ಮಲೆಮಹದೇಶ್ವರ ಬೆಟ್ಟದ ಚೆಕ್‌ಪೋಸ್ಟ್‌ನಲ್ಲಿ ವಾಹನಗಳಿಂದ ಪ್ರವೇಶ ಶುಲ್ಕ ವಸೂಲಿ ಮಾಡದಂತೆ ಅಗ್ರಹಿಸಿ ರೈತರು ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಗೌಡೇಗೌಡ, ಅಮ್ಜಾದ್‌ಖಾನ್, ವೆಂಕಟಾಚಲ, ರಾಜಣ್ಣ ಇತರರಿದ್ದರು.
ಮ.ಬೆಟ್ಟದಲ್ಲಿ ರೈತ ಸಂಘ, ಹಸಿರು ಸೇನೆಯಿಂದ ರಸ್ತೆ ಸಂಚಾರ ತಡೆ
ಹನೂರು:
ವಾಹನಗಳಿಂದ ಪ್ರವೇಶ ಶುಲ್ಕ ವಸೂಲಿ ಮಾಡದಂತೆ ಆಗ್ರಹಿಸಿ ಗುರುವಾರ ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ (ಮೂಲ ಸಿದ್ಧಾಂತ ) ಸಂಘಟನೆಯಿಂದ ಪ್ರತಿಭಟನೆ ನಡೆಯಿತು.
ಚೆಕ್‌ಪೋಸ್ಟ್‌ನ ಪ್ರವೇಶ ದ್ವಾರದಲ್ಲಿ ಜಮಾಯಿಸಿದ ರೈತರು ರಸ್ತೆ ಸಂಚಾರ ತಡೆ ನಡೆಸಿ ಇಲ್ಲಿನ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕಪಡಿಸಿದರು.
ಸಂಘದ ಜಿಲ್ಲಾಧ್ಯಕ್ಷ ಗೌಡೇಗೌಡ ಮಾತನಾಡಿ, ಈ ರಸ್ತೆಯು ರಾಜ್ಯ ಹೆದ್ದಾರಿಯಾಗಿದ್ದು, ಪಿಡಬ್ಲ್ಯುಡಿ ಇಲಾಖೆಗೆ ಸೇರಿದೆ. ವಾಹನಗಳಿಂದ ತೆರಿಗೆ ಪಾವತಿಯಾಗುತ್ತಿದೆ. ಆದರೆ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಟೆಂಡರ್ ಮೂಲಕ ವಾಹನಗಳಿಂದ ಪ್ರವೇಶ ಶುಲ್ಕವನ್ನು ವಸೂಲಿ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಆದ್ದರಿಂದ ಈ ಬಗ್ಗೆ ಅಗತ್ಯ ಕ್ರಮಕೈಗೊಂಡು ಪ್ರವೇಶ ಶುಲ್ಕ ವಸೂಲಿ ಮಾಡುವುದನ್ನು ಸ್ಥಗಿತಗೊಳಿಸಬೇಕು. ಈ ಸಂಬಂಧ ಜಿಲ್ಲಾಧಿಕಾರಿ ಸ್ಥಳಕ್ಕಾಗಮಿಸಿ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ಸ್ಥಳಕ್ಕಾಗಮಿಸಿದ ಪ್ರಾಧಿಕಾರದ ಕಾರ್ಯದರ್ಶಿ ಪುರುಷೋತ್ತಮ ಅವರು ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದೇನೆ. ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮವಹಿಸುವುದಾಗಿ ತಿಳಿಸಿದರು. ಈ ವೇಳೆ ಪಿಡಬ್ಲ್ಯುಡಿ ಇಲಾಖೆೆ ಎಇಇ ಸಿನ್ನಣ್ಣನ್ ಮಾತನಾಡಿ, ಈ ಸಂಬಂಧ ಜಿಲ್ಲಾಧಿಕಾರಿ ಗಮನಕ್ಕೆ ತಂದು ಸಭೆ ನಡೆಸಲಾಗುವುದು. ಅಲ್ಲಿಯವರೆಗೂ ಪ್ರವೇಶ ಶುಲ್ಕ ವಸೂಲಿಗೆ ಇಲಾಖೆಯಿಂದ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ ಬಳಿಕ ಪ್ರತಿಭಟನೆಯನ್ನು ಕೈ ಬಿಡಲಾಯಿತು.
ಜಿಲ್ಲಾ ಸಂಘದ ಸಂಘಟನಾ ಕಾರ್ಯದರ್ಶಿ ಅಮ್ಜಾದ್ ಖಾನ್, ತಾಲೂಕು ಅಧ್ಯಕ್ಷ ರಾಜಣ್ಣ, ಪ್ರಧಾನ ಕಾರ್ಯದರ್ಶಿ ವೆಂಕಟಾಚಲ, ಮಹಿಳಾ ಘಟಕದ ಅಧ್ಯಕ್ಷೆ ರಾಜಮಣಿ, ಪದಾಧಿಕಾರಿಗಳಾದ ರವಿನಾಯ್ಡು, ಕುಮಾರಸ್ವಾಮಿ, ದಿಲೀಪ್, ಮುತ್ತಮ್ಮ ಇತರರು ಇದ್ದರು.