ತ್ಯಾಜ್ಯದಿಂದ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿ

ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಚಾಮರಾಜಗನರದ ಕೃಷಿ ವಿಜ್ಞಾನ ಕೇಂದ್ರ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ವತಿಯಿಂದ ರೈತ ಮಹಿಳೆಯರಿಗೆ ರೇಷ್ಮೆಗೂಡಿನ ಕರಕುಶಲ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಯಿತು.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಚಾಮರಾಜಗನರದ ಕೃಷಿ ವಿಜ್ಞಾನ ಕೇಂದ್ರ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ವತಿಯಿಂದ ರೈತ ಮಹಿಳೆಯರಿಗೆ ರೇಷ್ಮೆಗೂಡಿನ ಕರಕುಶಲ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀಮಲೆ ಮಹದೇಶ್ವರ ಬೆಟ್ಟದಲ್ಲಿ ತರಬೇತಿ
  • ರೇಷ್ಮೆಗೂಡಿನ ಕರಕುಶಲ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ
ಚಾಮರಾಜನಗರ: ತಾಲೂಕಿನ ಹರದನಹಳ್ಳಿ ಬಳಿ ಇರುವ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಹನೂರು ತಾಲೂಕಿನ ತುಳಸಿಗೆರೆ, ಮೆಂದಾರೆ, ವಡಕೆಹಳ್ಳ, ಕೊಂಗನೂರು, ಗೊರೆಸಾಣೆ ಗ್ರಾಮದ ಒಟ್ಟು 19 ರೈತ ಮಹಿಳೆಯರಿಗೆ ರೇಷ್ಮೆಗೂಡಿನ ಕರಕುಶಲ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಯಿತು.
ಮಹದೇಶ್ವರ ಬೆಟ್ಟದಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಹಯೋಗದಲ್ಲಿ
ಇತ್ತೀಚೆಗೆ ಆಯೋಜಿಸಿದ್ದ ಕೌಶಲ್ಯಾಭಿವೃದ್ಧಿ ತರಬೇತಿಯಲ್ಲಿ ಶಿಬಿರಾರ್ಥಿಗಳಿಗೆ ರೇಷ್ಮೆ ಮೊಟ್ಟೆ ಉತ್ಪಾದನೆಯ ಹಂತದಲ್ಲಿ ದೊರೆಯುವ ಕತ್ತರಿಸಿದ ರೇಷ್ಮೆ ಗೂಡುಗಳನ್ನು ಬಳಸಿ ಕರಕುಶಲ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಯ ವಿವಿಧ ಹಂತಗಳನ್ನು ತಿಳಿಸಿಕೊಡಲಾಯಿತು.
ಕತ್ತರಿಸಿದ ರೇಷ್ಮೆಗೂಡುಗಳ ಸ್ವಚ್ಚತೆ, ಬಣ್ಣ ಹಾಕುವುದು, ವಿವಿಧ ಮಾದರಿಯ ಹಾರ ತಯಾರಿಕೆ, ವಿವಿಧ ಹೂಗಳ (ಗುಲಾಬಿ, ಮಲ್ಲಿಗೆ, ಸೇವಂತಿಗೆ, ಜರ್ಬೇರಾ) ಡಿಸೈನ್‌ಗಳು, ಫೋಟೊ ಫ್ರೇಮ್‌ಗಳು, ಕೀ ಚೈನ್‌ಗಳನ್ನು ತಯಾರಿಸುವ ವಿಧಾನವನ್ನು ಕಲಿಸಿಕೊಟ್ಟರು.
ತರಬೇತಿ ಮುಗಿದ ಬಳಿಕ ಶಿಬಿರಾರ್ಥಿಗಳು ತಯಾರಿಸಿದ ಎಲ್ಲ ಪರಿಕರಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀಸಾಲೂರು ಬೃಹನ್ಮಠದ ಪೀಠಾಧ್ಯಕ್ಷ ಶ್ರೀಶಾಂತ ಮಲ್ಲಿಕಾರ್ಜುನ ಮಹಾಸ್ವಾಮಿಗಳು ವಹಿಸಿದ್ದರು. ಶ್ರೀಗಳಿಂದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ತರಬೇತಿಯ ನಂತರದಲ್ಲಿ ಕೃಷಿ ವಿಜ್ಞಾನ ಕೇಂದ್ರ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಹಯೋಗದಲ್ಲಿ ರೈತ ಮಹಿಳೆಯರು ತಮ್ಮ ಗ್ರಾಮಗಳಲ್ಲೇ ತಮ್ಮ ಬಿಡುವಿನ ವೇಳೆಯಲ್ಲಿ ಈ ಚಟುವಿಕೆಗಳನ್ನು ಕೈಗೊಂಡು ಆರ್ಥಿಕ ಸಬಲೀಕರಣಗೊಳ್ಳುವಂತೆ ಯೋಜಿಸಲಾಯಿತು. ಈ ವೇಳೆ ಕೃಷಿ ವಿಜ್ಞಾನ ಕೇಂದ್ರದ ರೇಷ್ಮೆ ವಿಜ್ಞಾನಿ ಡಾ.ಚಂದ್ರಶೇಖರ್ ಎಸ್. ಕಳ್ಳೀಮನಿ, ಪುಟ್ಟಮ್ಮ, ಕೆ.ಎಂ ದೊಡ್ಡಿ, ಡಾ. ಪಲ್ಲವಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net