ಗುಂಡ್ಲುಪೇಟೆ: ತಮ್ಮ ಗ್ರಾಮದ ಗೇಟ್‌ನಲ್ಲಿ ಸಾರಿಗೆ ಬಸ್‌ಗಳನ್ನು ಕಡ್ಡಾಯವಾಗಿ ನಿಲುಗಡೆ ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು, ರೈತ ಸಂಘದ ಕಾರ್ಯಕರ್ತರು ಸೋಮವಾರ ತಾಲೂಕಿನ ಲಕ್ಕೂರು ಗೇಟ್ ಬಳಿ ಪ್ರತಿಭಟನೆ ನಡೆಸಿದರು.
ಜಿಲ್ಲಾ ಕೇಂದ್ರ ಸಂಪರ್ಕ ರಸ್ತೆಯಲ್ಲಿರುವ ಲೂಕ್ಕೂರು ಗೇಟ್‌ನಲ್ಲಿ ಸಾರಿಗೆ ಬಸ್‌ಗಳು ನಿಲುಗಡೆ ಮಾಡದೆ ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಗೂ ರೋಗಿಗಳಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಸಾರಿಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಚಾಲಕರು ಯಾರ ಮಾತನ್ನೂ ಕೇಳದೆ ನಿರ್ಲಕ್ಷ್ಯದಿಂದ ಕರ್ತವ್ಯ ಮಾಡುತ್ತಿದ್ದಾರೆ. ಕೆಲವು ಬಸ್‌ಗಳು ಗುಂಡ್ಲುಪೇಟೆ ಡಿಪೋಗೆ ಸೇರಿದ್ದರೆ ಮತ್ತು ಕೆಲವು ಚಾಮರಾಜನಗರಕ್ಕೆ ಸೇರಿವೆ. ಈ ಬಗ್ಗೆ ದೂರು ನೀಡಿದರೂ ಅಧಿಕಾರಿಗಳು ಚಾಲಕರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಸಕಾಲದಲ್ಲಿ ಶಾಲೆ, ಕಾಲೇಜುಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಾರಿಗೆ ಅಧಿಕಾರಿಗಳು ಸ್ಥಳಕ್ಕೆ ಬಂದು ಅಹವಾಲು ಆಲಿಸಿ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರಸ್ತೆಬದಿ ಕುಳಿತು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರು.
ನಂತರ ಸ್ಥಳಕ್ಕೆ ಗುಂಡ್ಲುಪೇಟೆ ಸಾರಿಗೆ ಡಿಪೋ ಮ್ಯಾನೇಜರ್ ಕುಮಾರನಾಯಕ್, ಚಾಮರಾಜನಗರ ಡಿಪೋ ಮ್ಯಾನೇಜರ್ ಶ್ರೀಧರ್ ಆಗಮಿಸಿ ಗ್ರಾಮಸ್ಥರ ಬೇಡಿಕೆಯಂತೆ ಬಸ್‌ಗಳನ್ನು ನಿಲುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರೂ ಒಪ್ಪದ ಪ್ರತಿಭಟನಾಕಾರರು ಲಿಖಿತ ರೂಪದಲ್ಲಿ ಕೊಡುವಂತೆ ಪಟ್ಟು ಹಿಡಿದರು. ಎಲ್ಲ ಚಾಲಕರಿಗೂ ಈ ಬಗ್ಗೆ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಪಾಪಣ್ಣ, ಶಶಿ, ಪ್ರಸಾದ್, ರಾಜ್ ಇತರರು ಇದ್ದರು.