ರತಿ ಫಲಾನುಭವಿಗೆ ಯೋಜನೆಗಳು ಸಿಗಬೇಕು ಎಂದು ತಿಳಿಸಿದರು.
ತಾಪಂ ಇಒ ಉಮೇಶ್, ಸೆಸ್ಕ್ ಎಇಇ ರಂಗಸ್ವಾಮಿ, ಆಹಾರ ಶಿರಸ್ತೇದಾರ್ ವಿಷ್ಣುಕುಮಾರ್, ಸಮಿತಿ ಸದಸ್ಯರಾದ ಶೇಖರ್, ಅರುಣ್‌ಕುಮಾರ್, ಪಿಡಿಒ ಸಿದ್ದಪ್ಪ ಹಾಗೂ ಇನ್ನಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net