ವಿಷ ಮುಕ್ತ ಆಹಾರ ಸಮಾಜಕ್ಕೆ ಉಪಕಾರ

ಚಾಮರಾಜನಗರದ ನಗರದ ಡಾ.ರಾಜ್‌ಕುಮಾರ್ ರಂಗಮಂದಿರದಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ ವಿಶ್ವ ರೈತ ದಿನಾಚರಣೆ ಮತ್ತು ರಾಜ್ಯಮಟ್ಟದ ರಯತ ಚಿಂತನಾ ಸಮಾವೇಶವನ್ನು ಸುತ್ತೂರು ಶ್ರೀಗಳು ಉದ್ಘಾಟಿಸಿದರು. ಸಚಿವ ಕೆ.ವೆಂಕಟೇಶ್, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ, ಹಳ್ಳಿಕೆರೆಹುಂಡಿ ಭಾಗ್ಯರಾಜ್, ತೇಜಸ್ವಿ ಪಟೇಲ್, ನಿಶಾಂತ್ ಮತ್ತು ಇತರರು ಇದ್ದರು.
ಚಾಮರಾಜನಗರದ ನಗರದ ಡಾ.ರಾಜ್‌ಕುಮಾರ್ ರಂಗಮಂದಿರದಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ ವಿಶ್ವ ರೈತ ದಿನಾಚರಣೆ ಮತ್ತು ರಾಜ್ಯಮಟ್ಟದ ರಯತ ಚಿಂತನಾ ಸಮಾವೇಶವನ್ನು ಸುತ್ತೂರು ಶ್ರೀಗಳು ಉದ್ಘಾಟಿಸಿದರು. ಸಚಿವ ಕೆ.ವೆಂಕಟೇಶ್, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ, ಹಳ್ಳಿಕೆರೆಹುಂಡಿ ಭಾಗ್ಯರಾಜ್, ತೇಜಸ್ವಿ ಪಟೇಲ್, ನಿಶಾಂತ್ ಮತ್ತು ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೃಷಿಯಲ್ಲಿ ರಾಸಾಯನಿಕ ಬಳಕೆಯಿಂದ ಆರೋಗ್ಯ ಹಾಳು ಸುತ್ತೂರು ಶ್ರೀ ಕಳವಳ
  • ವಿಶ್ವ ರೈತ ದಿನಾಚರಣೆ, ರಾಜ್ಯಮಟ್ಟದ ಚಿಂತನಾ ಸಮಾವೇಶ ಉದ್ಘಾಟನೆ
ಚಾಮರಾಜನಗರ: ರಾಸಾಯನಿಕ ಬಳಕೆಯಿಂದ ರೈತರು ಬೆಳೆಯುತ್ತಿರುವ ಆಹಾರ ವಿಷವಾಗುತ್ತಿದೆ ಎಂದು ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀಶಿವರಾತ್ರಿದೇಶಿಕೇಂದ್ರ ಮಹಾಸ್ವಾಮಿ ಕಳವಳ ವ್ಯಕ್ತಪಡಿಸಿದರು.
ನಗರದ ಡಾ.ರಾಜ್‌ಕುಮಾರ್ ರಂಗಮಂದಿರದಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ ವಿಶ್ವ ರೈತ ದಿನಾಚರಣೆ ಮತ್ತು ರಾಜ್ಯಮಟ್ಟದ ರಯತ ಚಿಂತನಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೆಳೆಗಳನ್ನು ಬಾಧಿಸುತ್ತಿರುವ ರೋಗ ತಡೆಗೆ ಮತ್ತು ಚೆನ್ನಾಗಿ ಬೆಳೆ ಬರಬೇಕೆಂದು ರಾಸಾಯನಿಕವನ್ನು ಸಿಂಪಡಿಸಲಾಗುತ್ತಿದೆ.
