ಪಟ್ಟದ ಮಹದೇವಸ್ವಾಮೀಜಿ ಪುಣ್ಯ ಸಂಸ್ಮರಣೋತ್ಸವ ನಾಳೆ

ಲಿಂಗೈಕ್ಯ ಶ್ರೀ ಪಟ್ಟದ ಮಹದೇವಸ್ವಾಮೀಜಿ
ಲಿಂಗೈಕ್ಯ ಶ್ರೀ ಪಟ್ಟದ ಮಹದೇವಸ್ವಾಮೀಜಿ
Published on

ಪ್ರಮುಖ ಮುಖ್ಯಾಂಶಗಳು

  • ಮಲೆಮಹದೇಶ್ವರ ಬೆಟ್ಟದ ಶ್ರೀ ಸಾಲೂರು ಬೃಹನ್ಮಠ
  • ಜ.29
ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಶ್ರೀ ಸಾಲೂರು ಬೃಹನ್ಮಠದಲ್ಲಿ ಜ.29ರಂದು ಲಿಂಗೈಕ್ಯ ಶ್ರೀ ಪಟ್ಟದ ಮಹದೇವಸ್ವಾಮೀಜಿ ಅವರ 32ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ನಡೆಯಲಿದೆ.
ಸಾಮಾಜಿಕ ಕಳಕಳಿಯೊಂದಿಗೆ ಕಾಯಕದ ಜತೆಗೆ ಅಭಿವೃದ್ಧಿಗೆ ಶ್ರಮಿಸಿದ ಶ್ರೀ ಪಟ್ಟದ ಮಹದೇವ ಸ್ವಾಮೀಜಿ ಅವರ ಸೇವೆ ಅನನ್ಯ. ಇವರು ಬಾಲ್ಯದಲ್ಲಿಯೇ ಮಹದೇಶ್ವರರ ಪ್ರಭಾವಕ್ಕೆ ಒಳಗಾಗಿದ್ದರು. ಕನಕಪುರ ದೇಗುಲ ಮಠದಲ್ಲಿ ಶಿಕ್ಷಣ ಪಡೆದರು. ಆದರೆ ಹೆಚ್ಚಿನ ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ. ಬಳಿಕ ಗುರು ಶ್ರೀ ಮುದ್ದುವೀರ ಸ್ವಾಮೀಜಿ ಅವರ ಅಪ್ಪಣೆಯಂತೆ ಮ.ಬೆಟ್ಟಕ್ಕೆ ಬಂದು ನೆಲೆಸಿ ಸ್ವಾಮಿಯ ಪೂಜಾ ಕಾರ್ಯದ ಜತೆಗೆ ಮಠದ ಅಭಿವೃದ್ಧಿಗೆ ಶ್ರಮಿಸಿದ್ದರು. ಹಾಗೆಯೇ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ ಪರಿಣಾಮ ಮ.ಬೆಟ್ಟದಲ್ಲಿ ಹಿರಿಯ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು, ಸಂಸ್ಕೃತ ಶಾಲೆ, ವೇದಾಗಮ ಪಾಠಶಾಲೆ ಸ್ಥಾಪಿಸಿದರು.
ಗಿರಿಜನರು, ದೀನದಲಿತರು ಹಾಗೂ ದುರ್ಬಲ ವರ್ಗದ ಮಕ್ಕಳಿಗೆ ಶಿಕ್ಷಣ ಸಂಸ್ಥೆಯನ್ನು ತೆರೆದರಲ್ಲದೇ ನಿರ್ಗತಿಕ ಮಕ್ಕಳಿಗೆ ವಸತಿ ಸೌಕರ್ಯಕ್ಕಾಗಿ ವಿದ್ಯಾರ್ಥಿ ನಿಲಯ ಸ್ಥಾಪಿಸಿದರು. ಹಳ್ಳಿಗಳಿಗೆ ತೆರಳಿ ಕೊರಣ್ಯವನ್ನು ಸಂಗ್ರಹಿಸುವ ಮೂಲಕ ದಾಸೋಹ ಹಾಗೂ ಜ್ಞಾನಾರ್ಜನೆಯನ್ನು ಅಭಿವೃದ್ಧಿ ಪಡಿಸುತ್ತ ಸಾಲೂರು ಮಠದ ಕಟ್ಟಡ ನಿರ್ಮಾಣ ಕಾರ್ಯ ನೆರವೇರಿಸಿದರು. ಹಾಗಾಗಿ ಶ್ರೀಗಳ ಸೇವೆ ಅನನ್ಯ. ಪ್ರತಿ ವರ್ಷ ಇವರ ಪುಣ್ಯ ಸಂಸ್ಮರಣೋತ್ಸವವನ್ನು ಆಯೋಜಿಸುತ್ತಿದ್ದು, ಇದೀಗ 32ನೇ ಸಂಸ್ಮರಣೋತ್ಸವವು ಹರಗುರು ಚರಮೂರ್ತಿಗಳ ಸಾನಿಧ್ಯದಲ್ಲಿ ನೆರವೇರಲಿದೆ ಎಂದು ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.
ದಿವ್ಯ ಪಾದಪೂಜೆ: ಸಂಸ್ಮರಣೋತ್ಸವದ ಅಂಗವಾಗಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಪಾದಪೂಜೆ ಕನಕಪುರ ದೇಗುಲ ಮಠದ ಶ್ರೀಮುಮ್ಮಡಿ ನಿರ್ವಾಣ ಸ್ವಾಮೀಜಿ ಹಾಗೂ ಇತರ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ನೆರವೇರಲಿದೆ. ಪ್ರಾತಃಕಾಲ 5 ಗಂಟೆಗೆ ಲಿಂಗೈಕ್ಯ ಪಟ್ಟದ ಮಹದೇವಸ್ವಾಮೀಜಿ ಅವರ ಗದ್ದುಗೆ ಹಾಗೂ ಶ್ರೀ ಮಠದ ಕರ್ತೃ ಗದ್ದುಗೆಗೆ ಮಹಾ ರುದ್ರಾಭಿಷೇಕ, ಅಷ್ಟೋತ್ತರ ಸಹಿತ ಬಿಲ್ವಾರ್ಚನೆಯೊಂದಿಗೆ ಮಹಾ ಮಂಗಳಾರತಿ ಹಾಗೂ ಪೂಜಾ ಕೈಂಕರ್ಯ ನಡೆಯಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net