ನಿಲ್ಲದ ಓವರ್ ಲೋಡ್ ಟಿಪ್ಪರ್‌ಗಳ ಸಂಚಾರ

 ಗುಂಡ್ಲುಪೇಟೆ ಚಾಮರಾಜನಗರ ಜಿಲ್ಲಾ ಸಂಪರ್ಕ ರಸ್ತೆಲ್ಲಿರುವ ಕಗ್ಗಳದ ದೊಡ್ಡ ಸೇತುವೆಯ ಕಮಾನುಗಳು ಅಧಿಕತೂಕದ ಟಿಪ್ಪರುಗಳ ಸಂಚಾರದಿಂದ ಕುಸಿಯುತ್ತಿರುವುದು.
ಗುಂಡ್ಲುಪೇಟೆ ಚಾಮರಾಜನಗರ ಜಿಲ್ಲಾ ಸಂಪರ್ಕ ರಸ್ತೆಲ್ಲಿರುವ ಕಗ್ಗಳದ ದೊಡ್ಡ ಸೇತುವೆಯ ಕಮಾನುಗಳು ಅಧಿಕತೂಕದ ಟಿಪ್ಪರುಗಳ ಸಂಚಾರದಿಂದ ಕುಸಿಯುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಸಾರ್ವಜನಿಕರಿಂದ ತೀವ್ರ ಬೇಸರ ವ್ಯಕ್ತ
  • ಇಲಾಖೆಗಳ ನಡುವಿನ ಸಮನ್ವಯ ಕೊರತೆ
ಗುಂಡ್ಲುಪೇಟೆ: ತಾಲೂಕಿನ ರಸ್ತೆಗಳಲ್ಲಿ ಓವರ್ ಲೋಡ್ ಟಿಪ್ಪರ್‌ಗಳ ಮಿತಿ ಮೀರಿದ ಸಂಚಾರಕ್ಕೆ ಬ್ರೇಕ್ ಹಾಕಲು ಜಿಲ್ಲಾಡಳಿತ ಪ್ರಯತ್ನ ನಡೆಸಿದೆ. ಆದರೆ ಯಾವುದೇ ಪರಿಣಾಮ ಬೀರದ ಬಗ್ಗೆ ಸಾರ್ವಜನಿಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಕಂದಾಯ, ಗಣಿ, ಪ್ರಾದೇಶಿಕ ಸಾರಿಗೆ ಮತ್ತು ಪೊಲೀಸ್ ಇಲಾಖೆಗಳ ನಡುವಿನ ಸಮನ್ವಯತೆ ಕೊರತೆಯಿಂದ ಟಿಪ್ಪರುಗಳ ಅರ್ಭಟ ಜೋರಾಗಿದೆ. ಅಲ್ಲಲ್ಲಿ ಪೊಲೀಸರು ನಿಯಮಬಾಹಿರವಾಗಿ ಸಂಚರಿಸುವ ಟಿಪ್ಪರ್‌ಗಳ ಮೇಲೆ ದಂಡಾಸ್ತ್ರ ಪ್ರಯೋಗಿಸುತ್ತಿದ್ದಾರೆ. ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಟಿಪ್ಪರ್‌ಗಳನ್ನು ವಶಕ್ಕೆ ಪಡೆದು ದಂಡ ವಿಧಿಸುತ್ತಿದ್ದಾರೆ. ಆದರೆ ಗಣಿ ಇಲಾಖೆಯವರು ಮಾತ್ರ ಇದಕ್ಕೂ ನಮಗೂ ಸಂಬಂಧವಿಲ್ಲ ಎಂಬಂತೆ ಸುಮ್ಮನಿದ್ದಾರೆ ಎಂಬುದು
ಸಾರ್ವಜನಿಕರ ಆರೋಪ:
ಪೊಲೀಸ್ ಇಲಾಖೆಯು ಗುಂಡ್ಲುಪೇಟೆ, ತೆರಕಣಾಂಬಿ ಹಾಗೂ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಂಸ್ಯಾಂಡ್, ಜಲ್ಲಿ ಹಾಗೂ ಕಲ್ಲುಗಳನ್ನು ಹೊತ್ತ ಟಿಪ್ಪರ್‌ಗಳನ್ನು ಪರಿಶೀಲಿಸಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳ ಬಗ್ಗೆ ಪ್ರಾದೇಶಿಕ ಸಾರಿಗೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಗಳಿಗೆ ಪತ್ರ ಬರೆದು 2025ನೇ ಸಾಲಿನಲ್ಲಿ 5,76,686 ರೂ. ದಂಡ ವಿಧಿಸಿದೆ. 2025ರಲ್ಲಿ 282 ಹಾಗೂ 2026 ಏ. ವರೆಗೆ 740 ಪ್ರಕರಣ ದಾಖಲಿಸಿದೆ.
