ಟೌನ್‌ಶಿಪ್ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿ
ಬಿಡದಿ ಟೌನ್ ಶಿಪ್ ವಿರೋಧಿಸಿ ಬೈರಮಂಗಲದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಲು ಹನೂರಿನಿಂದ ರೈತರು ತೆರಳಿದರು. ಚಂಗಡಿ ಕರಿಯಪ್ಪ, ಮಾದಪ್ಪ, ರಾಜು, ಶ್ರೀನಿವಾಸ್ ಇತರರಿದ್ದರು.
ಹನೂರು: ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಿ ಬೈರಮಂಗಲದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಶನಿವಾರ ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು, ರೈತರು ಪಟ್ಟಣದಿಂದ ತೆರಳಿದರು.
ಈ ವೇಳೆ ಸಂಘದ ತಾಲೂಕು ಅಧ್ಯಕ್ಷ ಮಾದಪ್ಪ ಮಾತನಾಡಿ, ಸರ್ಕಾರ ನಿರ್ಧರಿಸಿರುವ ಬಿಡದಿ ಟೌನ್ ಶಿಪ್ ಯೋಜನೆ ನಿಜಕ್ಕೂ ಖಂಡನೀಯ. ಈ ಭಾಗದ ಸಾವಿರಾರು ಎಕರೆ ಪ್ರದೇಶದಲ್ಲಿ ನೂರಾರು ರೈತರು ಹಿಂದಿನಿಂದಲೂ ಕೃಷಿಯಲ್ಲಿ ತೊಡಗಿ ವಿವಿಧ ಬೆಳೆಗಳನ್ನು ಬೆಳೆಯುವುದರ ಮೂಲಕ ಜೀವನ ನಡೆಸುತ್ತಿದ್ದಾರೆ. ಆದರೆ ಸರ್ಕಾರ ನಗರೀಕರಣದ ಉದ್ದೇಶದಿಂದ ಈ ಯೋಜನೆಯ ಜಾರಿಗಾಗಿ ಜಮೀನನ್ನು ಸ್ವಾಧೀನ ಪಡೆಸಿಕೊಳ್ಳಲು ಮುಂದಾಗಿರುವ ಕ್ರಮ ಸರಿಯಲ್ಲ. ಈ ಯೋಜನೆಯನ್ನು ವಿರೋಧಿಸಿ ರೈತರು ಭೂಮಿಯನ್ನು ಬಿಟ್ಟು ಕೊಡಲ್ಲ ಎಂದು 480 ದಿನಗಳಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಗಾಗಿ ಬೆಂಬಲ ನೀಡುವ ಸಲುವಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಲು ತೆರಳುತ್ತಿದ್ದೇವೆ ಎಂದು ತಿಳಿಸಿದರು.
ಸಂಘದ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಚಂಗಡಿ ಕರಿಯಪ್ಪ, ರೈತ ಮುಖಂಡರಾದ ಮೈಕಲ್, ಪುಟ್ಟಸ್ವಾಮಿ, ಶ್ರೀನಿವಾಸ್, ಶಾಂತಕುಮಾರ್, ನಾರಾಯಣಮೂರ್ತಿ, ಭೈರನತ್ತ ರಾಜು, ಕೃಷ್ಣಪ್ಪ, ಲಿಂಗೇಶ್, ವಿಜಯ್, ನಂದೀಶ್ ಇನ್ನಿತರಿದ್ದರು.