ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಿ ಮಂಗಳ ವಾರ ಕೊಳ್ಳೇಗಾಲ ಪಟ್ಟಣದಲ್ಲಿ ರೈತ ಸಂಘದ ಪದಾಧಿಕಾರಿಗಳು ತಾಲೂಕು ಕಚೇರಿ ಎದುರು ಪ್ರತಿಭಟಿಸಿದರು. ಮುಖಂಡರಾದ ಅಣಗಳ್ಳಿ ಬಸವರಾಜು, ಷಣ್ಮುಖ ಸ್ವಾಮಿ, ನಾಗರಾಜು, ಮೋಳೆ ರಾಮಕೃಷ್ಣ, ವೀರಭದ್ರಸ್ವಾಮಿ ಇತರರು ಇದ್ದರು.
ಕೊಳ್ಳೇಗಾಲ: ಅಭಿವೃದ್ಧಿ ಹೆಸರಿನಲ್ಲಿ ಫಲವತ್ತಾದ ರೈತರ ಜಮೀನನ್ನು ಅಕ್ರಮವಾಗಿ ಪಡೆಯಲು ಕೈಗೊಂಡಿರುವ ಬಿಡದಿ ಟೌನ್ ಶಿಪ್ ಯೋಜನೆಯನ್ನು ವಿರೋಧಿಸಿ ಮಂಗಳವಾರ ಪಟ್ಟಣದಲ್ಲಿ ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಜಮಾಯಿಸಿದ ರೈತ ಸಂಘ ಪದಾಧಿಕಾರಿಗಳು ಸರ್ಕಾರದ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು. ಬಳಿಕ ಪ್ರವಾಸಿ ಮಂದಿರ ವೃತ್ತ, ಎಂಜಿಎಸ್‌ವಿ ಕಾಲೇಜು ರಸ್ತೆ, ಗುರುಕಾರ್ ವೃತ್ತ, ಡಾ.ರಾಜಕುಮಾರ್ ರಸ್ತೆ ಮೂಲಕ ಸಾಗಿ ತಾಲೂಕು ಕಚೇರಿ ತಲುಪಿದರು. ನಂತರ ರೈತರ ಹಕ್ಕೊತ್ತಾಯವನ್ನು ರಾಜ್ಯಪಾಲರಿಗೆ ತಹಸೀಲ್ದಾರ್ ಬಸವರಾಜು ಅವರ ಮೂಲಕ ಸಲ್ಲಿಸಿದರು.
ಬಿಡದ ಟೌನ್ ಶಿಪ್ ಯೋಜನೆಯನ್ನು ಸರ್ಕಾರ ನಿಲ್ಲಿಸಬೇಕು. ಅಭಿವೃದ್ಧಿ ಹೆಸರಿನಲ್ಲಿ ಫಲವತ್ತಾದ ಭೂಮಿಯನ್ನು ಅತಿಕ್ರಮಣ ಮಾಡಬಾರದು. ಗದ್ದೆ, ಸಾವಿರಾರು ತೆಂಗಿನ ಮರಗಳು, ಅಡಿಕೆ ಮರಗಳು ಹಾಗೂ ಇನ್ನಿತರ ವೃಕ್ಷಗಳನ್ನು ಕಡಿಯಬಾರದು. ಇದ್ದರಿಂದ ಆಹಾರ ಧಾನ್ಯ ಕೊರತೆ ಎದುರಾಗುತ್ತದೆ. ಸಮೃದ್ಧವಾಗಿರುವ ಕೃಷಿ ಭೂಮಿಯನ್ನು ಸ್ವಾಧೀನ ಮಾಡಬಾರದು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಈ ಯೋಜನೆಗೆ ಬಳಸುವ ಹಣವನ್ನು ರಾಜ್ಯದಲ್ಲಿ ಕೆರೆ ತುಂಬಿಸುವ ಯೋಜನೆಗೆ ವಿನಿಯೋಗ ಮಾಡಬೇಕು ಎಂದು ಆಗ್ರಹಿಸಿದರು. ಸರ್ಕಾರ ಜಮೀನುಗಳನ್ನು ವಶಪಡಿಸಿಕೊಳ್ಳುವುದನ್ನು ತಕ್ಷಣವೇ ಕೈಬಿಡುವ ಮೂಲಕ ಬಿಡದಿಯಲ್ಲಿ ಟೌನ್‌ಶಿಪ್ ವಿರುದ್ಧ ಹೋರಾಟ ನಡೆಸುತ್ತಿರುವ ರೈತರಿಗೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲವಾದರೆ ರಾಜ್ಯಾದ್ಯಂತ ರೈತರು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.