ಲಾರಿ ಮಾಲೀಕರು, ರೈತಸಂಘದಿಂದ ಪ್ರತಿಭಟನೆ

ರಾಮಾಪುರ ಸರ್ಕಾರಿ ಆಸ್ಪತ್ರೆ ಮುಂಭಾಗ ಲಾರಿ ಮಾಲೀಕರ ಸಂಘ ಹಾಗೂ ರೈತ ಸಂಘಟನೆಯ ಪದಾಧಿಕಾರಿಗಳು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಮಾರುತಿ, ಚಂಗಡಿ ಕರಿಯಪ್ಪ, ಗಿರೀಶ್ ಇತರರಿದ್ದರು.
ರಾಮಾಪುರ ಸರ್ಕಾರಿ ಆಸ್ಪತ್ರೆ ಮುಂಭಾಗ ಲಾರಿ ಮಾಲೀಕರ ಸಂಘ ಹಾಗೂ ರೈತ ಸಂಘಟನೆಯ ಪದಾಧಿಕಾರಿಗಳು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಮಾರುತಿ, ಚಂಗಡಿ ಕರಿಯಪ್ಪ, ಗಿರೀಶ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ಆರೋಗ್ಯ ಸೇವೆ ನೀಡಲು ಒತ್ತಾಯ
ಹನೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವುದರ ಮೂಲಕ ಉತ್ತಮ ಆರೋಗ್ಯ ಸೇವೆ ಒದಗಿಸಲು ಒತ್ತಾಯಿಸಿ ಲಾರಿ ಮಾಲೀಕರ ಸಂಘ ಹಾಗೂ ರೈತ ಸಂಘಟನೆಯ ಪದಾಧಿಕಾರಿಗಳು ಶುಕ್ರವಾರ ರಾಮಾಪುರ ಸರ್ಕಾರಿ ಆಸ್ಪತ್ರೆಯ ಮುಂಭಾಗ ಪ್ರತಿಭಟನೆ ನಡೆಸಿದರು.
ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಮಾರುತಿ ಮಾತನಾಡಿ, ಹೋಬಳಿ ಕೇಂದ್ರವಾಗಿರುವ ರಾಮಾಪುರದಲ್ಲಿ ಹಿಂದೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಇತ್ತು. ಆದರೆ ಉತ್ತಮ ಆರೋಗ್ಯ ಸೇವೆ ದೊರಕುತ್ತಿರಲಿಲ್ಲ. ಇದರಿಂದ ಜನರು ಚಿಕಿತ್ಸೆ ಪಡೆಯಬೇಕಾದರೆ ತುಂಬ ಸಮಸ್ಯೆ ಅನುಭವಿಸುತ್ತಿದ್ದರು. ಬಳಿಕ ಸಂಘಟನೆಗಳ ಹೋರಾಟದ ಫಲವಾಗಿ ಈ ಕೇಂದ್ರವು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿತು. ಆದರೆ ಇಲ್ಲಿ ಸಂಜೆ 5 ಗಂಟೆಯ ಮೇಲೆ ವೈದ್ಯರೇ ಇರುವುದಿಲ್ಲ. ಆಂಬುಲೆನ್ಸ್ ಇದ್ದರೂ ಚಾಲಕರಿಲ್ಲ. ಕಳೆದ ವಾರದ ಹಿಂದೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆ ತಂದಾಗ ವೈದ್ಯರಿರಲಿಲ್ಲ. ಜತೆಗೆ ಆಂಬುಲೆನ್ಸ್ ಸೇವೆಯು ದೊರಕಲಿಲ್ಲ. ಪರಿಣಾಮ ಗಾಯಗೊಂಡಿದ್ದ ವ್ಯಕ್ತಿ ಮೃತಪಟ್ಟರು. ಇದಕ್ಕೆ ಆಸ್ಪತ್ರೆಯಲ್ಲಿನ ಅವ್ಯವಸ್ಥೆಯ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲಾರಿ ಮಾಲೀಕರ ಸಂಘದ ಮುಖಂಡ ಗಿರೀಶ್ ಮಾತನಾಡಿ, ಈ ಆಸ್ಪತ್ರೆಯಲ್ಲಿ 24 ಗಂಟೆಗಳ ಕಾಲ ಹೆರಿಗೆ ಸೌಲಭ್ಯವಿದೆ ಎಂದು ನಾಮಫಲಕ ಹಾಕಲಾಗಿದೆ. ಆದರೆ ಮಹಿಳಾ ವೈದ್ಯರಿಲ್ಲ. ಹಾಗಾಗಿ ಮಹಿಳಾ ವೈದ್ಯರನ್ನು ನಿಯೋಜಿಸಬೇಕು. ಇಲ್ಲಿನ ನರ್ಸ್‌ಗಳು ಚಿಕಿತ್ಸೆ ನೀಡಬೇಕಾದರೆ ರೋಗಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ದೂರು ನೀಡಲಾಗಿದೆ. ಆದರೆ ಈವರೆಗೂ ಯಾವುದೇ ಕ್ರಮವಾಗಿಲ್ಲ. ಆದ್ದರಿಂದ ಇಲ್ಲಿನ ಸಿಬ್ಬಂದಿಯನ್ನು ಬೇರೆಡೆಗೆ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾ ಅಧ್ಯಕ್ಷೀಯ ಮಂಡಳಿಯ ಸದಸ್ಯ ಚಂಗಡಿ ಕರಿಯಪ್ಪ ಮಾತನಾಡಿ, ರಾಮಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ವೈದ್ಯರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಜನರಿಗೆ ಉತ್ತಮ ಆರೋಗ್ಯ ಸೇವೆ ದೊರೆಯುತ್ತಿಲ್ಲ. ಆದ್ದರಿಂದ ಅಗತ್ಯ ವೈದ್ಯರನ್ನು ನಿಯೋಜಿಸಬೇಕು. ಆಂಬುಲೆನ್ಸ್‌ಗೆ ಚಾಲಕರನ್ನು ನಿಯೋಜಿಸಬೇಕು. ರೋಗಿಗಳಿಗೆ ಅಗತ್ಯ ಚಿಕಿತ್ಸೆ ದೊರೆಯುವಂತಾಗಬೇಕು. ಹಾಗಾಗಿ ಸ್ಥಳಕ್ಕೆ ಡಿಎಚ್‌ಒ ಅವರು ಆಗಮಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಅಗತ್ಯ ಭರವಸೆ: ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಕಾಶ್ ಅವರು ಪ್ರತಿಭಟನಾಕಾರರ ಸಮಸ್ಯೆಯನ್ನು ಆಲಿಸಿ ಮಾತನಾಡಿ, ವೈದ್ಯರ ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿದೆ. ಹಾಗಾಗಿ ಒಂದು ತಿಂಗಳೊಳಗೆ ವೈದ್ಯರ ನೇಮಕವಾಗಲಿದೆ. ಅಂಬ್ಯುಲೆನ್ಸ್‌ಗೆ ಇಬ್ಬರು ಚಾಲಕರನ್ನು ನೀಡುವಂತೆ ಈಗಾಗಲೇ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಅಗತ್ಯ ಕ್ರಮವಹಿಸಲಾಗಿದೆ. ಇನ್ನು ಇಲ್ಲಿನ ಸಿಬ್ಬಂದಿಯನ್ನು ಬೇರೆ ಆಸ್ಪತ್ರೆಗೆ ವರ್ಗಾಯಿಸಲು 10 ದಿನಗಳ ಕಾಲ ಕಾಲಾವಕಾಶ ನೀಡುವಂತೆ ಮನವಿ ಮಾಡುವುದರ ಮೂಲಕ ಅಗತ್ಯ ಭರವಸೆ ನೀಡಿದರು. ಇದಕ್ಕೆ ಪ್ರತಿಭನಟಕಾರರು ಪ್ರತಿಕ್ರಿಯಿಸಿ, ಬೇಡಿಕೆಗಳು ಒಂದು ತಿಂಗಳೊಳಗೆ ಈಡೇರದಿದ್ದಲ್ಲಿ ಉಗ್ರ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಲಾರಿ ಮಾಲೀಕರ ಸಂಘದ ಉಪಾಧ್ಯಕ್ಷ ನಾಗೇಂದ್ರ, ಪದಾಧಿಕಾರಿಗಳಾದ ರಾಜು, ಶಿವಾನಂದ, ವಿಘ್ನೇಶ್, ರೈತ ಮುಖಂಡರಾದ ಮುನಿಸ್ವಾಮಿ, ವಿಜಯ್, ಪಳನಿಸ್ವಾಮಿ, ಪೆರುಮಾಳ್, ನಾಗಾರ್ಜುನ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net