ಗುಂಡ್ಲುಪೇಟೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಪ್ರತಿಭಟನೆ ನಡೆಸಿದರು. ಕೆ.ಆರ್.ಆದರ್ಶ, ಮೋಹನ್‌ದಾಸ್, ವಿಸ್ವಾಸ್, ಅರುಣ್‌ಗೌಡ, ಶ್ರೀನಿವಾಸ್‌ನಾಯಕ (ಕಣ್ಣಪ್ಪ), ಸುನೀಲ್, ಪ್ರವೀಣ್, ಮಣಿ, ಚಂದ್ರು ಇತರರಿದ್ದರು.
ಗುಂಡ್ಲುಪೇಟೆ:ಅಡುಗೆ ಅನಿಲ ಬೆಲೆ ಹೆಚ್ಚಳ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರ ಸರಿಯಲ್ಲ ಎಂದು ಆರೋಪಿಸಿ ಯುವ ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪಟ್ಟಣದಲ್ಲಿ ಖಾಲಿ ಸಿಲಿಂಡರ್‌ಗಳನ್ನು ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಗಿದ ಕಾರ್ಯಕರ್ತರು ಸಾರಿಗೆ ಸಂಸ್ಥೆ ನಿಲ್ದಾಣ ಮುಂಭಾಗ ಸ್ವಲ್ಪ ಹೊತ್ತು ರಸ್ತೆ ಸಂಚಾರ ತಡೆದು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ವಾಣಿಜ್ಯ ಬಳಕೆಯ ಅಡುಗೆ ಅನಿಲದ ಬೆಲೆಯನ್ನು ಏಕಾಏಕಿ ಒಂದು ಸಾವಿರದಷ್ಟು ಏರಿಕೆ ಮಾಡಲಾಗಿದೆ. ಇದರಿಂದ ಹೋಟೆಲ್ ಉದ್ಯಮದವರಲ್ಲದೆ ರಸ್ತೆ ಬದಿಯಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡುವ ಬಡ, ಮಧ್ಯಮ ವರ್ಗದ ಜನರು ವ್ಯಾಪಾರ ಸ್ಥಗಿತಗೊಳಿಸಿ ಖಾಲಿ ಕೂರಬೇಕಾಗಿದೆ. ನಿತ್ಯದ ಜೀವನ, ಮಕ್ಕಳ ವಿದ್ಯಾಭ್ಯಾಸಕ್ಕೆ ಏನು ಮಾಡಬೇಕೆಂದು ತೋಚದೆ ಕಂಗಲಾಗಿದ್ದಾರೆ. ಗೃಹ ಬಳಕೆಯ ಸಿಲಿಂಡರ್ ಬೆಲೆ ಕೂಡ ಹೆಚ್ಚಳವಾಗಿದೆ. ಇದರಿಂದ ಆಹಾರದ ಬೆಲೆ ಏರಿಕೆಯಾಗಿ ಶ್ರೀಸಾಮಾನ್ಯರಿಗೆ ಇದರ ಬಿಸಿ ತಟ್ಟಲಿದೆ. ಆದ್ದರಿಂದ ಜನಸಾಮಾನ್ಯರಿಗೆ ಹೊರೆಯಾಗದ ರೀತಿಯಲ್ಲಿ ಕಡಿಮೆ ಮಾಡಲು ಕೂಡಲೇ ದರ ಇಳಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಕೆ.ಆರ್.ಆದರ್ಶ, ಮೋಹನ್‌ದಾಸ್, ಗುಂಡ್ಲುಪೇಟೆ ಬ್ಲಾಕ್ ಅಧ್ಯಕ್ಷ ವಿಸ್ವಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್‌ಗೌಡ, ಪುರಸಭೆ ಮಾಜಿ ಉಪಾಧ್ಯಕ್ಷ ಶ್ರೀನಿವಾಸ್‌ನಾಯಕ(ಕಣ್ಣಪ್ಪ), ಸುನೀಲ್, ಪ್ರವೀಣ್, ಮಣಿ ಮಡಹಳ್ಳಿ, ಚಂದ್ರು ಮಾಡ್ರಹಳ್ಳಿ ಇತರರಿದ್ದರು.