ಪೊಲೀಸ್ ಬೀಟ್ ವ್ಯವಸ್ಥೆಗೆ ಬಲ

ಚಾಮರಾಜನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ನೂತನ ಎಸ್ಪಿ ಎಂ.ಮುತ್ತುರಾಜು ಅವರನ್ನು ಗುರುಸ್ವಾಮಿ ಪೊಲೀಸರು ಸ್ವಾಗತಿಸಿದರು. ಎಎಸ್ಪಿ ಎಂ.ಎನ್.ಶಶಿಧರ್, ಡಿವೈಎಸ್ಪಿಗಳಾದ ಸೋಮಣ್ಣ,  ಸ್ನೇಹರಾಜ್, ಧಮೇಂದ್ರ  ಇದ್ದರು.
ಚಾಮರಾಜನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ನೂತನ ಎಸ್ಪಿ ಎಂ.ಮುತ್ತುರಾಜು ಅವರನ್ನು ಗುರುಸ್ವಾಮಿ ಪೊಲೀಸರು ಸ್ವಾಗತಿಸಿದರು. ಎಎಸ್ಪಿ ಎಂ.ಎನ್.ಶಶಿಧರ್, ಡಿವೈಎಸ್ಪಿಗಳಾದ ಸೋಮಣ್ಣ, ಸ್ನೇಹರಾಜ್, ಧಮೇಂದ್ರ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಧಿಕಾರ ವಹಿಸಿಕೊಂಡ ನೂತನ ಎಸ್ಪಿ ಎಂ.ಮುತ್ತುರಾಜ್
  • ಕಾನೂನು ಸುವ್ಯವಸ್ಥೆ ಕಾಪಾಡುವ ಗುರಿ
  • ನೂತನ ಎಸ್ಪಿ ಅಧಿಕಾರ ಸ್ವೀಕಾರ:
ಚಾಮರಾಜನಗರ: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಬೀಟ್ ವ್ಯವಸ್ಥೆಯನ್ನು ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜು ಮತ್ತಷ್ಟು ಬಲ ಪಡಿಸಲು ನಿರ್ಧರಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿರುವುದರಿಂದ ಎಂ.ಮುತ್ತುರಾಜು ಅವರಿಗೆ ಜಿಲ್ಲೆಯ ಚಿತ್ರಣ ಗೊತ್ತಿದೆ. ಈಗ ಇವರೇ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ನಿಯೋಜನೆಗೊಂಡಿದ್ದಾರೆ. ಇವರ ಸಾರಥ್ಯದಲ್ಲಿ ಮುನ್ನಡೆಯಲಿರುವ ಜಿಲ್ಲಾ ಪೊಲೀಸ್ ಇಲಾಖೆ ಎಂದಿನಂತೆ ಕಾನೂನು ಸುವ್ಯವಸ್ಥೆಯನ್ನು ಭದ್ರಗೊಳಿಸುವ ಗುರಿಯನ್ನು ಹೊಂದಿದೆ.
ಕಳ್ಳತನ ಪ್ರಕರಣಗಳು, ಜೂಜಾಟ, ಕೇರಳ ಲಾಟರಿ ಮಾರಾಟ ಇನ್ನಿತರೆ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬೀಟ್ ಸಂಖ್ಯೆ ಹೆಚ್ಚಳ ಮಾಡುವುದು, ಚೆಕ್‌ಪೋಸ್ಟ್‌ಗಳನ್ನು ಬಿಗಿಗೊಳಿಸುವುದು, ಕಾನೂನು ಸುವ್ಯವಸ್ಥೆ ಮತ್ತು ರಸ್ತೆ ಸುರಕ್ಷತೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಗಳು ನಡೆಯಲಿವೆ.
ನೂತನ ಎಸ್ಪಿ ಅಧಿಕಾರ ಸ್ವೀಕಾರ:
ನೂತನ ಎಸ್ಪಿ ಎಂ.ಮುತ್ತುರಾಜು ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಗುರುವಾರ ಆಗಮಿಸಿ ಅಧಿಕಾರ ವಹಿಸಿಕೊಂಡರು. ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್.ಶಶಿಧರ್, ಡಿವೈಎಸ್ಪಿಗಳಾದ ಸೋಮಣ್ಣ, ಸ್ನೇಹರಾಜ್, ಧಮೇಂದ್ರ ಮತ್ತು ಇತರರು ಎಸ್ಪಿ ಮುತ್ತುರಾಜ್ ಅವರನ್ನು ಸ್ವಾಗತಿಸಿದರು.
ಸ್ವಾಗತ ಕೋರಿದ ಮುಖಂಡರು:
ಎಸ್ಪಿ ಎಂ.ಮುತ್ತುರಾಜು ಅವರನ್ನು ವಿವಿಧ ಸಂಘಟನೆಗಳ ಮುಖಂಡರು ಸನ್ಮಾನಿಸಿ ಸ್ವಾಗತಿಸಿದರು. ಈ ವೇಳೆ ಎಸ್ಪಿ ಮುತ್ತುರಾಜು ಮಾತನಾಡಿ, ಈಗಾಗಲೇ ಜಿಲ್ಲೆಯ ಪೊಲೀಸರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಮತ್ತಷ್ಟು ಕೆಲಸ ಮಾಡಲು ಸಾರ್ವಜನಿಕರ ಸಹಕಾರದ ಅಗತ್ಯವಿದೆ ಎಂದರು. ಡಿ.ಕೆ ಶಿವಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಪುಟ್ಟಸ್ವಾಮಿಗೌಡ, ಕನ್ನಡ ಪರ ಹೋರಾಟಗಾರ ಪಣ್ಯದಹುಂಡಿ ರಾಜು, ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ಅಧ್ಯಕ್ಷ ಜಿ.ಬಂಗಾರು ಇದ್ದರು.
ಸುಳ್ಳು ಹರಡಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವುದನ್ನು ತಡೆಯಲು ಸಾಮಾಜಿಕ ಜಾಲತಾಣಗಳನ್ನು ಮಾನಿಟರಿಂಗ್ ಮಾಡಲಾಗುವುದು. ಹುಲಿಗಳ ಎಐ ವಿಡಿಯೋ ಹಾಕಿ ನಾಗರೀಕರಲ್ಲಿ ಭೀತಿ ಹುಟ್ಟಿಸುವುದನ್ನು ತಡೆಯಲು ನಿಗಾವಹಿಸಲಾಗುವುದು. ಅಗತ್ಯ ಬಿದ್ದರೆ ಪ್ರಕರಣ ದಾಖಲಿಸಲಾಗುವುದು. ಸೈಬರ್ ಕ್ರೈಂ ನಿಯಂತ್ರಣಕ್ಕೆ ಕ್ರಮವಹಿಸಲಾಗುವುದು.
ಎಂ.ಮುತ್ತುರಾಜು, ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಾಮರಾಜನಗರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net