ಚಿಕ್ಕಲ್ಲೂರು ಜಾತ್ರೆಯಲ್ಲಿ ಪಂಕ್ತಿ ಸೇವೆ

 ಚಿಕ್ಕಲ್ಲೂರು ದೇವಾಲಯ ಹೊರಗಿನ ಪ್ರದೇಶದಲ್ಲಿ ಬಿಡಾರ ಹೂಡಿದ ಭಕ್ತರು ಶ್ರೀ ಸಿದ್ದಪ್ಪಾಜಿ ಕಂಡಾಯಕ್ಕೆ ಪೂಜೆ ಸಲ್ಲಿಸಿ ಸಾಮೂಹಿಕವಾಗಿ ಕು ಳಿದು ಮಾಂಸದೂಟ ಸವಿದರು.
ಚಿಕ್ಕಲ್ಲೂರು ದೇವಾಲಯ ಹೊರಗಿನ ಪ್ರದೇಶದಲ್ಲಿ ಬಿಡಾರ ಹೂಡಿದ ಭಕ್ತರು ಶ್ರೀ ಸಿದ್ದಪ್ಪಾಜಿ ಕಂಡಾಯಕ್ಕೆ ಪೂಜೆ ಸಲ್ಲಿಸಿ ಸಾಮೂಹಿಕವಾಗಿ ಕು ಳಿದು ಮಾಂಸದೂಟ ಸವಿದರು.
Published on
ಕೊಳ್ಳೇಗಾಲ: ಚಿಕ್ಕಲ್ಲೂರು ಜಾತ್ರೆಯಲ್ಲಿ ಮಂಗಳವಾರ ಬಾಡೂಟ ಘಮಘಮಿಸಿತು. ದೇವರ ಸೇವೆಗೆ ಬಂದವರೆಲ್ಲರೂ ಒಂದೇ ಎಂಬ ಜಾತ್ಯತೀತ ಮನೋಭಾವದೊಳಗೆ ಪಂಕ್ತಿ ಸೇವೆ ನೆರವೇರಿತು.
ಕೊಳ್ಳೇಗಾಲ ತಾಲೂಕಿನ ಶ್ರೀ ಕ್ಷೇತ್ರ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆಯ ನಾಲ್ಕನೇ ದಿನದ ಪಂಕ್ತಿ ಸೇವೆಯನ್ನು ಭಕ್ತಿ-ಭಾವದಿಂದ ನೀಲಗಾರರ ಒಕ್ಕಲಿನ ಭಕ್ತರು ಆಚರಣೆ ಮಾಡಿದರು. ದೇವಾಲಯ ದೂರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಡಾರ ಹೂಡಿದ್ದರು. ಮಕ್ಕಳು, ಮಹಿಳೆಯರು ಕುಟುಂಬ ಸಮೇತರಾಗಿ ಬಾಡೂಟ ಸವಿದರು. ಪಾರಂಪರಿಕ ಸಂಪ್ರದಾಯ ಮೆರೆದರು. ದೇವರ ಸೇವೆಗೆ ಬಂದವರನ್ನು ಕೂರಿಸಿ ಬಾಡೂಟ ಉಣ ಬಡಿಸಿ ಆಥಿತ್ಯ ನೀಡಿದರು.
ಜಾತ್ರಾಮಾಳ ಭಕ್ತರಿಂದ ತುಂಬಿ ತುಳುಕುತ್ತಿತ್ತು. ಅಲ್ಲಲ್ಲಿ ತಂಬೂರಿ ಕಲಾವಿದ ತಂಡಗಳು ಪವಾಡ ಪುರುಷ ಘನನೀಲಿ ಶ್ರೀ ಸಿದ್ದಪ್ಪಾಜಿ ಗೀತೆಗಳನ್ನು ಹಾಡಿ ಕೊಂಡಾಡಿದರು. ಹೆಜ್ಜೆ ಹೆಜ್ಜೆಗೂ ನೀಲಗಾರರು ಜಾಗಟೆ, ಬೆತ್ತ ಹಿಡಿದು ಸಾಗುತ್ತಿದ್ದರು, ಶ್ರದ್ಧಾಭಕ್ತಿಯಿಂದ ಉರುಳು ಸೇವೆ ಮಾಡುತ್ತಿದ್ದರು. ಶ್ರೀ ಸಿದ್ದಪ್ಪಾಜಿ ಗದ್ದುಗೆ ಮುಂಭಾಗ ಧೂಪದ ಹೊಂಡದಲ್ಲಿ ಕರ್ಪೂರ, ಧೂಪ ಹಚ್ಚಿ ಇಷ್ಟಾರ್ಥ ನೆರವೇರಿಸುವಂತೆ ಬೇಡುತ್ತಿದ್ದರು.
