ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೋ ಶಾಲೆ ತೆರೆಯುವಂತೆ ಬಿಜೆಪಿ ಮಂಡಲಾಧ್ಯಕ್ಷ ಕೆ.ಪಿ ವೃಷಭೇಂದ್ರಸ್ವಾಮಿ ಹನೂರಿನಲ್ಲಿ ಗ್ರೇಡ್ 2 ತಹಸೀಲ್ದಾರ್ ಪ್ರಕಾಶ್‌ಗೆ ಮನವಿ ಸಲ್ಲಿಸಿದರು. ಜಡೇಸ್ವಾಮಿ, ಮಹದೇವಸ್ವಾಮಿ, ಬಸವಣ್ಣ, ಷಣ್ಮುಗ ಇತರರಿದ್ದರು.
ಹನೂರು: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೋ ಶಾಲೆಗಳನ್ನು ತೆರೆಯಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಿಜೆಪಿ ಹನೂರು ಮಂಡಲದ ಅಧ್ಯಕ್ಷ ಕೆ.ಪಿ ವೃಷಭೇಂದ್ರಸ್ವಾಮಿ ಸೋಮವಾರ ಗ್ರೇಡ್ 2 ತಹಸೀಲ್ದಾರ್ ಪ್ರಕಾಶ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಅವರು ಮಾತನಾಡಿ, ತಾಲೂಕಿನಲ್ಲಿ ಸುಮಾರು 65 ಸಾವಿರಕ್ಕೂ ಜಾನುವಾರುಗಳಿವೆ. ಮಳೆಯಿಲ್ಲದೆ ಮೇವು ಹಾಗೂ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಬಿತ್ತನೆ ಮಾಡಿರುವ ಫಸಲು ಹಾಳಾಗಿದೆ. ಇದರಿಂದ ರೈತರು ತುಂಬ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇತ್ತ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಜನರು ಬಿಂದಿಗೆ ನೀರಿಗೂ ಕಷ್ಟ ಪಡುವಂತಾಗಿದೆ ಎಂದು ಹೇಳಿದರು.
ಸರ್ಕಾರ ಹನೂರು ತಾಲೂಕನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಿರುವುದು ಸ್ವಾಗತಾರ್ಹ. ಆದರೆ 15 ದಿನ ಕಳೆದರೂ ತಾಲೂಕು ಆಡಳಿತ ಬರ ನಿರ್ವಹಣೆಗಾಗಿ ಯಾವುದೇ ಕ್ರಮಕೈಗೊಳ್ಳದಿರುವುದು ವಿಪರ್ಯಾಸ. ಇದರಿಂದ ರೈತರು ಜಾನುವಾರುಗಳಿಗೆ ಮೇವು ಹಾಗೂ ನೀರೋದಗಿಸುವುದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಇದನ್ನು ಮನಗಂಡು ಗ್ರಾಪಂ ಮಟ್ಟದಲ್ಲಿ ಗೋ ಶಾಲೆಯನ್ನು ತೆರೆಯಬೇಕು. ಜನರಿಗೆ ಸಮರ್ಪಕ ಕುಡಿಯುವ ನೀರು ಒದಗಿಸಬೇಕು. ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ದೊರಕಿಸಿಕೊಡಬೇಕು. ಬೆಳೆ ಸಾಲವನ್ನು ಮನ್ನಾ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಪ್ರಕಾಶ್ ತಿಳಿಸಿದರು. ಈ ಸಂದರ್ಭದಲ್ಲಿ ಶಿರಸ್ತೇದಾರ್ ನಾಗೇಂದ್ರ, ಮುಖಂಡರಾದ ಜಡೇಸ್ವಾಮಿ, ನಿರಂಜನ್, ಮಹದೇವಸ್ವಾಮಿ, ಬಸವಣ್ಣ, ಕುಮಾರ್, ಷಣ್ಮುಗ, ದಾಸಪ್ಪ ಗೌಡ, ಮಹದೇವ, ಮಹೇಶ್‌ನಾಯ್ಕ ಹಾಗೂ ಇನ್ನಿತರರಿದ್ದರು.