ಇದನ್ನು ಸೇವಿಸುವ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದರು. ಒಂದೆಡೆ ರೈತರ ದುಡಿಮೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮತ್ತೊಂದೆಡೆ ರೈತು ಬೆಳೆದ ಬೆಳೆಗಳಿಗೆ ಬೆಲೆ ಸಿಗುತ್ತಿಲ್ಲ. ಬೆಳೆ ನಷ್ಟ ಅನುಭವಿಸುವ ರೈತರಿಗೆ ಶೀಘ್ರ ಗತಿಯಲ್ಲಿ ಪರಿಹಾರ ನೀಡುವ ಕಾರ್ಯವಾಗಲಿ ಎಂದರು.
ರೇಷ್ಮೆ, ಪಶು ಸಂಗೋಪನೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮಾತನಾಡಿ, ರೈತ ಸಂಘಗಳು ಬಣಗಳಾಗಿ ಭಾಗವಾಗಿಬಿಟ್ಟಿವೆ. ಆದರೆ ಒಗ್ಗಟ್ಟಿನಲ್ಲಿ ಶಕ್ತಿ ಇದೆ. ನಾನೂ ಸಹ ರೈತ ಕುಟುಂಬದಿಂದ ಬಂದಿರುವ ಕಾರಣ ರೈತರ ಸಮಸ್ಯೆಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರಿಗೆ ನ್ಯಾಯ ಒದಗಿಸುವ ಚಿಂತನೆ ಹೊಂದಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯ ಸಮಸ್ಯೆಗಳನ್ನು ರೈತರು ಮೊದಲು ಸರ್ಕಾರದ ಗಮನ ತರಬೇಕು. ಬಳಿಕ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ವಿನಾಕಾರಣ ರಸ್ತೆಗಿಳಿದು ಪ್ರತಿಭಟನೆ ಮಾಡಬೇಡಿ ಎಂದು ಮನವಿ ಮಾಡಿದರು. ವಿಷ ಮುಕ್ತ ಆಹಾರ ಬೆಳೆಯಬೇಕೆಂದು ಸುತ್ತೂರು ಶ್ರೀಗಳು ಹೇಳಿದ್ದಾರೆ. ಅಂತೆಯೇ ಗುಣಮಟ್ಟದ ಹಾಲನ್ನು ಪೂರೈಕೆ ಮಾಡಬೇಕು. ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗಬೇಕೆನ್ನುವುದು ನನ್ನ ನಿಲುವೂ ಆಗಿದೆ ಎಂದರು.
ಇದೇ ವೇಳೆ ಅನ್ನದಾತ ರೈತ ಸ್ಮರಣ ಸಂಚಿಕೆಯನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ಬಿಡುಗಡೆ ಮಾಡಿದರು. ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್, ಬಿಜೆಪಿ ಮುಖಂಡ ನಿಶಾಂತ್, ಕೊಡಗು ವಿಶ್ವವಿದ್ಯಾಲಯದ ಕುಲಪತಿ ಅಶೋಕ್ ಆಲೂರು, ರೈತ ನಾಯಕರಾದ ತೇಜಸ್ವಿ ಪಟೇಲ್, ನಾರಾಯಣರೆಡ್ಡಿ, ಗಣೇಶ್ ಇಳಗೇರಿ, ಕುಮಾರ ರವಿಕುಮಾರ್, ರೈತ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಜಿಲ್ಲಾಧ್ಯಕ್ಷ ಹಾಲಿನ ನಾಗರಾಜು, ಡಿಸಿ ಶ್ರೀರೂಪಾ ಮತ್ತು ಇತರರು ಹಾಜರಿದ್ದರು.
ನೀರಾವರಿಗೆ ಆದ್ಯತೆ ನೀಡೋಣ:
ರೈತರು ದೇಶದ ಬೆನ್ನೆಲುಬು. ರಾಷ್ಟ್ರದ ಅಭಿವೃದ್ಧಿಯಲ್ಲಿ ರೈತರ ಕೊಡುಗೆ ಅಪಾರ. ಜಿಲ್ಲೆಯಲ್ಲಿ ಅಂತರ್ಜಲ ಕುಸಿದಿದ್ದ ಸಂದರ್ಭದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಾಕಾರಗೊಳ್ಳಲು ಸುತ್ತೂರು ಶ್ರೀಗಳು ಕಾರಣ ಎಂದು ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಸ್ಮರಿಸಿದರು.
