ಚಾಮರಾಜನಗರ: ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀಕರಣವನ್ನು ವಿರೋಧಿಸಿ ಹಾಗೂ 2026 ರ ವಿದ್ಯುತ್ ಪ್ರಸ್ತಾಪಿತ ತಿದ್ದುಪಡಿಯನ್ನು ಹಿಂಪಡೆಯುವಂತೆ ಆಗ್ರಹಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಚೇರಿ ಮುಂಭಾಗ ಜಮಾಯಿಸಿದ ನೌಕಕರು ಕೆಲಕಾಲ ಪ್ರತಿಭಟನೆ ನಡೆಸಿದರು. ಭಿತ್ತಿ ಪತ್ರಗಳನ್ನು ಪ್ರದರ್ಶಿಸುವ ಮೂಲಕ ವಿವಿಧ ೊಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘದ ಉಪಾಧ್ಯಕ್ಷ ಎನ್.ಮಹೇಶ್ ಮಾತನಾಡಿ, ಕೇಂದ್ರ ಸರ್ಕಾರದ ವಿದ್ಯುತ್ ಸುಧಾರಣಾ ಕಾಯ್ದೆ-2026 ಗ್ರಾಹಕರಿಗೆ, ನೌಕರ ವರ್ಗದವರಿಗೆ ಮಾರಕವಾಗಲಿದೆ. ಇದು ಕಾರ್ಮಿಕ ವಿರೋಧಿ ನೀತಿಯಾಗಿದ್ದು, ಇದರಿಂದ ರೈತರು ಹಾಗೂ ಜನಸಾಮಾನ್ಯರಿಗೆ ಹೊರೆಯಾಗಲಿದೆ. ಈ ನಿಟ್ಟಿನಲ್ಲಿ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಮುಂದಾಗಿರುವುದನ್ನು ವಿರೋಧಿಸಿ ಆಲ್ ಇಂಡಿಯಾ ಇಂಜಿನಿಯರ್ ಒಕ್ಕೂಟ ಹಾಗೂ ಸಂಘ-ಸಂಸ್ಥೆಗಳು ಹಮ್ಮಿಕೊಂಡಿರುವ ಮುಷ್ಕರಕ್ಕೆ ಬೆಂಬಲ ಸೂಚಿಸಲಾಗಿದೆ ಎಂದರು.
ವಿದ್ಯುತ್ ಸುಧಾರಣಾ ಕಾಯ್ದೆ-2026 ಜಾರಿಯಾದರೇ ಕೃಷಿ ಉದ್ದೇಶಕ್ಕೆ ರೈತರಿಗೆ ನೀಡುವ ಉಚಿತ ವಿದ್ಯುತ್‌ಗೆ ತೊಂದರೆಯಾಗಲಿದೆ. ಬಡವರಿಗೆ ಉಚಿತವಾಗಿ ನೀಡುತ್ತಿರುವ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಯೋಜನೆಗಳಿಗೆ ತೊಂದರೆಯಾಗಲಿದೆ. ಅದಲ್ಲದೇ ವಿದ್ಯುತ್ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ 60 ಸಾವಿರಕ್ಕೂ ಹೆಚ್ಚು ನೌಕರರು ಹಾಗೂ ನೌಕರರ ಸಂಸ್ಥೆಯನ್ನು ಕಟ್ಟಿಬೆಳೆಸಿದ 40 ಸಾವಿರ ಪಿಂಚಣಿದಾರರಿಗೆ ಸಮಸ್ಯೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರದೀಪ್, ಎಇಇ ಮಹೇಶ್, ನೌಕರರ ಸಂಘದ ಅಧ್ಯಕ್ಷ ಮುರಳಿಕೃಷ್ಣಸ್ವಾಮಿ, ಕಾರ್ಯದರ್ಶಿ ಸಿದ್ದರಾಜಪ್ಪ, ಎಸ್ಸಿ-ಎಸ್ಟಿ ಕಲ್ಯಾಣ ಸಮಿತಿ ಅಧ್ಯಕ್ಷ ಪ್ರಶಾಂತ್, ಕಾರ್ಯದರ್ಶಿ ಸೋಮೇಶ್ವರ, ಸದಸ್ಯ ಮಂಜುನಾಥ್ ಹಾಗೂ ಇತರರು ಭಾಗವಹಿಸಿದ್ದರು.