ನಗರದ ಡಿವಿಯೇಷನ್ ರಸ್ತೆಯಲ್ಲಿರುವ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣವನ್ನು ಹೊರತುಪಡಿಸಿದರೇ, ಪ್ರಮುಖ ರಸ್ತೆಗಳಲ್ಲಿ ಬಸ್ ತಂಗುದಾಣಗಳು ಇಲ್ಲದೇ ಪ್ರಯಾಣಿಕರು ಅಂಗಡಿ-ಮುಂಗಟ್ಟು, ಗಿಡ-ಮರಗಳ ಕೆಳಗೆ ನಿಂತು ಬಸ್‌ಗಳಿಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಚಾಮರಾಜನಗರದಿಂದ ನಂಜನಗೂಡು ಮತ್ತು ಮೈಸೂರು ಕಡೆಗೆ ಹೋಗುವವರು, ಎಲ್‌ಐಸಿ ವೃತ್ತದ ರಸ್ತೆ ಬದಿಯಲ್ಲಿ ನಿಲ್ಲುತ್ತಾರೆ. ಸಂತೇಮರಹಳ್ಳಿ, ಯಳಂದೂರು, ಕೊಳ್ಳೇಗಾಲ, ತಿ.ನರಸೀಪುರ ಕಡೆಗೆ ಹೋಗುವವರು ಸಂತೇಮರಹಳ್ಳಿ ವೃತ್ತದಲ್ಲಿ ಬಸ್‌ಗಳಿಗೆ ಕಾಯುತ್ತಾರೆ. ಗುಂಡ್ಲುಪೇಟೆ ಕಡೆಗೆ ಹೋಗುವವರು ಗುಂಡ್ಲುಪೇಟೆ ವೃತ್ತ, ಹಳೇ ಆರ್‌ಟಿಓ ವೃತ್ತ ಹಾಗೂ ಕೆಎಸ್‌ಆರ್‌ಟಿಸಿ ಮುಂಭಾಗ ಹೆದ್ದಾರಿ ಬದಿಯಲ್ಲಿ ನಿಂತು ಬಸ್‌ಗಳಿಗೆ ಕಾಯುವಂತಾಗಿದೆ. ಹರದನಹಳ್ಳಿ, ಅಮಚವಾಡಿ, ತಮಿಳುನಾಡು ಭಾಗಗಳಿಗೆ ಹೋಗುವವರದ್ದೂ, ಇದೇ ಕಥೆಯಾಗಿದೆ. ಅದಲ್ಲದೇ ಶ್ರೀಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಹಾಗೂ ಇನ್ನಿತರೆ ಕಡೆಗಳಲ್ಲಿ ಬಸ್‌ತಂಗುದಾಣಗಳು ಇಲ್ಲದೇ ಪ್ರಯಾಣಿಕರು ರಸ್ತೆ ಬದಿಯಲ್ಲೇ ನಿಲ್ಲುವಂತಾಗಿದೆ.