ಕಳೆದ 2-3 ವರ್ಷಗಳಿಂದ ಚಾಮರಾಜನಗರ ತಾಲೂಕಿನ ಉಡೀಗಾಲ, ಕೊತ್ತಲವಾಡಿ, ಕಟ್ಣವಾಡಿ, ಕಿಲಗೆರೆ ಹಾಗೂ ವಿವಿಧ ಗಣಿಗಳಿಂದ ತೆರಕಣಾಂಬಿ ಮಾರ್ಗವಾಗಿ ಓವರ್ ಲೋಡ್ ಟಿಪ್ಪರ್‌ಗಳ ಸಂಚಾರ ಹೆಚ್ಚಾಗುತ್ತಿದೆ. ಜತೆಗೆ ಕರಿಕಲ್ಲು ಗಣಿಗಳ ನಿರುಪಯುಕ್ತವಾಗಿರುವ ಬಂಡೆಗಳನ್ನು ಕ್ರಷರ್‌ಗಳಿಗೆ ಸಾಗಣೆ ಮಾಡಲಾಗುತ್ತಿದ್ದು ಈ ಟಿಪ್ಪರ್‌ಗಳು ತಮ್ಮ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಭಾರದ ಕಲ್ಲು ಸಾಗಣೆಯಲ್ಲಿ ತೊಡಗಿವೆ. ಸರ್ಕಾರಕ್ಕೆ ರಾಯಲ್ಟಿ ಪಾವತಿಸಲು ರಾತ್ರಿಯಿಡೀ ಓಡಾಡುತ್ತಾ ಸಾರ್ವಜನಿಕರ ನೆಮ್ಮದಿಗೆಡಿಸುತ್ತಿವೆ.
ಗ್ರಾಮಾಂತರ ರಸ್ತೆಗಳಲ್ಲಿ ನಿಗದಿತ ಮಿತಿಗಿಂತ ಅತ್ಯಧಿಕ ಪ್ರಮಾಣದ ಕಲ್ಲು ಸಾಗಣೆ ಮಾಡುವ ಟಿಪ್ಪರ್‌ಗಳಿಂದ ರಸ್ತೆಗಳು ಹಾಳಾಗಿವೆ. ಸಂಜೆಯಾಗುತ್ತಿದ್ದಂತೆ ಮೈತುಂಬಾ ಎಲ್‌ಇಡಿ ಬಲ್ಪ್ ಉರಿಸುತ್ತಾ ರಸ್ತೆಯ ತುಂಬಾ ಸಾಗುವ ಟಿಪ್ಪರುಗಳಿಂದ ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಹೋಗುವಂತಾಗಿದೆ. 40-50 ಟನ್ ಭಾರಹೊತ್ತ ಟಿಪ್ಪರುಗಳ ಸಂಚಾರದಿಂದ ಗುಂಡಿಬಿದ್ದ ರಸ್ತೆಗೆ ಲೋಕೋಪಯೋಗಿ ಇಲಾಖೆ ಇತ್ತೀಚೆಗೆ ಪ್ಯಾಚ್ ವರ್ಕ್ ಕಾಮಗಾರಿ ನಡೆಸಿದರೂ ವಾಹನಗಳ ಭಾರಕ್ಕೆ ಡಾಂಬರು ಕಿತ್ತುಬರುತ್ತಿದ್ದು ಸಣ್ಣಪುಟ್ಟ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ.
ಶಿಥಿಲವಾಗುತ್ತಿವೆ ಶತಮಾನದ ಸೇತುವೆಗಳು:
ಹಿಂದಿನಿಂದಲೂ ಮಳೆಗಾಲದಲ್ಲಿ ಕಾಡುಮೇಡುಗಳಿಂದ ಹರಿದುಬರುತ್ತಿದ್ದ ಭಾರೀ ಪ್ರಮಾಣದ ನೀರು ಗುಂಡ್ಲು ನದಿ ಸೇರಲು ಇಟ್ಟಿಗೆ, ಗಾರೆ ಬಳಸಿ ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಿಸಿದ್ದ ಈ ಸೇತುವೆಗಳು ಓವರ್ ಲೋಡ್ ಟಿಪ್ಪರುಗಳ ಭಾರಕ್ಕೆ ಶಿಥಿಲವಾಗುತ್ತಿವೆ. ಗಾರೆಯ ಚಕ್ಕೆಗಳು ಉದುರಿ ಕಮಾನುಗಳ ಇಟ್ಟಿಗೆಗಳು ಒಂದೊಂದಾಗಿ ಕಳಚಿ ಬೀಳುತ್ತಿದ್ದು, ಇಡೀ ಸೇತುವೆಯೇ ಕುಸಿದು ಬೀಳುವ ಆತಂಕ ಎದುರಾಗಿದೆ.
