ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಮುಂಭಾಗ ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ (ಮುನ್ನಾ) ಅವರು ಡ್ರೋಣ್ ಸರ್ವೇ ಕಾರ್ಯಕ್ಕೆ ಚಾಲನೆ ನೀಡಿದರು. ರಾಜು, ಪುಟ್ಟಸ್ವಾಮಿ, ರಾಜೇಂದ್ರ (ದ್ವಾರ್ಕಿ), ಚಂದ್ರಶೇಖರ್, ವಿನೋದ್, ಎಕ್ಬಾಲ್‌ಖಾನ್,ನಾಗರಾಜು ಇನ್ನಿತರರಿದ್ದರು.
ನಗರದ ಚುಡಾ ವ್ಯಾಪ್ತಿಯಲ್ಲಿ ಡ್ರೋನ್‌ಸರ್ವೆ ಕಾರ್ಯಕ್ಕೆ ಚಾಲನೆ
ಸಾರ್ವಜನಿಕರು ಸಹಕಾರ ನೀಡಲು ಮನವಿ
ಚಾಮರಾಜನಗರ: ಅಮೃತ್ 2.0 ಯೋಜನೆಯಡಿಯಲ್ಲಿ ಚಾಮರಾಜನಗರವು ಡ್ರೋನ್ ಸರ್ವೆ ಕಾರ್ಯಕ್ಕೆ ಆಯ್ಕೆಯಾಗಿದ್ದು, ಡ್ರೋಣ್ ಸರ್ವೇಯಿಂದ ಅಗತ್ಯ ದಾಖಲೆಗಳು ಲಭ್ಯವಾಗಲು ಸಹಕಾರಿಯಾಗಲಿದೆ ಎಂದು ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ನಡೆಯುವ ಮಹಾಯೋಜನೆ (ಪರಿಷ್ಕೃತ-03) ತಯಾರಿಸುವ ಸಂಬಂಧ ಎಂಟು ದಿನಗಳ ಕಾಲ ನಡೆಯುವ ಡ್ರೋನ್ ಸರ್ವೆ ಕಾರ್ಯಕ್ಕೆ ಪ್ರಾಧಿಕಾರ ಕಚೇರಿ ಆವರಣದಲ್ಲಿ ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ (ಮುನ್ನಾ) ಬುಧವಾರ ಚಾಲನೆ ನೀಡಿ ಮಾತನಾಡಿದರು.
ಅಮೃತ್ 2.0 ಯೋಜನೆಯಡಿಯಲ್ಲಿ ಚಾಮರಾಜನಗರವು ಡ್ರೋಣ್ ಸರ್ವೆ ಕಾರ್ಯಕ್ಕೆ ಆಯ್ಕೆಯಾಗಿದ್ದು, ಮಹಾಯೋಜನೆ (ಪರಿಷ್ಕೃತ-03) ತಯಾರಿಸುವ ಸಂಬಂಧ ಎಂಟು ದಿನಗಳವರೆಗೆ ಡ್ರೋಣ್ ಸರ್ವೆ ಕಾರ್ಯವನ್ನು ಕೈಗೊಳ್ಳಲಾಗುತ್ತದೆ. ನಮ್ಮ ವ್ಯಾಪ್ತಿಗೆ ಬರುವ 31 ವಾರ್ಡುಗಳು ಹಾಗು 6 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಡಿಜಿಟಲ್ ಡ್ರೋಣ್ ಸರ್ವೆ ಕಾರ್ಯ ನಡೆಯಲಿದೆ. ಇದರಿಂದ ಚುಡಾಕ್ಕೆ ಸೇರಿದ ಎಲ್ಲಾ ಪ್ರದೇಶಗಳ ದಾಖಲೆಗಳು ಸಿಗಲಿದೆ. ಇದು ನಗರದ ಮುಂದಿನ ಅಭಿವೃದ್ದಿ ಕಾರ್ಯಗಳಿಗೆ ತುಂಬಾ ಸಹಕಾರಿಯಾಗಲಿದೆ ಎಂದರು.
ಚುಡಾ ವ್ಯಾಪ್ತಿಗೆ ಹಿಂದೆ 1570 ಎಕರೆ ಪ್ರದೇಶ ಇತ್ತು. ಈಗ ಇದು 12,780 ಎಕರೆಗೆ ಏರಿಕೆಯಾಗಿದೆ. ಡಿಜಿಟಲ್ ಡ್ರೋನ್ ಸರ್ವೆಯಿಂದ ಹಲವಾರು ಅನುಕೂಲಗಳಿದ್ದು, ಸಾರ್ವಜನಿಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಡ್ರೋಣ್ ಸರ್ವೆ ಕಾರ್ಯಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಚುಡಾ ಸದಸ್ಯರಾದ ರಾಜು, ಪುಟ್ಟಸ್ವಾಮಿ, ರಾಜೇಂದ್ರ (ದ್ವಾರ್ಕಿ), ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯ ಚಂದ್ರಶೇಖರ್, ವಿನೋದ್, ಎಕ್ಬಾಲ್‌ಖಾನ್,ನಾಗರಾಜು ಹಾಗೂ ಇತರರಿದ್ದರು.