ಯುಜಿಸಿ ನಿಯಮ ಜಾರಿಗೆ ಒತ್ತಾಯಿಸಿ ಪ್ರತಿಭಟನೆ

ಚಾಮರಾಜನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ವಿವಿಧ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಉಮೇಶ್ ಕುದರ್, ಸಿ.ಎಂ.ಕೃಷ್ಣಮೂರ್ತಿ, ಸಿ.ಕೆ.ಮಂಜುನಾಥ್, ಗಣೇಶ್ ಪ್ರಸಾದ್, ಮಂಜು ಕೋಡಿಉಗನೆ, ಶಿವರಾಜು, ಕಾಗಲವಾಡಿ ಶಿವಸ್ವಾಮಿ, ಎಸ್.ಪಿ.ಮಹೇಶ್, ವಾಸು ಹೊಂಡರಬಾಳು, ಸುನೀಲ್ ಇನ್ನಿತರರಿದ್ದರು.
ಚಾಮರಾಜನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ವಿವಿಧ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಉಮೇಶ್ ಕುದರ್, ಸಿ.ಎಂ.ಕೃಷ್ಣಮೂರ್ತಿ, ಸಿ.ಕೆ.ಮಂಜುನಾಥ್, ಗಣೇಶ್ ಪ್ರಸಾದ್, ಮಂಜು ಕೋಡಿಉಗನೆ, ಶಿವರಾಜು, ಕಾಗಲವಾಡಿ ಶಿವಸ್ವಾಮಿ, ಎಸ್.ಪಿ.ಮಹೇಶ್, ವಾಸು ಹೊಂಡರಬಾಳು, ಸುನೀಲ್ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಾಲೂಕು ಅಂಬೇಡ್ಕರ್ ಮಹಾಸಭಾದ ವತಿಯಿಂದ ಧರಣಿ
  • ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಲು ಒತ್ತಾಯ
  • ಯಥಾವತ್ತಾಗಿ ಯುಜಿಸಿ ಕಾಯ್ದೆ ಜಾರಿಗೊಳಿಸಲು ಆಗ್ರಹ
ಚಾಮರಾಜನಗರ: ದೇಶದ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್ಸಿ, ಎಸ್ಟಿ, ಓಬಿಸಿ, ಅಂಗವಿಕಲರು ಹಾಗೂ ಮಹಿಳೆಯರಿಗೆ ರಕ್ಷಣೆ ನೀಡುವಂತಹ ಯುಜಿಸಿ ನಿಯಮವನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಆಗ್ರಹಿಸಿ ತಾಲೂಕು ಡಾ.ಬಿ.ಆರ್.ಅಂಬೇಡ್ಕರ್ ಮಹಾಸಭಾ, ಅಹಿಂದ ಸಂಘಟನೆಗಳ ಒಕ್ಕೂಟ, ಕಾನ್ಶಿರಾಂ ವಿದ್ಯಾರ್ಥಿ ಸಂಘಟನೆ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಶ್ರೋಈಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಹೊರಟು ಶ್ರೀಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮಾರ್ಗವಾಗಿ ಜಿಲ್ಲಾಡಳಿತ ಭವನಕ್ಕೆ ಸಾಗಿ ಕೆಲಕಾಲ ಪ್ರತಿಭಟನೆ ನಡೆಸಿದರು. ವಿವಿಧ ೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಲೂಕು ಡಾ.ಬಿ.ಆರ್.