ನಾಗಣ್ಣ ನಗರವನ್ನು ಗ್ರಾಪಂ ಪಂಚತಂತ್ರ ವ್ಯವಸ್ಥೆಗೆ ಒಳಪಡಿಸಿ ಸೌಕರ್ಯ ಒದಗಿಸಬೇಕೆಂದು ಒತ್ತಾಯಿಸಿ ನಾಗಣ್ಣ ನಗರ ಗ್ರಾಮಸ್ಥರು ಹನೂರಲ್ಲಿ ತಹಸೀಲ್ದಾರ್ ಕೆ.ಎನ್ ಚೈತ್ರಾ ಅವರಿಗೆ ಮನವಿ ಸಲ್ಲಿಸಿದರು. ಮಂಜುನಾಥ್, ಮುನಿಸ್ವಾಮಿ, ಮಾದೇವಿ, ಪಾಪಮ್ಮ ಇತರರಿದ್ದರು.
ಹನೂರು: ನಾಗಣ್ಣ ನಗರವನ್ನು ಗ್ರಾಮ ಪಂಚಾಯಿತಿ ಪಂಚತಂತ್ರ ವ್ಯವಸ್ಥೆಗೆ ಒಳಪಡಿಸುವುದರ ಜತೆಗೆ ಕಂದಾಯ ಗ್ರಾಮವಾಗಿಸಿ ಅಗತ್ಯ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಗ್ರಾಮಸ್ಥರು ಹನೂರಿನಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಪೆಟ್ರೋಲ್ ಬಂಕ್ ಬಳಿ ನೆರೆದಿದ್ದ ಗ್ರಾಮಸ್ಥರು ಜಿಲ್ಲಾ ಹಾಗೂ ತಾಲೂಕು ಆಡಳಿತದ ವಿರುದ್ಧ ಘೋಷಣೆ ಕೂಗುತ್ತ ಮುಖ್ಯ ರಸ್ತೆ ಮೂಲಕ ಮೆರವಣಿಗೆಯಲ್ಲಿ ಸಾಗಿ ತಹಸೀಲ್ದಾರ್ ಕಚೇರಿ ಮುಂಭಾಗ ಜಮಾಯಿಸಿದರು.
ನಾಗಣ್ಣ ನಗರದಲ್ಲಿ ಹೆಚ್ಚು ಹಿಂದುಳಿದ ವರ್ಗಕ್ಕೆ ಸೇರಿದ್ದ ಜನರಿದ್ದು, ಹಲವು ದಶಕದಿಂದಲೂ ವಾಸಿಸುತ್ತಿದ್ದಾರೆ. ಕೂಲಿಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಸ್ವಾತಂತ್ರೃ ಬಂದು 79 ವರ್ಷ ಕಳೆದರೂ ಇಲ್ಲಿನ ಜನರು ಅಗತ್ಯ ಸೌಕರ್ಯದಿಂದ ವಂಚಿತರಾಗಿದ್ದಾರೆ. 1996ಕ್ಕೂ ಹಿಂದೆ ಈ ಗ್ರಾಮವು ಅಜ್ಜೀಪುರ ಗ್ರಾಮ ಪಂಚಾಯಿತಿಗೆ ಸೇರಿದ್ದ ವೇಳೆ ಅಗತ್ಯ ಮೂಲ ಸೌಕರ್ಯಗಳು ದೊರಕುತ್ತಿತ್ತು. ಆದರೀಗ ರಾಮಾಪುರ ಗ್ರಾಪಂ ವ್ಯಾಪ್ತಿಗೆ ಒಳಪಡಿಸಲಾಗಿದೆ. ಆದರೆ ಇಲ್ಲಿ ಈ ಗ್ರಾಮವನ್ನು ಗ್ರಾಪಂ ತಂತ್ರಾಂಶ, ಪಂಚತಂತ್ರ ವ್ಯವಸ್ಥೆ ಹಾಗೂ ಡಿಮ್ಯಾಂಡ್ ರಿಜಿಸ್ಟರ್‌ನಲ್ಲಿ ಸೇರಿಸಿಲ್ಲ. ಇದರಿಂದ ಅಗತ್ಯ ಮೂಲ ಸೌಕರ್ಯಗಳು ಪಂಚಾಯಿತಿಯಿಂದ ದೊರಕುತ್ತಿಲ್ಲ ಎಂದು ಈ ವೇಳೆ ಅಜ್ಜೀಪುರದ ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಗ್ರಾಮದಲ್ಲಿ ಅಂಗನವಾಡಿ ಹಾಗೂ ಶಾಲಾ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು, ರೀಪೇರಿ ಪಡಿಸಲು ಗ್ರಾಪಂ ಮನಸ್ಸು ಮಾಡುತ್ತಿಲ್ಲ . ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆಯಾದರೂ ಯಾವುದೇ ಕ್ರಮವಾಗಿಲ್ಲ. ಆದ್ದರಿಂದ ಗ್ರಾಮವನ್ನು ಪಂಚತಂತ್ರ ವ್ಯವಸ್ಥೆಗೆ ಒಳಪಡಿಸುವುದರ ಜತೆಗೆ ಕಂದಾಯ ಗ್ರಾಮವಾಗಿ ಜಾರಿಗೊಳಿಸಬೇಕು. ಗ್ರಾಮಕ್ಕೆ ಅಗತ್ಯ ಮೂಲ ಸೌಕರ್ಯ ಒದಗಿಸುವುದರ ಮೂಲಕ ಜನರಿಗೆ ಅನುಕೂಲ ಕಲ್ಪಿಸಬೇಕು. ಇಲ್ಲವಾದಲ್ಲಿ ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿದರು.
ಅಗತ್ಯ ಭರವಸೆ: ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಕೆ.ಎನ್.ಚೈತ್ರಾ, ನಾಗಣ್ಣ ನಗರ ಗ್ರಾಮ ರಚನೆ ಸಂಬಂಧ ಸರ್ಕಾರದಿಂದ ಅಂತಿಮ ನೋಟಿಫಿಕೇಷನ್ ಆಗಿದೆ. ಆದರೆ ಈ ಗ್ರಾಮವನ್ನು ಯಾವ ಗ್ರಾಪಂಗೆ ಸೇರಿಸಬೇಕು ಎಂಬುದು ನಿರ್ಧಾರವಾಗಿಲ್ಲ. ಈ ಸಂಬಂಧ ಜಿಪಂ ಸಿಇಒ ಹಾಗೂ ತಾಪಂ ಇಒ ಅವರೊಂದಿಗೆ ಚರ್ಚಿಸಲಾಗಿದೆ. ಸರ್ಕಾರದಿಂದ ಆದೇಶವಾದ ಬಳಿಕ ಹಕ್ಕುಪತ್ರ ನೀಡಲು ಹಾಗೂ ಅಗತ್ಯ ಮೂಲ ಸೌಕರ್ಯ ಒದಗಿಸಲು ಅಗತ್ಯ ಕ್ರಮವಹಿಸುವುದಾಗಿ ಭರವಸೆ ನೀಡಿದರು.
ಗ್ರಾಮಸ್ಥರಾದ ಮುನಿಸ್ವಾಮಿ, ಕುಮಾರ್, ಗೋವಿಂದರಾಜು, ಪಳನಿಸ್ವಾಮಿ, ಮಾದೇವಿ, ಶಾರದಾ, ಪೂಂಗುಡಿ, ಪಾಪಮ್ಮ, ತುಳಸಿಮಣಿ, ಈಶ್ವರಿ, ತಂಗಮ್ಮ, ಬೇಬಿ, ಮಾದಮ್ಮ, ಕಂದಮ್ಮ ಇತರರು ಇದ್ದರು.