ವಡಕೆಹಳ್ಳದಲ್ಲಿ ಅಹೋರಾತ್ರಿ ಧರಣಿ ಕೈಗೊಂಡಿರುವ ರೈತರು ಭಾನುವಾರ ನೇಗಿಲು ಹಾಗೂ ಖಾಲಿ ಬಿಂದಿಗೆಯನ್ನಿಡಿದು ಪ್ರತಿಭಟಿಸಿದರು. ಅರ್ಪುದರಾಜ್, ಜೋಸೆಫ್, ಸಗಾಯಮೇರಿ, ಸೆಲ್ವಮ್ಮ ಇತರರು ಇದ್ದರು.
ಹನೂರು:ಏತ ನೀರಾವರಿ ಯೋಜನೆಯನ್ನು ರೂಪಿಸುವಂತೆ ಆಗ್ರಹಿಸಿ ತಾಲೂಕಿನ ವಡಕೆಹಳ್ಳದಲ್ಲಿ ಕಳೆದ 49 ದಿನಗಳಿಂದ ರೈತರು ಕೈಗೊಂಡಿರುವ ಅಹೋರಾತ್ರಿ ಧರಣಿಯಲ್ಲಿ ಭಾನುವಾರ ರೈತ ಮಹಿಳೆಯರು ಖಾಲಿ ಬಿಂದಿಗೆಯನ್ನಿಡಿದು ಪ್ರತಿಭಟನೆ ನಡೆಸಿದರು.
ಏತ ನೀರಾವರಿ ಯೋಜನೆಯನ್ನು ರೂಪಿಸಬೇಕು ಎನ್ನುವುದು ಧರಣಿನಿರತ ರೈತರ ಮುಖ್ಯ ಬೇಡಿಕೆ. ಆದರೆ 49 ದಿನ ಕಳೆದರೂ ಈಡೇರಿಲ್ಲ. ಇದರಿಂದ ಬೇಸತ್ತ ಧರಣಿನಿರತ ರೈತರು ಗ್ರಾಮದ ಮುಖ್ಯರಸ್ತೆಗೆ ಆಗಮಿಸಿದರು. ಈ ವೇಳೆ ರೈತರು ನೇಗಿಲು ಹೊತ್ತರೆ, ಮಹಿಳೆಯರು ಖಾಲಿ ಬಿಂದಿಗೆಯನ್ನಿಡಿದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮೆರವಣಿಗೆಯ ಮೂಲಕ ಧರಣಿ ಸ್ಥಳಕ್ಕೆ ಆಗಮಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷ ಅರ್ಪುದರಾಜ್, ಕಾರ್ಯದರ್ಶಿ ಲೂರ್ದುಸ್ವಾಮಿ, ರೈತ ಮುಖಂಡರಾದ ಜೋಸೆಫ್, ಜಪಮಾಲೆ, ಸಂದನಮೇರಿ, ರೋಜಾ, ಸಗಾಯಮೇರಿ, ಸೂಸೈಯಮ್ಮಾಳ್, ಸೆಲ್ವಮ್ಮ ಹಾಗೂ ಇನ್ನಿತರರು ಇದ್ದರು.