ಲೋಕೋಪಯೋಗಿ ಇಲಾಖೆಯಿಂದ ಪತ್ರ:
ಇಂಡಿಯನ್ ರೋಡ್ ಕಾಂಗ್ರೆಸ್ ನಿಯಮದ ಪ್ರಕಾರ ಸಿಂಗಲ್ ಆಕ್ಸೆಲ್ ವಾಹನವು ಗರಿಷ್ಠ 12 ಟನ್, ಡಬಲ್ ಆಕ್ಸೆಲ್ ವಾಹನವು 16.20 ಟನ್ ಭಾರವನ್ನು ರಸ್ತೆಯ ಮೇಲೆ ಸಾಗಣೆ ಮಾಡಲು ಅವಕಾಶವಿದೆ. ಈ ರಸ್ತೆಗಳನ್ನು ಇಷ್ಟು ಭಾರದ ವಾಹನಗಳ ಸಂಚಾರಕ್ಕೆ ವಿನ್ಯಾಸಗೊಳಿಸಿ ನಿರ್ಮಿಸಲಾಗಿದೆ. ಆದರೆ ಅಧಿಕ ಭಾರದ ವಾಹನಗಳ ಸಂಚಾರಕ್ಕೆ ಸೂಕ್ತವಾಗದ ಈ ರಸ್ತೆಗಳಲ್ಲಿ 40 ರಿಂದ 50 ಟನ್ ಭಾರಹೊತ್ತ ವಾಹನಗಳು ಸಂಚರಿಸುತ್ತಿರುವುದು ಕಂಡುಬಂದಿರುವ ಬಗ್ಗೆ ಲೋಕೋಪಯೋಗಿ ಇಲಾಖೆ ಜಿಲ್ಲಾಡಳಿತಕ್ಕೆ ಮೇಲಿಂದ ಮೇಲೆ ಪತ್ರ ಬರೆದಿದ್ದರೂ, ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಲೋಕೋಪಯೋಗಿ ಇಲಾಖೆ ಎಇಇ ರವಿಕುಮಾರ್ ತಿಳಿಸಿದ್ದಾರೆ.
ಗುಂಡ್ಲುಪೇಟೆ ಚಾಮರಾಜನಗರ ಜಿಲ್ಲಾ ಸಂಪರ್ಕ ರಸ್ತೆಯಲ್ಲಿ ಕಾಡಿನಿಂದ ಬರುವ ನೀರಿಗೆ ಅಡ್ಡಲಾಗಿ ಸ್ವಾತಂತ್ರ್ಯ ಪೂರ್ವದಲ್ಲಿ ಇಟ್ಟಿಗೆ ಹಾಗೂ ಗಾರೆಯಿಂದ ನಿರ್ಮಿಸಿದ ಸೇತುವೆ ತುಂಬಾ ಗಟ್ಟಿಮುಟ್ಟಾಗಿದ್ದರೂ, ಓವರ್ ಲೋಡ್ ಟಿಪ್ಪರುಗಳ ನಿರಂತರ ಸಂಚಾರದಿಂದ ಸಂಪೂರ್ಣ ಶಿಥಿಲವಾಗುತ್ತಿದೆ. ಮೊದಲೇ ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆ ಎದುರಿಸುತ್ತಿರುವ ಸರ್ಕಾರ ಹೊಸದಾಗಿ ಸೇತುವೆ ನಿರ್ಮಿಸುವುದು ಅಷ್ಟರಲ್ಲೇ ಇವೆ. ಆದ್ದರಿಂದ ಇನ್ನಾದರೂ ಕಂದಾಯ ಇಲಾಖೆ, ಪೊಲೀಸ್, ಪ್ರಾದೇಶಿಕ ಸಾರಿಗೆ ಮತ್ತು ಗಣಿ ಇಲಾಖೆಯವರು ಜಂಟಿ ಕಾರ್ಯಾಚರಣೆ ನಡೆಸಿ ಓವರ್ ಲೋಡ್ ಟಿಪ್ಪರ್ ಸಂಚಾರಕ್ಕೆ ಬ್ರೇಕ್ ಹಾಕಬೇಕು.
ಮಂಜುನಾಥ್, ಕಗ್ಗಳ ಗ್ರಾಮದ ರೈತ ಮುಖಂಡ
ಗುಂಡ್ಲುಪೇಟೆ ತಾಲೂಕಿನ ಮೂರು ಠಾಣೆಗಳ ವ್ಯಾಪ್ತಿಯಲ್ಲಿ ಸಾರಿಗೆ ನಿಯಮ ಉಲ್ಲಂಘಿಸಿದ ಟಿಪ್ಪರುಗಳ ವಿರುದ್ಧ ಪ್ರಕರಣ ದಾಖಲಿಸಿ, ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ತಂದು ಭಾರಿ ಪ್ರಮಾಣದಲ್ಲಿ ದಂಡ ವಿಧಿಸಲಾಗಿದೆ. ತೆರಕಣಾಂಬಿ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಸಂಚರಿಸುವ ಟಿಪ್ಪರುಗಳ ಪರಿಶೀಲನೆಗೆ ಚೆಕ್‌ಪೋಸ್ಟ್ ಆರಂಭಿಸಲಾಗುವುದು.
ಮುತ್ತುರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net