ತಿಂಡಿ-ತಿನಿಸು, ವಸ್ತುಗಳ ಖರೀದಿ ಜೋರಾಗಿತ್ತು. ಅಪ್ಪನ ಕೈ ಹಿಡಿದು ಜಾತ್ರೆಯಲ್ಲಿ ಕಂಡದ್ದನು ತೆಗೆಸಿಕೊಂಡ ಮಕ್ಕಳ ಖುಷಿಗೆ ಪಾರವೇ ಇರಲಿಲ್ಲ. ಮಕ್ಕಳು, ಯುವಕರು, ಯುವತಿಯರು ಜಾತ್ರೆಯಲ್ಲಿದ್ದ ಮನರಂಜನೆ ಆಟವನ್ನಾಡಿ ಸಂಭ್ರಮಿಸಿದರು. ಹೊಟ್ಟೆ ಪಾಡಿಗಾಗಿ ಹಗ್ಗದ ಮೇಲೆ ಪಾದವಿಟ್ಟು ಭಕ್ತರಿಂದ ಕಾಣಿಕೆ ಪಡೆಯಲು ಸರ್ಕಸ್ ಮಾಡುತ್ತಿದ್ದ ಬಾಲಕಿ ಬದುಕಿನ ವೈರುಧ್ಯಗಳ ದರ್ಶನವೂ ಆಯಿತು.
ಸಹ ಪಂಕ್ತಿ ಭೋಜನ: ಶ್ರೀ ಮಂಟೇಸ್ವಾಮಿ, ಸಿದ್ದಪ್ಪಾಜಿ ಪರಂಪರೆಯಲ್ಲಿ ಸಹ ಪಂಕ್ತಿ ಭೋಜನ ಸೇವೆ ವಿಶೇಷವಾದದ್ದು. ಐದು ದಿನಗಳ ವೈಶಿಷ್ಟ್ಯ ಆಚರಣೆಗಳಲ್ಲಿ ಪ್ರಮುಖ ಘಟ್ಟ ಪಂಕ್ತಿಸೇವೆ ಆಚರಣೆಯಾಗಿದೆ. ಅಂತೆಯೇ, ದೇವಾಲಯ ಹೊರವಯಲದಲ್ಲಿರುವ ಜಮೀನುಗಳಲ್ಲಿ ಸ್ನೇಹಿತರು, ಕುಟುಂಬ ಸಮೇತರಾಗಿ ಬಿಡಾರ ಹೂಡಿದ್ದವರು ಅಡುಗೆ ತಯಾರಿಸಿ ಕಂಡಾಯ, ಬೆತ್ತಗಳಿಗೆ ಪೂಜೆ ಸಲ್ಲಿಸಿದರು. ನೆಂಟರಿಷ್ಟರು, ಹಿತೈಷಿಗಳು ಜತೆಗೆ ಒಟ್ಟಾಗಿ ಕುಳಿತು ಬಾಡೂಟ ಸವಿದು ಖುಷಿ ಪಟ್ಟರು.
