ಜು.11 ರಂದು ರಾಷ್ಟ್ರೀಯ ಲೋಕ ಅದಾಲತ್

ಚಾಮರಾಜನಗರದ ನ್ಯಾಯಾಲಯದ ಎ.ಡಿ.ಆರ್.ಕಟ್ಟಡದ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಜಿ.ಪ್ರಭಾವತಿ ಮಾತನಾಡಿದರು.
ಚಾಮರಾಜನಗರದ ನ್ಯಾಯಾಲಯದ ಎ.ಡಿ.ಆರ್.ಕಟ್ಟಡದ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಜಿ.ಪ್ರಭಾವತಿ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಜಿ.ಪ್ರಭಾವತಿ ಸುದ್ದಿಗೋಷ್ಠಿ
  • ಆ..21 ರಿಂದ 23 ರವರೆಗೆ ವಿಶೇಷ ಲೋಕ್ ಅದಾಲತ್ ಆಯೋಜನೆ
ಚಾಮರಾಜನಗರ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳ ನಿರ್ದೇಶನದ ಮೇರೆಗೆ ಜುಲೈ ಮತ್ತು ಆಗಸ್ಟ್‌ನಲ್ಲಿ ಲೋಕ ಅದಾಲತ್‌ಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಜಿ.ಪ್ರಭಾವತಿ ತಿಳಿಸಿದರು.
ನಗರದ ನ್ಯಾಯಾಲಯದ ಎ.ಡಿ.ಆರ್.ಕಟ್ಟಡದ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಿಲ್ಲೆ ಎಲ್ಲ ನ್ಯಾಯಾಲಯಗಳಲ್ಲಿ ಜು.11ರಂದು ರಾಷ್ಟ್ರೀಯ ಲೋಕ ಅದಾಲತ್, ಜು.18 ಮತ್ತು ಆ.21ರಂದು ವಿಶೇಷ ಲೋಕ ಅದಾಲತ್ ಹಾಗೂ ಸರ್ವೋಚ್ಛ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಇತ್ಯರ್ಥ ಪಡಿಸಿಕೊಳ್ಳಲು ಆ.21ರಿಂದ 23ವರೆಗೆ ವಿಶೇಷ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಲೋಕ್ ಅದಾಲತ್ ಹಾಗೂ ವಿಶೇಷ ಲೋಕ ಅದಾಲತ್ ಗಳಲ್ಲಿ ಸಾರ್ವಜನಿಕರು ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಇಚ್ಚಿಸಿದಲ್ಲಿ, ಮುಂಚಿತವಾಗಿ ಚಾಮರಾಜನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿಗಳಾದ ಯಳಂದೂರು, ಕೊಳ್ಳೇಗಾಲ ಹಾಗೂ ಗುಂಡ್ಲುಪೇಟೆ ಗಳಲ್ಲಿ ಆನ್‌ಲೈನ್, ವಿಡಿಯೋ ಕಾನ್ಪರೆನ್ಸ್ , ಇ-ಮೇಲ್, ಎಸ್.ಎಂ.ಎಸ್. ವಾಟ್ಸಪ್ ಮೂಲಕ ಅಥವಾ ಖುದ್ದಾಗಿ ಹಾಜರಾಗಿ ಸಂಬಂಧಪಟ್ಟ ಪ್ರಾಧಿಕಾರ ಮತ್ತು ಸಮಿತಿಗಳನ್ನು ಸಂಪರ್ಕಿಸಿ, ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದರು.
ಲೋಕ್ ಅದಾಲತ್ ಸಂಬಂಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ರಾಜಿ ಯೋಗ್ಯ ಪ್ರಕರಣಗಳನ್ನು ಶೀಘ್ರ ಹಾಗೂ ಪರಿಣಾಮಕಾರಿ ತೀರ್ಮಾನಕ್ಕಾಗಿ ಎ.ಡಿ.ಆರ್. ಕಟ್ಟಡ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಚಾಮರಾಜನಗರ ದಲ್ಲಿ ಪೂರ್ವಭಾವಿ ಸಮಾಲೋಚನಾ ಕೇಂದ್ರವನ್ನು ತೆರೆಯಲಾಗಿದೆ. ಸಾರ್ವಜನಿಕರು ತಮ್ಮ ವ್ಯಾಜ್ಯ ಪೂರ್ವ ಪ್ರಕರಣ ಹಾಗೂ ಮಾನ್ಯ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ತಕ್ಷಣ ಪರಿಹಾರ ಪಡೆದುಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದೆ ಎಂದರು.
