ಚಾಮರಾಜನಗರದ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ ಶ್ರೀಗಂಧ ಕನ್ನಡ ಯುವ ವೇದಿಕೆ ಗಡಿನಾಡು ಕನ್ನಡ ಹೋರಾಟ ವೇದಿಕೆ ವತಿಯಿಂದ ಶನಿವಾರ ಆಯೋಜಿಸಿದ್ದ ಮೈಸೂರು ಸಂಸ್ಥಾನದ ಮಹಾರಾಜ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮವನ್ನು ಸಮಾಜಸೇವಕ ಶ್ರೀನಿಧಿ ಕುದರ್ ಉದ್ಘಾಟಿಸಿದರು. ಚಾ.ರಂ.ಶ್ರೀನಿವಾಸಗೌಡ, ರವಿಚಂದ್ರಪ್ರಸಾದ್, ರಾಚಪ್ಪ, ಪಣ್ಯದಹುಂಡಿ ರಾಜು, ಸಿ.ರಂಗಸ್ವಾಮಿ, ಲಿಂಗರಾಜು ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸಮಾಜ ಸೇವಕ ಶ್ರೀನಿಧಿ ಕುದರ್ ಅಭಿಮತ
ಶ್ರೀಗಂಧ ಕನ್ನಡ ಯುವ ವೇದಿಕೆಯಿಂದ ಮಹಾರಾಜದ ಜಯಂತಿ ಆಚರಣೆ
ಚಾಮರಾಜನಗರ: ನಾಲ್ವಡಿ ಕೃಷ್ಣರಾಜ ಒಡೆಯರ್ ದೂರದೃಷ್ಠಿಯ ಆಡಳಿತಗಾರರಾಗಿ ನಾಡಿನ ಅಭಿವೃದ್ಧಿದಾತರಾದರು ಎಂದು ಸಮಾಜಸೇವಕ ಶ್ರೀನಿಧಿ ಕುದರ್ ತಿಳಿಸಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ ಶ್ರೀಗಂಧ ಕನ್ನಡ ಯುವ ವೇದಿಕೆ ಗಡಿನಾಡು ಕನ್ನಡ ಹೋರಾಟ ವೇದಿಕೆ ವತಿಯಿಂದ ಶನಿವಾರ ಆಯೋಜಿಸಿದ್ದ ಮೈಸೂರು ಸಂಸ್ಥಾನದ ಮಹಾರಾಜ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಭಾರತದ ಮೀಸಲಾತಿಯ ಜನಕರಾಗಿದ್ದರು. ಅವರು ದೇಶದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಜಾತಿ ಆಧಾರಿತ ಮೀಸಲಾತಿಯನ್ನು ಮೈಸೂರು ರಾಜ್ಯದಲ್ಲಿ ಜಾರಿಗೆ ತಂದರು. ನಾಲ್ವಡಿಯವರ ಆಡಳಿತಾವಧಿ ಮೈಸೂರು ರಾಜ್ಯದ ಸುವರ್ಣಯುಗವಾಗಿತ್ತು. ಶಿಕ್ಷಣ, ಕೈಗಾರಿಕೆ, ನೀರಾವರಿ ಮತ್ತು ಸಾಮಾಜಿಕ ನ್ಯಾಯದಂತಹ ಕ್ಷೇತ್ರಗಳಲ್ಲಿ ಅವರ ಅಪಾರ ಕೊಡುಗೆಗಳು ಇಂದಿಗೂ ಮಾದರಿಯಾಗಿವೆ. ಹಿಂದುಳಿದ ವರ್ಗಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ಪ್ರಾತಿನಿಧ್ಯ ನೀಡಲು 1918ರಲ್ಲಿ ಸರ್ ಲೆಸ್ಲಿ ಮಿಲ್ಲರ್ ಸಮಿತಿಯನ್ನು ರಚಿಸಿ, ಭಾರತದಲ್ಲೇ ಮೊದಲ ಬಾರಿಗೆ ಸಾಮಾಜಿಕ ಮೀಸಲಾತಿಗೆ ಅಡಿಪಾಯ ಹಾಕಿದರು ಎಂದ ಹೇಳಿದರು.
