ಏ.21ರಂದು ಮಧ್ಯರಂಗನಾಥಸ್ವಾಮಿ ದೇವಾಲಯ ಲೋಕಾರ್ಪಣೆ

ಶಿವನಸಮುದ್ರ ಗ್ರಾಮದಲ್ಲಿರುವ ಶ್ರೀ ಜಗನ್ಮೋಹನ ಮಧ್ಯರಂಗನಾಥಸ್ವಾಮಿ ದೇವಸ್ಥಾನಕ್ಕೆ ಶಾಸಕ ಎಂ.ಆರ್.ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿದರು.
ಶಿವನಸಮುದ್ರ ಗ್ರಾಮದಲ್ಲಿರುವ ಶ್ರೀ ಜಗನ್ಮೋಹನ ಮಧ್ಯರಂಗನಾಥಸ್ವಾಮಿ ದೇವಸ್ಥಾನಕ್ಕೆ ಶಾಸಕ ಎಂ.ಆರ್.ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಹನೂರು ಶಾಸಕ ಎಂ.ಆರ್.ಮಂಜುನಾಥ್ ಮಾಹಿತಿ
ಕೊಳ್ಳೇಗಾಲ: ಜೀರ್ಣ್ಣೋದ್ಧಾರಗೊಂಡಿರುವ ಪುರಾಣ ಪ್ರಸಿದ್ಧ ಶ್ರೀ ಮಧ್ಯರಂಗನಾಥಸ್ವಾಮಿ ದೇವಾಲಯ ಏ.21ರಂದು ಲೋಕಾರ್ಪಣೆ ಗೊಳ್ಳಲಿದೆ ಎಂದು ಹನೂರು ಶಾಸಕ ಎಂ.ಆರ್.ಮಂಜುನಾಥ್ ಹೇಳಿದರು.
ತಾಲೂಕಿನ ಶಿವನಸಮುದ್ರ ಗ್ರಾಮದಲ್ಲಿರುವ ಶ್ರೀ ಜಗನ್ಮೋಹನ ಮಧ್ಯರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿ ಬಳಿಕ ಮಾತನಾಡಿದರು. ಮಧ್ಯರಂಗನಾಥ ಸ್ವಾಮಿ ದೇವಾಲಯ, ರಾಜಗೋಪುರ, ವಿಮಾನ ಗೋಪುರ ಹಾಗೂ ರಂಗನಾಯಕಿ ಅಮ್ಮನವರ ದೇವಾಲಯ ಶಿಥಿಲಗೊಂಡಿತ್ತು. ಹೀಗಾಗಿ ಧಾರ್ಮಿಕ ದತ್ತಿ , ಮುಜರಾಯಿ, ಪ್ರವಾಸೋದ್ಯಮ ಇಲಾಖೆ ಹಾಗೂ ದಾನಿಗಳ ಸಹಕಾರದಿಂದ ದೇವಾಲಯವನ್ನು ಜೀರ್ಣ್ಣೋದ್ಧಾರ ಮಾಡಲಾಗಿದ್ದು, ಏ.17ರಿಂದಲೇ ದೇವಾಲಯ ಲೋಕಾರ್ಪಣೆ, ಪೂಜಾ ಕೈಂಕರ್ಯ ಹಾಗೂ ಧಾರ್ಮಿಕ ವಿಧಿ ವಿಧಾನಗಳು ಆರಂಭಗೊಳ್ಳಲಿದೆ. ಏ.21 ರಂದು ದೇವಾಲಯವನ್ನು ಉಪ ಮು ಖ್ಯಮಂತ್ರಿ ಡಿ.ಕೆ ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಮುಜರಾಯಿ ಸಚಿವ ರಾಮಲಿಂಗರೆಡ್ಡಿ, ಜಿಲ್ಲಾ ಉಸ್ತು ವಾರಿ ಸಚಿವ ಕೆ.ವೆಂಕಟೇಶ್, ಲೋಕಸಭಾ ಸದಸ್ಯ ಸುನೀಲ್ ಬೋಸ್, ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ, ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣ ಮೂರ್ತಿ, ಗುಂಡ್ಲುಪೇಟೆ ಶಾಸಕ ಎಚ್.ಎಂ ಗಣೇಶ್ ಪ್ರಸಾದ್ ಆಗಮಿಸಲಿದ್ದಾರೆ. ಜಿಲ್ಲಾಧಿಕಾರಿ ಶ್ರೀರೂಪಾ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.
ಪವಿತ್ರ ಧಾರ್ಮಿಕ ಕ್ಷೇತ್ರಗಳ ತಿರಂಗಗಳಲ್ಲಿ ಒಂದಾಗಿರುವ ಶ್ರೀ ಮಧ್ಯರಂಗ ನಾಥ ದೇವಾಲಯ ನಮ್ಮ ಜಿಲ್ಲೆಯಲ್ಲಿರುವುದು ಹೆಮ್ಮೆಯಾಗಿದೆ. ರಂಗನಾಥಸ್ವಾಮಿಯ ಉದ್ಭವ ಮೂರ್ತಿ ಕ್ಷೇತ್ರದಲ್ಲಿ ಇಂದ್ರ ದೇವನಿಂದ ಪೂಜಿಸಲ್ಪಟ್ಟಿದೆ ಎಂಬ ಪುರಾಣವಿರುವುದು ವಿಶೇಷ. ಮೊದಲು ಸರಳವಾಗಿ ದೇವಾಲಯವನ್ನು ಲೋಕಾರ್ಪಣೆ ಮಾಡಲು ಚಿಂತಿಸಲಾಗಿತ್ತು. ಇದೀಗ ಅದ್ದೂರಿಯಾಗಿಯೇ ನಡೆಯಲಿದೆ. ಲೋಕಾರ್ಪಣೆಗೆ ಸಕಲ ಸಿದ್ಧತೆ ಆರಂಭಗೊಂಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಸಮಾರಂಭ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ತಹಸೀಲ್ದಾರ್ ಬಸವರಾಜು, ತಾಪಂ ಇಒ ಸುರೇಶ್, ನಿರ್ಮಿತಿ ಕೇಂದ್ರದ ಇಂಜಿನಿಯರ್ ರವಿಕುಮಾರ್, ಸತ್ತೇಗಾಲ ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲೇಶ್, ಪಿಎಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ನಂಜುಂಡಸ್ವಾಮಿ, ವಿಜಯಕುಮಾರ್, ಅರ್ಚಕರಾದ ಮಧುಸೂದನ್, ಶ್ರೀನಿವಾಸ್ ಶಾಸ್ತ್ರಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net