ಶಾಸಕ ಎಂ.ಆರ್. ಮಂಜುನಾಥ್‌ರಿಂದ ಪೈಪ್‌ಲೈನ್ ಕಾಮಗಾರಿ ಸ್ಥಳ ಪರಿಶೀಲನೆ
ಹನೂರು:ಉಡುತೊರೆಹಳ್ಳ ಜಲಾಶಯದ ನೀರಾವರಿ ಯೋಜನೆ ಅನುಷ್ಠಾನಕ್ಕೆ ಅನುಕೂಲವಾಗುವ ರೀತಿಯಲ್ಲಿ ಪೈಪ್‌ಲೈನ್ ಕಾಮಗಾರಿ ಕೈಗೊಳ್ಳಲು ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.
490 ಕೋಟಿ ರೂ. ವೆಚ್ಚದಲ್ಲಿನ ಉಡುತೊರೆಹಳ್ಳ ಜಲಾಶಯದ ನೀರಾವರಿ ಯೋಜನೆ ಅನುಷ್ಠಾನ ಸಂಬಂಧ ಶನಿವಾರ ವಿವಿಧ ಸ್ಥಳಗಳಿಗೆ ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲಿಸಿ ಮಾಹಿತಿ ಪಡೆದು ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಯೋಜನೆಗೆ ಬಜೆಟ್‌ನಲ್ಲಿ 490 ಕೋಟಿ ರೂ., ಅನುದಾನ ಮೀಸಲಿರಿಸಿರುವುದು ಈ ಭಾಗದ ನೀರಾವರಿಗೆ ವರದಾನವಾಗಿದೆ. ಕುಡಿಯುವ ನೀರು ಹಾಗೂ ಅಂತರ್ಜಲ ಮಟ್ಟ ವೃದ್ಧಿಗೆ ಸಹಕಾರಿಯಾಗಿದೆ. ಯೋಜನೆ ಅನುಷ್ಠಾನ ಸಂಬಂಧ ಈಗಾಗಲೇ ಅಗತ್ಯ ಕ್ರಮವಹಿಸಲಾಗಿದೆ. ಒಂದೂವರೆ ತಿಂಗಳೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕೆಲಸ ಆರಂಭವಾಗುವ ಲಕ್ಷಣಗಳಿವೆ. ಮುಂದಿನ ದಿನಗಳಲ್ಲಿ ಈ ಯೋಜನೆ ಪೂರ್ಣಗೊಂಡು ಜನರಿಗೆ ನೀರಾವರಿ ಸೌಕರ್ಯ ದೊರಕಲಿದೆ ಎಂದು ತಿಳಿಸಿದರು.
ಇದೇ ವೇಳೆ ನೀರಾವರಿ ಇಲಾಖೆಯ ಅಧೀಕ್ಷಕ ಇಂಜಿನಿಯರ್ ಮಹೇಶ್ ಮಾತನಾಡಿ, 490 ಕೋಟಿ ರೂ. ವೆಚ್ಚದಲ್ಲಿನ ಈ ಯೋಜನೆ ಸಂಬಂಧ ಶಾಸಕರು ಹಾಗೂ ಇಲಾಖೆಯ ಅಧಿಕಾರಿಗಳೊಂದಿಗೆ ಹಲವು ಬಾರಿ ಸಭೆ ನಡೆಸಿ ಚರ್ಚಿಸಲಾಗಿದೆ. ಕಾಮಗಾರಿ ಕೈಗೊಳ್ಳುವ ಸಂಬಂಧ ಆಯಾ ಸ್ಥಳಕ್ಕೆ ಅನುಗುಣವಾಗಿ ಯೋಜನಾ ವರದಿಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದೀಗ ಅಂತಿಮವಾಗಿ ಸ್ಥಳ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಅಜ್ಜೀಪುರ ಗ್ರಾಮದ ಬಳಿ ತೆರಳಿದ ಶಾಸಕರು ಉಡುತೊರೆಹಳ್ಳ ಜಲಾಶಯಕ್ಕೆ ಪೈಪ್‌ಲೈನ್ ಕಾಮಗಾರಿ ಹಾದು ಹೋಗುವ ಮಾರ್ಗದಲ್ಲಿ ಸರ್ವೇ ಕಾರ್ಯ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ರಘುಪತಿ, ಇಇ ಉಮೇಶ್, ಎಇಇಗಳಾದ ಕರುಣಾಮಯಿ, ರಾಮಕೃಷ್ಣ, ಎಇಗಳಾದ ಬಸವೇಶ್, ವಿಕಾಸ್, ಮುಖಂಡರಾದ ಮಂಜೇಶ್, ಡಿ.ಕೆ ರಾಜು, ಮಹದೇವ, ರಾಜುನಾಯ್ಡು ಇತರರಿದ್ದರು.