ಜಿಲ್ಲೆಯಲ್ಲಿ ನೀರಿಲ್ಲದೆ ಬೆಳೆ ಬೆಳೆಯಲಾಗದೆ ರೈತರು ಪರಿತಪಿಸುತ್ತಿದ್ದರು. ಅಲ್ಲದೇ ನಮ್ಮ ಭಾಗಕ್ಕೆ ಮುಂಗಾರು ತಡವಾಗಿ ಪ್ರವೇಶ ಮಾಡುತ್ತದೆ. ತಮಿಳುನಾಡು ಭಾಗದಲ್ಲಿ ಮಳೆ ಬಿದ್ದರೆ ಇಲ್ಲಿಗೆ ನೀರು ಸಿಗುತ್ತದೆ. ಬಿ.ರಾಚಯ್ಯ ಅವರು ಸುವರ್ಣಾವತಿ ಮತ್ತು ಚಿಕ್ಕಹೊಳೆ ಜಲಾಶಯಗಳನ್ನು ನಿರ್ಮಾಣ ಮಾಡಿ ನೀರಾವರಿ ಸೌಲಭ್ಯ ಒದಗಿಸಿಕೊಟ್ಟರು ಎಂದು ಸ್ಮರಿಸಿದರು.
ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ನೀರಾವರಿಗಾಗಿ ಅನುದಾನ ನೀಡಲಾಗಿದೆ. ಮುಂದಿನ ಬಜೆಟ್‌ನಲ್ಲಿ ಜಿಲ್ಲೆಯ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಒದಗಿಸಲು ಶಾಸಕರೆಲ್ಲರೂ ಕೋರುತ್ತೇವೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಅನುದಾನ ಕೊಡಬೇಕೆಂದು ಕೋರಿದರು.
ಆನೆಗಳ ಹಾವಳಿ ತಡೆಗೆ ರೈಲ್ವೆ ಬ್ಯಾರಿಗೇಟ್‌ಗಳನ್ನು ಅಳವಡಿಸಬೇಕು. ಮೊದಲೆಲ್ಲ ರೈತರು ದನ-ಕರುಗಳನ್ನು ಕಾಡಿಗೆ ಬಿಟ್ಟು ಮೇಯಿಸುತ್ತಿದ್ದರು. ಒಂದೋ ಎರಡೋ ದನ-ಕರುಗಳ ಮೇಲೆ ಹುಲಿ, ಚಿರತೆ ತಿಂದು ಹಾಕುತ್ತಿತ್ತು. ಆದರೆ ಈಗ ಕಾಡಿಗೆ ದನ-ಕರು ಮೇಯಲು ಬಿಡುತ್ತಿಲ್ಲ. ಹುಲಿಗಳು ನಾಡಿಗೆ ಬಂದು ಬೇಟೆಯಾಡುತ್ತಿವೆ. ಕಬ್ಬು ಬೆಳೆಗಾರರಿಗೆ 3300 ರೂ. ಸಿಗುವಂತಾಗಬೇಕು ಎಂದರು.
ಬಜೆಟ್‌ನಲ್ಲಿ ಅನುದಾನ ಕೋರೋಣ..
ಈ ಸಲ ಬಜೆಟ್‌ನಲ್ಲಿ ಚಾಮರಾಜನಗರ ಭಾಗಕ್ಕೆ ನೀರಾವರಿ ಯೋಜನೆ ತರಲು ಎಲ್ಲ ಶಾಸಕರೂ ಒಗ್ಗೂಡಿ ಅನುದಾನ ಕೇಳೋಣ. ಬಜೆಟ್‌ನಲ್ಲಿ ಅನುದಾನ ತಂದರೆ ರೈತರು ಬದುಕುವಂತಾಗುತ್ತದೆ ಎಂದು ವಿಧಾನ ಪರಿಷತ್ತಿನ ಸದಸ್ಯ ಕೆ.ಶಿವಕುಮಾರ್ ತಿಳಿಸಿದರು. ಸುವರ್ಣಾವತಿ, ಚಿಕ್ಕಹೊಳೆ ಜಲಾಶಯಗಳಿಗೆ ನೀರು ಹರಿಯುವ ತಮಿಳುನಾಡು ಭಾಗದಲ್ಲಿ ಅಲ್ಲಿನ ರೈತರು ನೂರಾರು ಚೆಕ್‌ಡ್ಯಾಂಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಬರ ಇದ್ದ ಕೃಷ್ಣಗಿರಿ, ಸೇಲಂ ಕಡೆ ನೀರಾವರಿ ಮಾಡಿಕೊಂಡಿದ್ದಾರೆ. ಈ ರೀತಿ ಈ ಭಾಗದಲ್ಲೂ ನೀರಾವರಿ ಸೌಲಭ್ಯವಾಗಬೇಕು ಎಂದು ಅಭಿಪ್ರಾಯಪಟ್ಟರು.
ರೈತರಿಲ್ಲದೆ ಜಗತ್ತು ಸಮೃದ್ಧಿಯಾಗಿ ಇರುತ್ತಿರಲಿಲ್ಲ. ಎರಡು ಹೊತ್ತಿನ ಹಸಿವು ರೈತರ ಬೆಲೆಯನ್ನು ತಿಳಿಸುತ್ತದೆ. ಸ್ವಾತಂತ್ರ್ಯ ಬಂದಾಗ ರೈತರ ಸಂಖ್ಯೆ ಶೇ.78ರಷ್ಟಿತ್ತು. ಈಗ ಬೇರೆ ಬೇರೆ ಕಾರಣಗಳಿಂದ ಶೇ.48ಕ್ಕೆ ಇಳಿದಿದೆ. ಆದರೂ 355 ಮಿಲಿಯನ್ ಟನ್ ಆಹಾರ ಉತ್ಪಾದನೆಯಾಗಿ ದೇಶ ಸಮೃದ್ಧಿಯ ಕಡೆಗೆ ಹೋಗುತ್ತಿದೆ. ಆದರೆ ಇದೇ ಪರಿಸ್ಥಿತಿ ಅಮೇರಿಕಾದಲ್ಲಿ ಇಲ್ಲ. ಅಲ್ಲಿ ಅಕ್ಕಿ, ಗೋಧಿಗಾಗಿ ಸಾಲುಗಟ್ಟಿ ನಿಲ್ಲುವ ಸ್ಥಿತಿ ಇತ್ತು ಎಂದರು.
ಕಾವೇರಿ ನ್ಯಾಯಾಧೀಕರಣದಿಂದ 284 ಟಿಎಂಸಿ ನೀರನ್ನು ಕರ್ನಾಟಕಕ್ಕೆ ನೀಡಲಾಗಿದೆ. ರಾಜ್ಯದ ಪಾಲಿನ ಕಾವೇರಿ ನೀರನ್ನು ರೈತರು ಸದ್ಭಳಕೆ ಮಾಡಿಕೊಳ್ಳಬೇಕು. ಸಮುದ್ರಕ್ಕೆ ಹೋಗುವ ಬದಲು ಮೈಸೂರು-ಚಾಮರಾಜನಗರ ಭಾಗಕ್ಕೆ ತಲುಪಬೇಕು. ಉದ್ಯೋಗ ಅರಸಿ ಗುಳೆ ಹೋಗುವವರಿಗೆ ಎನ್‌ಆರ್‌ಇಜಿಎ ಕೆಲಸ ನೀಡಿತ್ತು. ಅದನ್ನು ಕಡಿಮೆ ಮಾಡಬಾರದು. ಯಾವುದೇ ಕಾರ್ಯಕ್ರಮ ಮಾಡಿದರೂ ರೈತರ ಹಿತದೃಷ್ಟಿಯಿಂದ ಮಾಡಬೇಕು ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net