ಲೋಕ್ ಅದಾಲತ್‌ಗಳಲ್ಲಿ ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣಗಳು, ಕೈಗಾರಿಕಾ ಕಾರ್ಮಿಕ ವೇತನಕ್ಕೆ ಸಂಬಂಧಿಸಿದ ಪ್ರಕರಣಗಳು, ಗ್ರಾಹಕರ ವೇದಿಕೆ ಪ್ರಕರಣಗಳು, ರಿಯಲ್ ಎಸ್ಟೇಟ್ ಪ್ರಕರಣಗಳು, ಸಾಲ ವಸೂಲಾತಿ, ಚೆಕ್ ಅಮಾನ್ಯ ಪ್ರಕರಣಗಳು, ಮೋಟಾರ್ ಅಪಘಾತ ಪರಿಹಾರ ಪ್ರಕರಣಗಳು, ವಿದ್ಯುತ್ ಮತ್ತು ನೀರಿನ ಶುಲ್ಕಕ್ಕೆ ಸಂಬಂಧಿಸಿದ ಪ್ರಕರಣಗಳು, ಭೂ ಸ್ವಾಧೀನ ಪ್ರಕರಣಗಳು, ವೇತನ ಭತ್ಯೆ ಹಾಗೂ ಪಿಂಚಣಿಗೆ ಸಂಬಂಧಿಸಿದ ಪ್ರಕರಣಗಳು, ಸಾರ್ವಜನಿಕ ಉಪಯುಕ್ತತೆ ಸೇವೆಗಳಿಗೆ ಸಂಬಂಧಿಸಿದ ಪ್ರಕರಣಗಳು, ರಾಜಿ ಯೋಗ್ಯ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು ಹಾಗೂ ಇತರೆ ಪ್ರಕರಣಗಳು, ಕುಟುಂಬ ನ್ಯಾಯಾಲಯದ ಪ್ರಕರಣ (ವಿವಾಹ ವಿಚ್ಛೇದನವನ್ನು ಹೊರತುಪಡಿಸಿ) ಗಳನ್ನು ಜನತಾ ನ್ಯಾಯಾಲಯಗಳಲ್ಲಿ ಇತ್ಯರ್ಥಪಡಿಸಲಾಗುವುದು ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ ರಾಮಸಮುದ್ರ ಹಾಜರಿದ್ದರು.
ಸುಪ್ರೀಂಕೋರ್ಟ್ ಕೇಸ್‌ಗಳ ರಾಜಿಗೂ ಅವಕಾಶ
ಆ.21ರಿಂದ 23ವರೆಗೆ ಆಯೋಜಿಸಿರುವ ವಿಶೇಷ ಲೋಕ ಅದಾಲತ್‌ನಲ್ಲಿ ಸುಪ್ರೀಂ ಕೊರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಜಿ.ಪ್ರಭಾವತಿ ತಿಳಿಸಿದರು.
ಜಿಲ್ಲೆಗೆ ಸಂಬಂಧಿಸಿದ ಒಟ್ಟು 5 ಕೇಸ್‌ಗಳು ಸುಪ್ರೀಂಕೋರ್ಟ್‌ಗಳಲ್ಲಿವೆ.ಚಾಮರಾಜನಗರ ನ್ಯಾಯಾಲಯಕ್ಕೆ ಸಂಬಂಧಿಸಿದಂತೆ 3, ಗುಂಡ್ಲುಪೇಟೆ 1 ಹಾಗೂ ಕೊಳ್ಳೇಗಾಲದಲ್ಲಿ 1 ಪ್ರಕರಣಗಳನ್ನು ಗುರುತಿಸಲಾಗಿದ್ದು, 3 ಪ್ರಕರಣಗಳಿಗೆ ನೋಟಿಸ್ ನೀಡಲಾಗಿದೆ. 2 ಪ್ರಕರಣಗಳವರನ್ನು ಕರೆಯಿಸಿ ಪ್ರಕರಣ ರಾಜೀ ಮಾಡಿಸಲು ಪ್ರಯತ್ನಿಸಲಾಗಿದೆ ಎಂದು ಮಾಹಿತಿ ನೀಡಿದರು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net