ಬಸ್ ಸೌಕರ್ಯಕ್ಕೆ ಚಿಕ್ಕಮಾಲಾಪುರ ಗ್ರಾಮಸ್ಥರ ಆಗ್ರಹ

  ಗ್ರಾಮಕ್ಕೆ ಬಸ್ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಚಿಕ್ಕಮಾಲಾಪುರ ಗ್ರಾಮಸ್ಥರು ಬುಧವಾರ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಗ್ರಾಮಕ್ಕೆ ಬಸ್ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಚಿಕ್ಕಮಾಲಾಪುರ ಗ್ರಾಮಸ್ಥರು ಬುಧವಾರ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
Published on
ಹನೂರು: ಗ್ರಾಮದೊಳಗೆ ಬಸ್ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ತಾಲೂಕಿನ ಚಿಕ್ಕಮಾಲಾಪುರ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಬುಧವಾರ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಈ ವೇಳೆ ಜಮಾಯಿಸಿದ್ದ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಸಾರಿಗೆ ಇಲಾಖೆ ಸೇವೆಯ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಗ್ರಾಮಸ್ಥರು ಮಾತನಾಡಿ, ಗ್ರಾಮದಲ್ಲಿನ ವಿದ್ಯಾರ್ಥಿಗಳು ಕೊಳ್ಳೇಗಾಲದ ಶಾಲಾ, ಕಾಲೇಜಿಗೆ ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಾರೆ. ಆದರೆ ಗ್ರಾಮಕ್ಕೆ ಬಸ್ ಸೌಕರ್ಯ ಇಲ್ಲ. ಇದರಿಂದ ಬಸ್ಸಿಗಾಗಿ ಅಡ್ಡರಸ್ತೆಗೆ ನಡೆದುಕೊಂಡು ತೆರಳಬೇಕಿದೆ. ಆದರೂ ಅಡರಸ್ತೆಯಲ್ಲಿ ಕೆಲವು ಬಸ್‌ಗಳು ನಿಲ್ಲಿಸುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ನಿಗಧಿತ ಸಮಯಕ್ಕೆ ಶಾಲಾ, ಕಾಲೇಜಿಗೆ ತೆರಳಲು ನಿತ್ಯ ಸಮಸ್ಯೆಯನ್ನು ಎದುರಿಸುವಂತಾಗಿದೆ. ಇದೀಗ ಪರೀಕ್ಷಾ ಸಮಯವಾದ್ದರಿಂದ ವಿದ್ಯಾರ್ಥಿಗಳಿಗೆ ಬಸ್ಸಿನದ್ದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಇನ್ನು ಗ್ರಾಮದ ಜನರ ಸ್ಥಿತಿಯು ಇದೇ ರೀತಿಯಾಗಿದ್ದು, ತುಂಬಾ ತೊಂದರೆಯನ್ನು ಅನುಭವಿಸುವಂತಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಗ್ರಾಮದೊಳಗೆ ಬಸ್ ಸೌಕರ್ಯ ಕಲ್ಪಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಎಚ್ಚರಿಸಿದರು.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೋಲೀಸರು ಪ್ರತಿಭಟನಕಾರರನ್ನು ಮನವೊಲಿಸಲು ಮುಂದಾದರೂ ಸಾಧ್ಯವಾಗಲಿಲ್ಲ. ಬಳಿಕ ಹನೂರು ಸಂಚಾರ ನಿಯಂತ್ರಣಾಧಿಕಾರಿ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಆಲಿಸಿದರು. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಕೈಬಿಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net