ಲಯನ್ಸ್ ವಿದ್ಯಾಸಂಸ್ಥೆ ಮುಂದೆ ಪಾಲಕರ ಪ್ರತಿಭಟನೆ

ಲಯನ್ಸ್ ಸಂಯುಕ್ತ ಪದವಿ ಕಾಲೇಜಿನ ಮುಂಭಾಗ ಸೋಮವಾರ ಪಾಲಕರು ಪ್ರತಿಭಟನೆ ನಡೆಸಿದರು.
ಲಯನ್ಸ್ ಸಂಯುಕ್ತ ಪದವಿ ಕಾಲೇಜಿನ ಮುಂಭಾಗ ಸೋಮವಾರ ಪಾಲಕರು ಪ್ರತಿಭಟನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕರ್ತವ್ಯದಿಂದ ತೆಗೆದಿರುವ ಉಪನ್ಯಾಸಕರನ್ನು ಮುಂದುವರೆಸುವಂತೆ ಒತ್ತಾಯ
ಕೊಳ್ಳೇಗಾಲ: ಕರ್ತವ್ಯದಿಂದ ತೆಗೆದು ಹಾಕಿರುವ ಉಪನ್ಯಾಸಕರನ್ನು ಮಕ್ಕಳ ವಿದ್ಯಾಭ್ಯಾಸ ದೃಷ್ಟಿಯಿಂದ ಮುಂದುವರೆಸಬೇಕು ಎಂದು ಪಟ್ಟಣದ ಲಯನ್ಸ್ ಸಂಯುಕ್ತ ಪದವಿ ಕಾಲೇಜಿನ ಮುಂಭಾಗ ಸೋಮವಾರ ಪಾಲಕರು ಪ್ರತಿಭಟನೆ ನಡೆಸಿದರು.
ಈ ವೇಳೆ ಚೇತನ್ ಮಾತನಾಡಿ, ಲಯನ್ಸ್ ಕಾಲೇಜಿನ ರಾಸಾಯನಶಾಸ್ತ್ರ ಉಪನ್ಯಾಸಕ ಶ್ಯಾಮ್‌ಕುಮಾರ್ ಅವರನ್ನು ಕಾಲೇಜು ಆಡಳಿತ ಮಂಡಳಿ ಕರ್ತವ್ಯದಿಂದ ಏಕಾಏಕಿ ತೆಗೆದು ಹಾಕಿದೆ. ಶ್ಯಾಮ್‌ಕುಮಾರ್ ಮೇಲೆ ಕಾಲೇಜು ಆಡಳಿತ ಮಂಡಳಿಯವರು ಕೆಲವು ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ, ಇದರಿಂದ ಮಕ್ಕಳ ಓದಿಗೆ ತೊಂದರೆಯಾಗಿದೆ. ಹಾಗಾಗಿ ಉಪನ್ಯಾಸಕ ಶ್ಯಾಮ್‌ಕುಮಾರ್, ಪಾಲಕರುಗಳ ಸಮ್ಮುಖದಲ್ಲಿ ಸಭೆ ಕರೆದು ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು ಎಂಬುದು ಒತ್ತಾಯವಾಗಿದೆ ಎಂದರು.
ಪ್ರತಿಭಟನೆಗೂ ಮುನ್ನ ಕಾಲೇಜಿಗೆ ಭೇಟಿ ನೀಡಿದ ಪಾಲಕರು ಕಾಲೇಜಿನ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರ ಜತೆ ಚರ್ಚಿಸಿದರು. ಉಪನ್ಯಾಸಕ ಶ್ಯಾಮ್‌ಕುಮಾರ್ ಅವರನ್ನು ಕೆಲಸದಿಂದ ತೆಗೆಯಲು ಕಾರಣ ಏನು ತಿಳಿಸಿ ಎಂದು ಕೇಳಿದರು. ಶ್ಯಾಮ್ ಕುಮಾರ್ ಅವರನ್ನು ಸ್ಥಳಕ್ಕೆ ಕರೆಯಿಸುವಂತೆ ಪಾಲಕರು ಒತ್ತಾಯಿಸಿದರು. ಪ್ರಾಂಶುಪಾಲೆ ವಿನುತಾ ಮಾತನಾಡಿ, ಶ್ಯಾಮ್‌ಕುಮಾರ್ ಕೋಪ ಬಂದಾಗ ಸಹದ್ಯೋಗಿಗಳಿಗೆ ಕೆಟ್ಟದಾಗಿ ಬಯ್ದಿದ್ದಾರೆ. ನಮಗೆ ಬೇಸರ ಆಗುವಂತೆ ಮಾಡಿದ್ದಾರೆ ಎಂದು ದೂರಿದರು. ನಂತರ ಪಾಲಕರ ಒತ್ತಾಯದ ಮೇರೆಗೆ ಆಡಳಿತ ಮಂಡಳಿಯ ಸದಸ್ಯರು ಉಪನ್ಯಾಸಕ ಶ್ಯಾಮ್ ಕುಮಾರ್ ಮೇ 20ರಂದು ಕರೆಸುತ್ತೇವೆ. ಈ ವೇಳೆ ಪಾಲಕರು ಬರಲಿ ಎಂದು ತಿಳಿಸಿದರು.
ಲಯನ್ಸ್ ವಿದ್ಯಾ ಸಂಸ್ಥೆ ಕಾರ್ಯದರ್ಶಿ ವೆಂಕಟೇಶ್, ನಿರ್ದೇಶಕ ಸತೀಶ್, ಉಪನ್ಯಾಸಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net