ಪೊಲೀಸರ ಸರ್ಪಗಾವಲು: ಚಿಕ್ಕಲ್ಲೂರು ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಹೈಕೋರ್ಟ್ ಆದೇಶ ಪಾಲನೆಗೆ ಪೊಲೀಸರು ಪ್ರಾಣಿ ಬಲಿ ತಡೆಗೆ ಸಕಲ ವ್ಯವಸ್ಥೆ ಮಾಡಿಕೊಂಡಿದ್ದರು. ಜಾತ್ರೆಗೆ ಭಕ್ತರು ಪ್ರವೇಶಿಸುವ ರಸ್ತೆಗಳಲ್ಲಿ 4 ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿದ್ದರು. ಕುರಿ, ಕೋಳಿ ತರದಂತೆ ನಿಗಾವಹಿಸಿದ್ದರು. ಸೆಕ್ಟರ್ ಅಧಿಕಾರಿಗಳು ದಿನದ ಮೂರು ಪಾಳಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. 600ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, ಗೃಹರಕ್ಷಕ ಸಿಬ್ಬಂದಿ ಕಾರ್ಯ ನಿರ್ವಹಿಸಿದರು. ಇಷ್ಟಾದರೂ ಭಕ್ತರು ಕ್ಷೇತ್ರದ ಹೊರಭಾಗದ ಜಮೀನುಗಳು, ತೋಟದ ಮನೆಗಳಲ್ಲಿ ಕುರಿ, ಕೋಳಿ ಮಾಂಸದ ಆಹಾರ ತಯಾರಿಸಿ ಪಂಕ್ತಿ ಸೇವೆ ನಡೆಸಿ ಸಂಪ್ರಾದಯ ಮುಂದುವರಿಸಿದರು.
ಭಕ್ತರ ಸಂಖ್ಯೆ ದುಪ್ಪಟ್ಟು: ಐದು ದಿನಗಳ ಜಾತ್ರೆಯಲ್ಲಿ ಪಂಕ್ತಿಸೇವೆ ದಿನ ಭಕ್ತರ ಸಂಖ್ಯೆ ದುಪ್ಟಟ್ಟಾಗಿತ್ತು. ಕಾರು, ಗೂಡ್ಸ್ ಆಟೋ, ಟ್ರ್ಯಾಕ್ಟರ್ ಇನ್ನಿತರ ವಾಹನಗಳಲ್ಲಿ ಭಕ್ತರು ಜಾತ್ರೆಗೆ ಬಂದರು. ಭಕ್ತರಿಗೆ ಕೆಎಸ್‌ಆರ್‌ಟಿಸಿ ಸಾರಿಗೆ ಬಸ್ ವ್ಯವಸ್ಥೆ ಹೆಚ್ಚಾಗಿ ಕಲ್ಪಿಸಲಾಗಿತ್ತು. ಖಾಸಗಿ ಬಸ್ ಸಂಚಾರ ವಿರಳವಾಗಿತ್ತು.
ಸಿದ್ಧರ ಸೇವೆ: ಪಂಕ್ತಿ ಸೇವೆಯನ್ನು ಸಿದ್ಧರ ಸೇವೆ ಅಥವಾ ನೀಲಗಾರರ ಸೇವೆ ಎಂದು ಕರೆಯಲಾಗುತ್ತದೆ. ಇದರ ಹಿಂದಿನ ದಿನ ಮುಡಿಸೇವೆ, ನೀಲಗಾರರ ಧೀಕ್ಷೆ ಸೇವೆ ನಡೆಯುವುದು ಪರಂಪರೆಗೆ ಮರು ನವೀಕರಣಗೊಳಿಸುವಂತೆ ಒಕ್ಕಲಿನ ಮಕ್ಕಳಿಗೆ ನೀಲಗಾರ ಧೀಕ್ಷೆ (ಗುಡ್ಡಪ್ಪ) ಕೊಡಿಸುತ್ತಾರೆ. ಮಂಟೇಸ್ವಾಮಿ ಒಕ್ಕಲು ನಿಷ್ಠೆಯಿಂದ ಮಾಡುವ ಸೇವೆ ಇದಾಗಿದೆ. ಪಂಕ್ತಿ ಸೇವೆಯನ್ನು ಕುಳೇಳು- ಹದಿನೆಂಟು ಜಾತಿಯೂ ನೆರವೇರಿಸುತ್ತದೆ. ಒಕ್ಕಲಿನ ಆಯಾ ಸಮುದಾಯ ಜನರು ಅವರವರ ಆಹಾರ ಪದ್ಧತಿಯಂತೆ ಸಿದ್ಧರ ಸೇವೆಯ ದಿನ ಅಡುಗೆ ತಯಾರಿಸಿ ಎಡೆ ಇಡುತ್ತಾರೆ. ಬಳಿಕ ಸಹ ಪಂಕ್ತಿ ಭೋಜನ ನಡೆಸುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net