ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಮುಂಭಾಗ ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ (ಮುನ್ನಾ) ಅವರು ಡ್ರೋನ್ ಸರ್ವೇ ಕಾರ್ಯಕ್ಕೆ ಚಾಲನೆ ನೀಡಿದರು. ರಾಜು, ಪುಟ್ಟಸ್ವಾಮಿ, ರಾಜೇಂದ್ರ (ದ್ವಾರ್ಕಿ), ಚಂದ್ರಶೇಖರ್, ವಿನೋದ್, ಎಕ್ಬಾಲ್‌ಖಾನ್, ನಾಗರಾಜು ಇನ್ನಿತರರಿದ್ದರು.
ಚಾಮರಾಜನಗರ: ಅಮೃತ್ 2.0 ಯೋಜನೆಯಡಿಯಲ್ಲಿ ಚಾಮರಾಜನಗರವು ಡ್ರೋನ್ ಸರ್ವೇ ಕಾರ್ಯಕ್ಕೆ ಆಯ್ಕೆಯಾಗಿದ್ದು, ಇದರಿಂದ ಅಗತ್ಯ ದಾಖಲೆಗಳು ಲಭ್ಯವಾಗಲು ಸಹಕಾರಿಯಾಗಲಿದೆ ಎಂದು ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ನಡೆಯುವ ಮಹಾಯೋಜನೆ (ಪರಿಷ್ಕೃತ-03) ತಯಾರಿಸುವ ಸಂಬಂಧ ಎಂಟು ದಿನಗಳ ಕಾಲ ನಡೆಯುವ ಡ್ರೋನ್ ಸರ್ವೇ ಕಾರ್ಯಕ್ಕೆ ಪ್ರಾಧಿಕಾರ ಕಚೇರಿ ಆವರಣದಲ್ಲಿ ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ (ಮುನ್ನಾ) ಬುಧವಾರ ಚಾಲನೆ ನೀಡಿ ಮಾತನಾಡಿದರು.
ಅಮೃತ್ 2.0 ಯೋಜನೆಯಡಿಯಲ್ಲಿ ನಮ್ಮ ವ್ಯಾಪ್ತಿಗೆ ಬರುವ 31 ವಾರ್ಡುಗಳು ಹಾಗು 6 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಡಿಜಿಟಲ್ ಡ್ರೋನ್ ಸರ್ವೇ ಕಾರ್ಯ ನಡೆಯಲಿದೆ. ಇದರಿಂದ ಚುಡಾಕ್ಕೆ ಸೇರಿದ ಎಲ್ಲ ಪ್ರದೇಶಗಳ ದಾಖಲೆಗಳು ಸಿಗಲಿದೆ. ಇದು ನಗರದ ಮುಂದಿನ ಅಭಿವೃದ್ದಿ ಕಾರ್ಯಗಳಿಗೆ ತುಂಬಾ ಸಹಕಾರಿಯಾಗಲಿದೆ ಎಂದರು.
ಚುಡಾ ವ್ಯಾಪ್ತಿಗೆ ಹಿಂದೆ 1,570 ಎಕರೆ ಪ್ರದೇಶ ಇತ್ತು. ಈಗ ಇದು 12,780 ಎಕರೆಗೆ ಏರಿಕೆಯಾಗಿದೆ. ಡಿಜಿಟಲ್ ಡ್ರೋನ್ ಸರ್ವೇಯಿಂದ ಹಲವಾರು ಅನುಕೂಲಗಳಿದ್ದು, ಸಾರ್ವಜನಿಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಸರ್ವೇ ಕಾರ್ಯಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಕೋರಿದರು.