ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ನಿರಂಜನ ಕಾನ್ವೆಂಟ್ ಕೊಡುಗೆ ಅಪಾರ
ಯಳಂದೂರು ಪಟ್ಟಣದ ಕಾರಾಪುರ ವಿರಕ್ತಮಠದ ಆವರಣದಲ್ಲಿ ಆಯೋಜಿಸಿದ್ದ ನಿರಂಜನ ಕಾನ್ವೆಂಟ್‌ನ ರಜತ ಸಂಭ್ರಮ ಕಾರ್ಯಕ್ರಮವನ್ನು ಶಾಸಕ ಎ.ಆರ್. ಕೃಷ್ಣಮೂರ್ತಿ ಉದ್ಘಾಟಿಸಿದರು. ಬಸವರಾಜಸ್ವಾಮಿ ಒಡೆಯರ್, ಸಿದ್ದಮಲ್ಲಸ್ವಾಮಿಜಿ, ಮರಿತೋಂಟದಾರ್ಯಸ್ವಾಮಿಜಿ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶಾಸಕ ಎ.ಆರ್. ಕೃಷ್ಣಮೂರ್ತಿ ಬಣ್ಣನೆ
ಯಳಂದೂರು: ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಕಳೆದ 25 ವರ್ಷಗಳಿಂದಲೂ ಕಾರಾಪುರ ವಿರಕ್ತಮಠದ ವತಿಯಿಂದ ನಡೆಸಲ್ಪಡುತ್ತಿರುವ ನಿರಂಜನ ಕಾನ್ವೆಂಟ್ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಬಣ್ಣಿಸಿದರು.
ಪಟ್ಟಣದ ಭಾನುವಾರ ಕಾರಾಪುರ ವಿರಕ್ತಮಠದಲ್ಲಿರುವ ನಿರಂಜನ ಕಾನ್ವೆಂಟ್‌ನಲ್ಲಿ ಆಯೋಜಿಸಿದ್ದ 25ನೇ ಶಾಲಾ ವಾರ್ಷಿಕೋತ್ಸವದ ರಜತ ಸಂಭ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರಾಪುರ ವಿರಕ್ತ ಮಠಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸುವರ್ಣಾವತಿ ನದಿ ದಡದಲ್ಲಿ ಪ್ರಾಕೃತಿಕ ಸೊಬಗಿನಲ್ಲಿ ಪಟ್ಟಣದಿಂದ ದೂರ ಪ್ರಶಾಂತ ವಾತಾವರಣದಲ್ಲಿರುವ ಈ ಶಾಲೆಯನ್ನು ಈಗಿನ ಮಠದ ಸ್ವಾಮಿಜಿ ಬಸವರಾಜಸ್ವಾಮಿ ಒಡೆಯರ್ ಅವರು ಉತ್ತಮವಾಗಿ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಮನುಷ್ಯಜಾತಿ ತಾನೊಂದೇ ವಲಂ ಎಂಬಂತೆ ನಾವೆಲ್ಲರೂ ಒಂದೆ ಎಂದು ಎಲ್ಲ ಗ್ರಾಮೀಣ ಮಕ್ಕಳಿಗೂ ಉತ್ತಮ ಶಿಕ್ಷಣ ಇಲ್ಲಿ ದೊರೆಯುತ್ತಿದೆ. ಇಲ್ಲಿ ಓದಿದ ಮಕ್ಕಳು ವೈದ್ಯಕೀಯ, ಶಿಕ್ಷಣ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇಲ್ಲಿಗೆ ಶೌಚಗೃಹ ಹಾಗೂ ಸುತ್ತುಗೋಡೆಯನ್ನು ನಿರ್ಮಿಸಿ ಕೊಡುವಂತೆ ನನಗೆ ಮನವಿಯನ್ನು ಮಾಡಿದ್ದಾರೆ. ಈ ನಿಟ್ಟಿನಲ್ಲಿ ನಾನು ನನ್ನ ಮುಂದಿನ ಅನುದಾನದಲ್ಲಿ ಇದಕ್ಕೆ ಹಣವನ್ನು ನೀಡಿ ಇದನ್ನು ನಿರ್ಮಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಗೆದ್ದ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು. ಶಾಲಾ ಮಕ್ಕಳು ನಡೆಸಿಕೊಟ್ಟ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.
ಕಾರಾಪುರ ವಿರಕ್ತ ಮಠದ ಬಸವರಾಜ ಒಡೆಯರ್, ಮೈಸೂರು ನೀಲಕಂಠಸ್ವಾಮಿ ಮಠದ ನಿವೃತ್ತ ಪ್ರಾಂಶುಪಾಲ ಸಿದ್ದಮಲ್ಲಸ್ವಾಮಿಜಿ, ಗೌಡಳ್ಳಿ ವಿರಕ್ತ ಮಠದ ಮರಿತೋಂಟದಾರ್ಯಸ್ವಾಮಿಜಿ ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಮಹದೇವಪ್ಪ, ನಿರಂಜನ ಪ್ರತಿಷ್ಠಾನದ ಕಾರ್ಯದರ್ಶಿ ವೈ.ಎನ್. ಪ್ರಕಾಶ್ ಮಾತನಾಡಿದರು.
ಸಿಪಿಐ ಸುಬ್ರಹ್ಮಣ್ಯ, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ಪ್ರಭುಶಂಕರ್, ಬಸವಣ್ಣ, ಸಿಆರ್‌ಪಿ ತೇಜಸ್ವನಿ, ಮುಖ್ಯ ಶಿಕ್ಷಕಿ ಶಮಂತಕಮಣಿ ಇತರರು ಇದ್ದರು.