ನಗರದ ಶ್ರೀ ಭುವನೇಶ್ವರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ
ಚಾಮರಾಜನಗರ:ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಹೊರಗುತ್ತಿಗೆ ನೌಕರರಿಗೆ ಪರಿಷ್ಕೃತ ಕನಿಷ್ಠ ವೇತನವನ್ನು ಕೂಡಲೇ ಜಾರಿಗೊಳಿಸುವಂತೆ ಒತ್ತಾಯಿಸಿ ಎಐಯುಟಿಯುಸಿ ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಶ್ರೀ ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕೆಲಕಾಲ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಎಐಯುಟಿಯುಸಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ್ ಮೇಟಿ ಮಾತನಾಡಿ, ರಾಜ್ಯದ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬ ಹೊರಗುತ್ತಿಗೆ ನೌಕರರಿಗೂ ಕನಿಷ್ಠ ವೇತನ ಜಾರಿಗೊಳಿಸಬೇಕು ಎಂದು ಹಲವಾರು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಅದರ ಪ್ರತಿಫಲವಾಗಿ ನ್ಯಾಯಾಲಯ ಹೊರಗುತ್ತಿಗೆ ನೌಕರರಿಗೆ ಕನಿಷ್ಠ ವೇತನವನ್ನು ನೀಡುವಂತೆ ಆದೇಶಿಸಿದೆ. ಆದರೆ ರಾಜ್ಯ ಸರ್ಕಾರ ಕನಿಷ್ಠ ವೇತನ ಅಧಿಸೂಚನೆಯನ್ನು ಅಮಾನತಿನಲ್ಲಿಟ್ಟಿರುವುದು ಅತ್ಯಂತ ಖಂಡನೀಯ ಎಂದರು.
ಸುಮಾರು ಒಂಬತ್ತು ವರ್ಷಗಳಿಂದ ಕನಿಷ್ಠ ವೇತನ ಪರಿಷ್ಕರಣೆಗೆ ಕಾಯುತ್ತಿರುವ ಲಕ್ಷಾಂತರ ಹೊರಗುತ್ತಿಗೆ ಕಾರ್ಮಿಕರ ಬದುಕು ಅತಂತ್ರವಾಗದಂತೆ ಸರ್ಕಾರ ನೋಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಕನಿಷ್ಠ ವೇತನ ಅಧಿಸೂಚನೆಯನ್ನು ಅಮಾನತಿನಲ್ಲಿ ಇಡುವ ಹಣಕಾಸು ಇಲಾಖೆಯ ಪ್ರಸ್ತಾವನೆಯನ್ನು ತಕ್ಷಣ ತಿರಸ್ಕರಿಸಬೇಕು. ಅನುಷ್ಠಾನಕ್ಕೆ ಅಗತ್ಯವಿರುವ ಹೆಚ್ಚುವರಿ ಅನುದಾನವನ್ನು ತಕ್ಷಣ ಬಿಡುಗಡೆಗೊಳಿಸಬೇಕು. ಕನಿಷ್ಠ ವೇತನ ನೀಡದ ಗುತ್ತಿಗೆದಾರರು ಹಾಗೂ ಸಂಸ್ಥೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ಕಾರ್ಯದರ್ಶಿ ವಿ.ಯಶೋಧರ ಮಾತನಾಡಿ, ಅಖಿಲ ಭಾರತ ಮಟ್ಟದಲ್ಲಿ ಹಲವಾರು ಸಂಘಟನೆಗಳು ಕನಿಷ್ಠ ವೇತನ ಜಾರಿಗೆ ಹೋರಾಟ ಮಾಡಿದೆ. ಈ ಹಿಂದಿನ ಬಿಜೆಪಿ ಸರ್ಕಾರ ಕನಿಷ್ಠ ವೇತನ ಜಾರಿಗೆ ಮುಂದಾಗಿದ್ದರೂ, ಯಾವುದೇ ಪ್ರಯೋಜನವಾಗಿರಲಿಲ್ಲ. ಪ್ರಸ್ತುತ ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಕೂಡಲೇ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಕಲರ್ ಟ್ಯೂನ್ ಕಂಪನಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಮಾತನಾಡಿ, ಬಂಡವಾಳಶಾಹಿಗಳ ಒತ್ತಡಕ್ಕೆ ಮಣಿದು ಸರ್ಕಾರ ಪರಿಷ್ಕೃತ ಕನಿಷ್ಠ ವೇತನವನ್ನು ತಡೆ ಹಿಡಿದಿದ್ದಾರೆ. ಈ ನಿಟ್ಟಿನಲ್ಲಿ ಕಾರ್ಮಿಕರು ಒಂದಾಗಿ ಹೋರಾಟ ರೂಪಿಸಬೇಕಿದೆ. ರಾಜ್ಯ ಸರ್ಕಾರ ಪ್ರತಿಯೊಂದು ಕಾರ್ಮಿಕ ಕುಟುಂಬಗಳಿಗೂ ನ್ಯಾಯ ಒದಗಿಸಬೇಕಿದೆ ಎಂದರು.
ಪ್ರತಿಭಟನೆಯಲ್ಲಿ ಕಾರ್ಮಿಕರಾದ ದಡದಹಳ್ಳಿ ಕುಮಾರ್, ಕುಮಾರ್ ಸೋಮವಾರಪೇಟೆ, ರವಿ, ಬಂಗಾರಸ್ವಾಮಿ, ಬೀರೇಗೌಡ, ಡಿ.ಮಹದೇವ್, ಪ್ರದೀಪ್, ಮಂಜು, ವಸಂತಮ್ಮ, ನಿರ್ಮಲಾ, ಸುಷ್ಮಾ, ಮಹದೇವಮ್ಮ, ಸಣ್ಣಮ್ಮ, ಮಹದೇವಸ್ವಾಮಿ, ಭಾನು, ಕೃಷ್ಣಮೂರ್ತಿ, ವೆಂಕಟೇಶ್, ಶರತ್, ಮಾದೇಶ್ ಹಾಗೂ ಇತರರು ಭಾಗವಹಿಸಿದ್ದರು.