ಅಂಬೇಡ್ಕರ್ ಮಹಾಸಭಾ ಅಧ್ಯಕ್ಷ ಉಮೇಶ್ ಕುದರ್ ಮಾತನಾಡಿ, ದೇಶದಲ್ಲಿರುವ ಬಹುಪಾಲು ವಿಶ್ವವಿದ್ಯಾಲಯಗಳಲ್ಲಿ ಎಸ್ಸಿ, ಎಸ್ಟಿ, ಓಬಿಸಿ ಹಾಗೂ ಮಹಿಳಾ ವಿದ್ಯಾರ್ಥಿಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸಲಾಗುತ್ತಿದೆ. ಇದರ ಪರಿಣಾಮ 20,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣವನ್ನು ಮೊಟಕುಗೊಳಿಸಿದ್ದಾರೆ. ಹೈದರಾಬಾದ್ ವಿಶ್ವವಿದ್ಯಾಲಯದ ರೋಹಿತ್ ಮೇಮುಲ, ಪಾಯಲ್ ತಾಡ್ವಿ ಸೇರಿದಂತೆ 130 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಮತ್ತು ಆತ್ಮಹತ್ಯೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಯುಜಿಸಿ ನಿಯಮಗಳನ್ನು ಜಾರಿಗೊಳಿಸಿತ್ತು. ಆದರೆ ಸುಪ್ರೀಂ ಕೋರ್ಟ್ ಎಸ್ಸಿ, ಎಸ್ಟಿ, ಓಬಿಸಿಗಳಿಗೆ ರಕ್ಷಣೆ ನೀಡುವ ಕಾನೂನಿಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಿ ಯುಜಿಸಿ ಕಾನೂನನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ವಕೀಲ ಮಹೇಂದ್ರ ಮಾತನಾಡಿ, ದೇಶದ ಗಡಿಕಾಯುತ್ತಿರುವ ಸೈನಿಕರಿಗಿಂತಲೂ ವಿಶ್ವವಿದ್ಯಾಲಯಗಳಲ್ಲಿ ಹೆಚ್ಚು ಜನರು ಸಾಯುತ್ತಿದ್ದಾರೆ. ಯುಜಿಸಿ ಹೊಸ ನಿಯಮಗಳಿಂದ ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ದೌರ್ಜನ್ಯಗಳಿಗೆ ತಡೆಬೀಳಲಿದೆ. ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಸಮಿತಿ ಸ್ಥಾಪನೆ ಮಾಡುವುದರಿಂದ ವಿದ್ಯಾರ್ಥಿಗಳ ಕುಂದುಕೊರತೆಯನ್ನು ಬಗೆಹರಿಸಿಕೊಳ್ಳಬಹುದಾಗಿದೆ. ಯುಜಿಸಿ ಜಾರಿಗೊಳಿಸುವಂತೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಸಂಘಟಿತರಾಗಬೇಕಿದೆ ಎಂದರು.
ಪ್ರತಿಭಟನೆಯಲ್ಲಿ ಮಹಾಸಭಾ ಕಾರ್ಯಾಧ್ಯಕ್ಷ ಸಿ.ಕೆ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಗಣೇಶ್ ಪ್ರಸಾದ್, ಮುಖಂಡ ಮಂಜು ಕೋಡಿಉಗನೆ, ಶಿವರಾಜು, ಕಾಗಲವಾಡಿ ಶಿವಸ್ವಾಮಿ, ಎಸ್.ಪಿ.ಮಹೇಶ್, ಕಾನ್ಶಿರಾಂ ವಿದ್ಯಾರ್ಥಿ ಸಂಘದ ವಾಸು ಹೊಂಡರಬಾಳು, ಸುನೀಲ್, ದೇವಾಲಪುರ ಶಿವಣ್ಣ, ದಡದಹಳ್ಳಿ ಶಂಕರ್ ಹಾಗೂ ಇತರರು ಭಾಗವಹಿಸಿದ್ದರು.
ದೇಶದ ಪ್ರತಿಯೊಂದು ಕ್ಷೇತ್ರದಲ್ಲೂ ಜಾತಿವ್ಯವಸ್ಥೆ ತಾಂಡವಾಡುತ್ತಿದೆ. ವಿಶ್ವವಿದ್ಯಾಲಯಗಳಲ್ಲಿ ಇರುವ ಜಾತಿವ್ಯವಸ್ಥೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯುಜಿಸಿ ಕಾಯ್ದೆ ಅತ್ಯಂತ ಅಗತ್ಯವಾಗಿದೆ. ಕೇಂದ್ರ ಬಿಜೆಪಿ ಸರ್ಕಾರ ಮಧ್ಯೆ ಪ್ರವೇಶಿಸಿ ಯುಜಿಸಿ-2026 ಕಾನೂನು ಜಾರಿಗೊಳಿಸಬೇಕು.
-ಸಿ.ಎಂ.ಕೃಷ್ಣಮೂರ್ತಿ, ಗೌರವಾಧ್ಯಕ್ಷ, ತಾಲೂಕು ಅಂಬೇಡ್ಕರ್ ಮಹಸಭಾ, ಚಾಮರಾಜನಗರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net