ಟಿಪ್ಪರ್‌ಗಳ ಹಾವಳಿ ತಡೆಗೆ ಆಗ್ರಹಿಸಿ ಪ್ರತಿಭಟನೆ

ಗುಂಡ್ಲುಪೇಟೆ ತಾಲೂಕಿನ ಶಿಂಡನಪುರ ಗ್ರಾಮದಲ್ಲಿ ಟಿಪ್ಪರ್ ಆರ್ಭಟ ನಿಲ್ಲಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಎಸ್.ಜಯಕುಮಾರ್, ಸ್ನೇಹರಾಜ್, ಗಾಯತ್ರಿ, ಪುಷ್ಪಾ, ರವಿಕುಮಾರ್ ಇದ್ದರು.
ಗುಂಡ್ಲುಪೇಟೆ ತಾಲೂಕಿನ ಶಿಂಡನಪುರ ಗ್ರಾಮದಲ್ಲಿ ಟಿಪ್ಪರ್ ಆರ್ಭಟ ನಿಲ್ಲಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಎಸ್.ಜಯಕುಮಾರ್, ಸ್ನೇಹರಾಜ್, ಗಾಯತ್ರಿ, ಪುಷ್ಪಾ, ರವಿಕುಮಾರ್ ಇದ್ದರು.
Published on
ಗುಂಡ್ಲುಪೇಟೆ: ಚಿಕ್ಕತುಪ್ಪೂರು ಸಮೀಪ ಟಿಪ್ಪರ್ ಮತ್ತು ಶಾಲಾ ವಾಹನ ಡಿಕ್ಕಿಯಾಗಿ ವಿದ್ಯಾರ್ಥಿಗಳ ಕೈ ಕಾಲುಗಳಿಗೆ ಪೆಟ್ಟುಬಿದ್ದಿರುವ ಪ್ರಕರಣ ತಾಲೂಕಿನ ಜನತೆಯ ಸಹನೆಯ ಕಟ್ಟೆಯೊಡೆಯುವಂತೆ ಮಾಡಿದ್ದು, ಬುಧವಾರ ನಾಲ್ಕು ಕಡೆ ಪ್ರತ್ಯೇಕ ಪ್ರತಿಭಟನೆ ನಡೆಯಿತು.
ಶಿಂಡನಪುರ ಗ್ರಾಮಸ್ಥರು ತಮ್ಮ ಗ್ರಾಮದ ಗೇಟ್‌ನಲ್ಲಿ ಹಾಗೂ ರೈತ ಸಂಘಟನೆ ಕಾರ್ಯಕರ್ತರು ಚಿಕ್ಕತುಪ್ಪೂರು ಬಳಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದರೆ, ವಕೀಲರು ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಟಿಪ್ಪರ್ ಸಂಚಾರ ಬಂದ್ ಮಾಡುವಂತೆ ಒತ್ತಾಯಿಸಿದರು.
ಶಿಂಡನಪುರ ಗೇಟ್‌ನಲ್ಲಿ ಟಿಪ್ಪರ್ ಹಾವಳಿ ನಿಯಂತ್ರಿಸದ ಜಿಲ್ಲಾಡಳಿತದ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಸ್ವಲ್ಪಹೊತ್ತಿನ ನಂತರ ಸ್ಥಳಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು, ಸಾರಿಗೆ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ಓವರ್‌ಲೋಡ್ ಟಿಪ್ಪರ್ ಹಾವಳಿ ತಡೆಗಟ್ಟಬೇಕು, ಘಟನೆಯಲ್ಲಿ ಗಂಭೀರ ಸ್ವರೂಪದ ಗಾಯಗೊಂಡ ವಿದ್ಯಾರ್ಥಿಗಳಿಗೆ ಸೂಕ್ತ ಪರಿಹಾರ ನೀಡಬೇಕು. ತಾಲೂಕಿನಲ್ಲಿ ನಿಯಮಬಾಹಿರವಾಗಿ ಓವರ್ ಲೋಡ್ ಟಿಪ್ಪರ್ ಸಂಚಾರ ಹೆಚ್ಚಾಗುತ್ತಿದೆ. ಆದರೂ ಜಿಲ್ಲಾಡಳಿತ ಕಣ್ಣುಮುಚ್ಚಿ ಕುಳಿತಿದ್ದರಿಂದ ಅಮಾಯಕರು ಬಲಿಯಾಗುತ್ತಿದ್ದಾರೆ. ಆದ್ದರಿಂದ ಕೂಡಲೇ ಅಕ್ರಮ ವಾಹನ ಸಂಚಾರದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಗಂಟೆಗಟ್ಟಲೆ ಕಾದರೂ ಅಧಿಕಾರಿಗಳು ಆಗಮಿಸದ ಹಿನ್ನೆಲೆಯಲ್ಲಿ ರಸ್ತೆತಡೆ ನಡೆಸಲು ಮುಂದಾದರು. ಈ ವೇಳೆ ಪ್ರತಿಭಟನಾಕಾರರು ಹಾಗೂ ಎಎಸ್ಪಿ ಶಶಿಧರ್ ನಡುವೆ ಮಾತಿನ ಚಕಮಕಿ ನಡೆಯಿತು.
