ಬೆಟ್ಟಳ್ಳಿ ಮಾರಮ್ಮ ಜಾತ್ರೆಗೆ ಕಂಬ ಪ್ರತಿಷ್ಠಾಪನೆ

ಹನೂರಿನ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರೆ ಆರಂಭದ ಹಿನ್ನೆಲೆಯಲ್ಲಿ ಕಂಬ ಪ್ರತಿಷ್ಠಾಪನೆ ವೇಳೆ ದೇಗುಲದ ಮುಂಭಾಗದಲ್ಲಿ ನೆರೆದಿದ್ದ ಭಕ್ತರು .
ಹನೂರಿನ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರೆ ಆರಂಭದ ಹಿನ್ನೆಲೆಯಲ್ಲಿ ಕಂಬ ಪ್ರತಿಷ್ಠಾಪನೆ ವೇಳೆ ದೇಗುಲದ ಮುಂಭಾಗದಲ್ಲಿ ನೆರೆದಿದ್ದ ಭಕ್ತರು .
Published on

ಪ್ರಮುಖ ಮುಖ್ಯಾಂಶಗಳು

  • 9ರಂದು ಜಾಗರ ಸಮರ್ಪಣೆಯೊಂದಿಗೆ ಆರಂಭ
  • ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವ
ಹನೂರು : ಪಟ್ಟಣದ ಗ್ರಾಮದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವ ಆರಂಭ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಕಂಬ ಪ್ರತಿಷ್ಠಾಪನೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಜಾತ್ರೆ ಮಾರ್ಚ್ 9 ರಂದು ಜಾಗರ ಸಮರ್ಪಣೆಯೊಂದಿಗೆ ಆರಂಭವಾಗಲಿದ್ದು, 10ರಂದು ಮಧ್ಯಾಹ್ನ ರಥೋತ್ಸವ ಹಾಗೂ ತಂಪು ಜ್ಯೋತಿ, 11ರಂದು ದೊಡ್ಡ ಬಾಯಿ ಬೀಗ, 12ರಂದು ಅಗ್ನಿಕುಂಡ ದರ್ಶನ ಹಾಗೂ 13ರಂದು ಆರ್.ಎಸ್.ದೊಡ್ಡಿ ಕೆರೆಯಲ್ಲಿ ತೆಪ್ಪೋತ್ಸವ ಜರುಗುವುದರ ಮೂಲಕ ಜಾತ್ರೆಗೆ ತೆರೆ ಬೀಳಲಿದೆ.
ಕಂಬ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ದೇಗುಲವನ್ನು ವಿವಿಧ ಫಲ-ಪುಷ್ಪಗಳಿಂದ ಸಿಂಗರಿಸಲಾಗಿತ್ತು. ದೇಗುಲದ ಮುಂಭಾಗ ಚಪ್ಪರ ನಿರ್ಮಿಸಿ ವಿವಿಧ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತು.
ಕಂಬ ಪ್ರತಿಷ್ಠಾಪನೆ ಹಿನ್ನೆಲೆ ಬೆಳಗ್ಗೆ ದೇವಿಯ ವಿಗ್ರಹ ಮೂರ್ತಿಯನ್ನು ಹಾಲು, ಮೊಸರು, ಜೇನುತುಪ್ಪ, ಎಳನೀರು ಇನ್ನಿತರ ದ್ರವ್ಯಗಳಿಂದ ಅಭಿಷೇಕ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ರಾತ್ರಿ 9ರ ವೇಳೆಯಲ್ಲಿ ವಾದ್ಯ ಮೇಳದೊಂದಿಗೆ ಆಂಜನೇಯ ಸ್ವಾಮಿ ದೇಗುಲದಿಂದ ಮೆರವಣಿಗೆ ಮೂಲಕ ಹೊತ್ತು ತಂದ ಮೂರು ಕವಡಿನ ಕಂಬವನ್ನು ದೇಗುಲದ ಮುಂಭಾಗ ಪ್ರತಿಷ್ಠಾಪಿಸಲಾಯಿತು. ಈ ವೇಳೆ ಯುವಕರು ವಾದ್ಯದ ತಾಳಕ್ಕೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಅರ್ಚಕರಾದ ರಾಜು ರಾವ್, ಶೇಖರ್ ದೀಕ್ಷಿತ್ ಅವರು ಪೂಜಾ ಕೈಂಕರ್ಯವನ್ನು ನೆರವೇರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net