ಏಷ್ಯಾದಲ್ಲೇ ಮೊಟ್ಟಮೊದಲ ಬಾರಿಗೆ ಶಿವನ ಸಮುದ್ರದಲ್ಲಿ ಜಲ ವಿದ್ಯುತ್ ಯೋಜನೆಯನ್ನು ಆರಂಭಿಸಿ, ಕೋಲಾರದ ಚಿನ್ನದ ಗಣಿಗಳಿಗೆ ವಿದ್ಯುತ್ ಪೂರೈಸಿದರು. ಕಾವೇರಿ ನದಿಗೆ ಕನ್ನಂಬಾಡಿಯಲ್ಲಿ ಕೃಷ್ಣರಾಜ ಸಾಗರ ಅಣೆಕಟ್ಟನ್ನು ನಿರ್ಮಿಸಿ, ಕೃಷಿಗೆ ನೀರಾವರಿ ಸೌಲಭ್ಯ ಕಲ್ಪಿಸಿದರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಮೈಸೂರು ರಾಜಮನೆತನಕ್ಕೂ ಚಾಮರಾಜನಗರಕ್ಕೂ ಅವಿನಾಭಾವ ನಂಟು ಇದೆ. ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನ ನಿರ್ಮಾಣಗೊಂಡು ಈ ವರ್ಷಕ್ಕೆ 200 ವರ್ಷ ತುಂಬುತ್ತಿವೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ಈ ದೇವಸ್ಥಾನ ಕಟ್ಟಿಸಿದರು ಎಂದರು.
ಮೈಸೂರು ರಾಜರ ಪೈಕಿಯಲ್ಲಿ ಅತ್ಯಂತ ಪ್ರಖ್ಯಾತಿ ಪಡೆದವರು ಮುಮ್ಮಡಿ ಕೃಷ್ಣರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್, ರಣಧೀರ ಕಂಠೀರವ, ಮೈಸೂರಿನಲ್ಲಿ ದಸರಾ ಆರಂಭಿಸಿದ ರಾಜ ಒಡೆಯರ್ ಅವರ ಹೆಸರಿನಲ್ಲಿ ಸರ್ಕಾರಗಳು ಪ್ರಶಸ್ತಿಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಋಗ್ವೇದಿ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆಡಳಿತ, ಶಿಕ್ಷಣ, ಮಹಿಳಾ ಮೀಸಲಾತಿ, ನೀರಾವರಿ, ಬಾಲ್ಯವಿವಾಹ ಪದ್ಧತಿ ನಿಷೇಧ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ಉತ್ತಮ ಸೇವೆ ಸಲ್ಲಿಸಿದ್ದಾರೆ. ಅವರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಆದ್ಯಕರ್ತವ್ಯವಾಗಿದೆ ಎಂದರು
ಶ್ರೀಗಂಧ ಕನ್ನಡ ಯುವ ವೇದಿಕೆ ಅಧ್ಯಕ್ಷ ರವಿಚಂದ್ರಪ್ರಸಾದ್ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗಡಿನಾಡು ಕನ್ನಡ ಹೋರಾಟ ವೇದಿಕೆಯ ಅಧ್ಯಕ್ಷ ರಾಚಪ್ಪ, ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ಸಹ ಕಾರ್ಯದರ್ಶಿ ಪಣ್ಯದಹುಂಡಿ ರಾಜು, ಪ್ರಾಂಶುಪಾಲ ಸಿ.ರಂಗಸ್ವಾಮಿ ಕುವೆಂಪು ಕನ್ನಡ ಕಲಾವೇದಿಕೆ ಅಧ್ಯಕ್ಷ ಲಿಂಗರಾಜು ಇತರರು ಹಾಜರಿದ್ದರು.