ಹನೂರು: ಪ್ರತಿಯೊಬ್ಬರೂ ನಿಗದಿತ ಅವಧಿಯೊಳಗೆ ಸಾಲ ಮರುಪಾವತಿಸುವುದರಿಂದ ಹೆಚ್ಚಿನ ಸಾಲ ಸೌಲಭ್ಯ ದೊರಕಲಿದ್ದು, ವ್ಯಾಪಾರಕ್ಕೆ ಹಾಗೂ ಆರ್ಥಿಕ ಸ್ವಾವಲಂಬನೆಗೆ ಸಹಕಾರಿ ಆಗಲಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರೇಖಾ ತಿಳಿಸಿದರು.
ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಪ್ರಧಾನಮಂತ್ರಿ ಆತ್ಮ ನಿರ್ಭರ್ ನಿಧಿ 2.0 ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಡಿಜಿಟಲ್ ಪೇಮೆಂಟ್ ಮೂಲಕ ಸಾಲ ವಿತರಿಸಿ ಮಾತನಾಡಿದರು.
ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ ಯೋಜನೆಯು 2020ರಲ್ಲಿ ಆರಂಭವಾಗಿದ್ದು, ಕಾರಣಾಂತರದಿಂದ ಈ ಯೋಜನೆಯು 2024ರಲ್ಲಿ ಸ್ಥಗಿತಗೊಂಡಿತ್ತು. ಇದೀಗ ಈ ಯೋಜನೆಯನ್ನು ಪುನರ್ ರಚಿಸಿ 2030ರವರೆಗೂ ವಿಸ್ತರಿಸಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಬ್ಯಾಂಕ್‌ಗಳ ಮೂಲಕ ಕಿರು ಸಾಲ ಸೌಲಭ್ಯ ಕಲ್ಪಿಸುವುದು. ಡಿಜಿಟಲ್ ವಹಿವಾಟು ಉತ್ತೇಜಿಸುವುದು ಹಾಗೂ ಸಾಮಾಜಿಕ ಭದ್ರತೆ ಉತ್ತಮ ಪಡಿಸುವುದು ಈ ಯೋಜನೆ ಉದ್ದೇಶವಾಗಿದೆ ಎಂದು ವಿವರಿಸಿದರು.
ಮೊದಲನೆ ಹಂತದಲ್ಲಿ 15 ಸಾವಿರ ರೂ., 2ನೇ ಹಂತದಲ್ಲಿ 25 ಸಾವಿರ ರೂ. ಹಾಗೂ 3ನೇ ಹಂತದಲ್ಲಿ 50 ಸಾವಿರ ರೂ. ಸಾಲ ಸೌಲಭ್ಯ ಸಿಗಲಿದೆ. ಡಿಜಿಟಲ್ ಪೇಮೆಂಟ್ ಮೂಲಕ ಸಾಲ ಮರುಪಾವತಿಸಿದರೆ ಶೂನ್ಯ ಬಡ್ಡಿ ದರದ ಸೌಕರ್ಯ ದೊರಕಲಿದೆ. ಪಟ್ಟಣದಲ್ಲಿ ಬೀದಿ ಬದಿ ವ್ಯಾಪಾರಿಗಳು, ಟೈಲರಿಂಗ್ ವೃತ್ತಿಯಲ್ಲಿರುವವರು, ಪತ್ರಿಕೆ ವಿತರಕರು, ಚಮ್ಮಾರರು ಸೇರಿ ಇನ್ನಿತರೆ ಕೆಲವು ಶ್ರಮಿಕ ವರ್ಗವನ್ನು ಬೀದಿ ಬದಿ ವ್ಯಾಪಾರಿಗಳೆಂದು ಗುರುತಿಸಿದ್ದು, 222 ಜನರು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಬಹುತೇಕರು ಈಗಾಗಲೇ ಈ ಯೋಜನೆಯಡಿ ಸಾಲ ಸೌಲಭ್ಯದ ಪ್ರಯೋಜನ ಪಡೆದುಕೊಂಡಿದ್ದಾರೆ. ಇದೀಗ 33 ಫಲಾನುಭವಿಗಳು ಈ ಯೋಜನೆಗೆ ಆಯ್ಕೆಯಾಗಿದ್ದು, 15 ಜನರಿಗೆ ಸಾಲ ಸೌಲಭ್ಯ ವಿತರಿಸಲಾಗುತ್ತಿದೆ ಎಂದರು.
ಎಸ್‌ಬಿಐ ಹನೂರು ಶಾಖಾ ವ್ಯವಸ್ಥಾಪಕ ಸುಕಾಂತ್ ಘೋಷ್, ಪಪಂ ಸಮುದಾಯ ಸಂಘಟನಾಧಿಕಾರಿ ಚಂದ್ರಕುಮಾರ್, ಕೌಶಲಾಭಿವೃದ್ಧಿ ಯೋಜನಾಧಿಕಾರಿ ಅನ್ಸರ್‌ಖಾನ್, ಸಂಪನ್ಮೂಲ ವ್ಯಕ್ತಿ ಜಯಶೀಲಾ ಇತರರು ಇದ್ದರು.