ನಂತರ ಸ್ಥಳಕ್ಕೆ ಆಗಮಿಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ಗಾಯತ್ರಿ, ಲೋಕೋಪಯೋಗಿ ಇಲಾಖೆಯ ಎಇಇ ರವಿಕುಮಾರ್, ಗಣಿ ಇಲಾಖೆಯ ಗಣಿವಿಜ್ಞಾನಿ ಪುಷ್ಪಾ ಅವರನ್ನು ಗ್ರಾಮಸ್ಥರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಎಲ್ಲ ಅಕ್ರಮ ಗಣಿಗಾರಿಕೆಗಳು ಹಾಗೂ ಟಿಪ್ಪರ್ ಹಾವಳಿ ಹೆಚ್ಚಾಗಲು ನೀವೇ ಕಾರಣರಾಗಿದ್ದೀರಿ. ಇನ್ನಾದರೂ ಟಿಪ್ಪರ್ ಹಾವಳಿ ತಡೆಗಟ್ಟದಿದ್ದರೆ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಚಿಕ್ಕತುಪ್ಪೂರು ಗೇಟ್‌ನಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಡಾ.ಗುರುಪ್ರಸಾದ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ರೈತಸಂಘದ ಕಾರ್ಯಕರ್ತರು, ಪ್ರಾದೇಶಿಕ ಸಾರಿಗೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳ ಲೋಪದಿಂದ ತಾಲೂಕಿನಲ್ಲಿ ಪದೇಪದೆ ಟಿಪ್ಪರ್‌ಗಳಿಂದ ಜೀವಹಾನಿಯಾಗುತ್ತಿದೆ. ಇಲ್ಲಿಯವರೆಗೆ ಸುಮಾರು 22 ಅಪಘಾತಗಳು ಸಂಭವಿಸಿವೆ. ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸುವುದು ಬಿಟ್ಟು ಹಣ ವಸೂಲಿಗೆ ನಿಂತಿರುವುದರಿಂದ ಕೇರಳ ರಾಜ್ಯದ ನೋಂದಣಿಯಾಗಿರುವ ಟಿಪ್ಪರ್‌ಗಳಲ್ಲಿ ನಿಯಮಬಾಹಿರವಾಗಿ ಹಗಲಿರುಳು ಗಣಿಗಾರಿಕೆ ಹಾಗೂ ಕಲ್ಲು ಸಾಗಣೆ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಎಸ್.ಮಹದೇವಪ್ಪ ಮಾತನಾಡಿ, ಓವರ್‌ಲೋಡ್ ಟಿಪ್ಪರ್‌ಗಳ ವಿರುದ್ಧ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಕೇಳಿದರೂ ಸಾರಿಗೆ ಅಧಿಕಾರಿಗಳು ನೀಡುತ್ತಿಲ್ಲ. ಕಂದಾಯ, ಗಣಿ, ಸಾರಿಗೆ ಹಾಗೂ ಪೊಲೀಸ್ ಇಲಾಖೆಗಳ ಸಮನ್ವಯದ ಕೊರತೆಯಿಂದ ದಂಧೆ ವ್ಯಾಪಕವಾಗಿದ್ದು, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ನಿಯಮಬಾಹಿರವಾಗಿ ಓಡಾಡುವ ಟಿಪ್ಪರ್‌ಗಳನ್ನು ಸೀಜ್ ಮಾಡಬೇಕು ಎಂದು ಆಗ್ರಹಿಸಿದರು.
ಡಿವೈಎಸ್‌ಪಿ ಸ್ನೇಹಾರಾಜ್ ಮಾತನಾಡಿ, ಈ ಕುರಿತು ಸದ್ಯದಲ್ಲಿಯೇ ಅಧಿಕಾರಿಗಳ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ತಹಸೀಲ್ದಾರ್ ಎಂ.ಎಸ್.ತನ್ಮಯಿ, ಡಿವೈಎಸ್ಪಿ ಸ್ನೇಹರಾಜ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಗಾಯತ್ರಿ, ಗಣಿ ಇಲಾಖೆಯ ಭೂವಿಜ್ಞಾನ ಪುಷ್ಪಾ, ಲೋಕೋಪಯೋಗಿ ಇಲಾಖೆಯ ಎಇಇ ರವಿಕುಮಾರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net