ಈ ಸಂಬಂಧ ಬೆಂಗಳೂರಿನಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಮಾಧ್ಯಮದವರೊಂದಿಗೆ ಮಾತನಾಡಿ, ಬಂಡೀಪುರ, ನಾಗರಹೊಳೆ, ಕಾಳಿ, ಬಿಳಿಗಿರಿರಂಗನಬೆಟ್ಟ ಮತ್ತು ಭದ್ರಾ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಮಲೆ ಮಹದೇಶ್ವರ ಬೆಟ್ಟ, ದಾಂಡೇಲಿ, ಕೆ.ಗುಡಿ ಸೇರಿದಂತೆ ರಾಜ್ಯದ ವಿವಿಧ ವನ್ಯಜೀವಿಧಾಮ ಮತ್ತು ಕಾನನಗಳಲ್ಲಿ ಸಫಾರಿ ನಡೆಯುತ್ತಿದ್ದು, ರಾಜ್ಯದ ಮೂಲೆಮೂಲೆಗಳಿಂದ ಅಷ್ಟೇ ಅಲ್ಲದೆ ದೇಶ ವಿದೇಶಗಳಿಂದಲೂ ಪ್ರವಾಸಿಗರು ಆಗಮಿಸುತ್ತಾರೆ. ಅದೃಷ್ಟವಶಾತ್ ಈವರೆಗೆ ಸಫಾರಿ ಪ್ರದೇಶಗಳಲ್ಲಿ ಆನೆಗಳು, ಹುಲಿಗಳು ಸೇರಿದಂತೆ ಯಾವುದೇ ವನ್ಯಮೃಗಗಳು ಸಫಾರಿ ವಾಹನಗಳ ಮೇಲೆ ದಾಳಿ ಮಾಡಿ ಜೀವಹಾನಿ ಮಾಡಿದ ಘಟನೆಗಳು ಸಂಭವಿಸಿರುವುದಿಲ್ಲ. ಆದಾಗ್ಯೂ ಅನಾಹುತ ಸಂಭವಿಸುವ ಮೊದಲೇ ಎಚ್ಚೆತ್ತುಕೊಳ್ಳುವ ಅಗತ್ಯವಿದೆ. ಪ್ರವಾಸಿಗರ ಸುರಕ್ಷತಾ ದೃಷ್ಟಿಯಿಂದ ತೆರೆದ ವಾಹನಗಳಿಗೆ ಅವಕಾಶ ಮಾಡಿಕೊಡುವುದು ಬೇಡ, ಬಸ್ ಸಫಾರಿ ನಡೆಸಲು ತೀರ್ಮಾನ ಮಾಡಲಾಗಿದೆ ಎಂದಿದ್ದಾರೆ.