ರಾಜೇಂದ್ರ ಶ್ರೀಗಳ ಜಯಂತಿ ಯಶಸ್ಸಿಗೆ ಶ್ರಮಿಸಿ

ಹನೂರಿನಲ್ಲಿ ಡಾ. ಶಿವರಾತ್ರಿ ರಾಜೇಂದ್ರ ಶ್ರೀಗಳ 110ನೇ ಜಯಂತಿ ಆಚರಿಸುವ ಸಂಬಂಧ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಎಂ.ಆರ್ ಮಂಜುನಾಥ್, ಆರ್.ನರೇಂದ್ರ, ಪರಿಮಳ ನಾಗಪ್ಪ, ಡಾ.ಎಸ್ ದತ್ತೇಶ್‌ಕುಮಾರ್ ಇತರರು ಇದ್ದರು.
ಹನೂರಿನಲ್ಲಿ ಡಾ. ಶಿವರಾತ್ರಿ ರಾಜೇಂದ್ರ ಶ್ರೀಗಳ 110ನೇ ಜಯಂತಿ ಆಚರಿಸುವ ಸಂಬಂಧ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಎಂ.ಆರ್ ಮಂಜುನಾಥ್, ಆರ್.ನರೇಂದ್ರ, ಪರಿಮಳ ನಾಗಪ್ಪ, ಡಾ.ಎಸ್ ದತ್ತೇಶ್‌ಕುಮಾರ್ ಇತರರು ಇದ್ದರು.
Published on
ಹನೂರು: ಹನೂರಿನಲ್ಲಿ ಡಿ.13 ರಂದು ಆಚರಿಸಲು ನಿರ್ಧರಿಸಿರುವ ಡಾ. ಶಿವರಾತ್ರಿ ರಾಜೇಂದ್ರ ಶ್ರೀಗಳ 110ನೇ ಜಯಂತಿಯ ಯಶಸ್ವಿ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು. 
ಪಟ್ಟಣದ ಶ್ರೀ ಮಹದೇಶ್ವರ ಐಟಿಐ ಕಾಲೇಜಿನಲ್ಲಿ ಶನಿವಾರ ಡಾ. ಶಿವರಾತ್ರಿ ರಾಜೇಂದ್ರ ಶ್ರೀಗಳ ಜಯಂತಿ ಆಚರಣೆ ಸಿದ್ಧತೆ ಕುರಿತು ಆಯೋಜಿಸಿದ್ದ ವಿವಿಧ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದರು. 
ಡಾ.ಶಿವರಾತ್ರಿ ರಾಜೇಂದ್ರ ಶ್ರೀಗಳು ಈ ಭಾಗಕ್ಕೆ ನೀಡಿರುವ ಕೊಡುಗೆ ಅಪಾರವಾಗಿದ್ದು, ಅವರ 110ನೇ ಜಯಂತಿಯನ್ನು ಆಚರಿಸುವ ಭಾಗ್ಯ ದೊರೆಕಿರುವುದು ನಮ್ಮ ಪುಣ್ಯ. ಆದ್ದರಿಂದ ಜಯಂತಿ ಕಾರ್ಯಕ್ರಮವು ಯಶಸ್ವಿ ಹಾಗೂ ಅರ್ಥಪೂರ್ಣವಾಗಿರಬೇಕು. ಈಗಾಗಲೇ ಪ್ರಚಾರ, ದಾಸೋಹ, ಸಂಪನ್ಮೂಲ ಕ್ರೋಡೀಕರಣ ಸೇರಿದಂತೆ ಇತರ ಸಮಿತಿಗಳನ್ನು ರಚಿಸಲು ನಿರ್ಧರಿಸಲಾಗಿದೆ. ಅಧ್ಯಕ್ಷರನ್ನು ನಿಯೋಜಿಸಿ ಜವಬ್ದಾರಿ ನೀಡಲಾಗುವುದು. ಆದ್ದರಿಂದ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ತಿಳಿಸಿದರು. 
ಶಾಸಕ ಎಂ.ಆರ್. ಮಂಜುನಾಥ್ ಮಾತನಾಡಿ, ರಾಜೇಂದ್ರ ಶ್ರೀಗಳು ಹನೂರು ಭಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆಯುವುದರ ಮೂಲಕ ಮಕ್ಕಳ ಶಿಕ್ಷಣಕ್ಕೆ ಕಾರಣೀಭೂತರಾಗಿದ್ದಾರೆ. ಹಾಗಾಗಿ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂದರು. 
ಮಾಜಿ ಶಾಸಕ ಆರ್. ನರೇಂದ್ರ ಮಾತನಾಡಿ, ತಾಲೂಕಿನ ಎಲ್ಲ ಜನಾಂಗದ ಜನರು ಸೇರಿ ಶ್ರೀಗಳ ಜಯಂತಿಯನ್ನು ಆಚರಿಸುತ್ತಿರುವುದು ಸಂತಸದ ವಿಷಯ. ಈ ಜಯಂತಿಯು ಧಾರ್ಮಿಕತೆಯ ಜತೆಗೆ ಕ್ಷೇತ್ರದ ಜನರಿಗೆ ಅನುಕೂಲವಾಗುವ ಕಾರ್ಯಕ್ರಮವಾಗಬೇಕು. ಕ್ಷೇತ್ರದಲ್ಲಿ ಮಳೆಯಾಗದ ಪರಿಣಾಮ ಜನರು ನೀರಾವರಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಸಿಎಂ ಹಾಗೂ ಡಿಸಿಎಂ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು. ಇದರಿಂದ ಕ್ಷೇತ್ರಕ್ಕೆ ಯೋಜನೆಗಳ ಮೂಲಕ ಜನರಿಗೆ ಅನುಕೂಲವಾಗಲಿದೆ ಎಂದರು. 
ನೇಮಕ: ಇದೇ ವೇಳೆ ಕಾರ್ಯಕ್ರಮದ ಆಚರಣಾ ಸಮಿತಿಗೆ ಗೌರವಾಧ್ಯಕ್ಷರಾಗಿ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಅಧ್ಯಕ್ಷರಾಗಿ ಶಾಸಕ ಎಂ.ಆರ್. ಮಂಜುನಾಥ್, ಮಾಜಿ ಶಾಸಕ ಆರ್.ನರೇಂದ್ರ, ಪರಿಮಳಾ ನಾಗಪ್ಪ, ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಎಸ್. ದತ್ತೇಶ್‌ಕುಮಾರ್, ಬಿಜೆಪಿ ಒಬಿಸಿ ಜಿಲ್ಲಾಧ್ಯಕ್ಷ ಜನಧ್ವನಿ ಬಿ.ವೆಂಕಟೇಶ್, ಸಮಾಜ ಸೇವಕ ನಿಶಾಂತ್, ಲಿಂಗಾಯತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಸೋಮಶೇಖರ್, ಪ.ಪಂ. ಅಧ್ಯಕ್ಷೆ ಮುಮ್ತಾಜ್‌ಬಾನು, ಹಿರಿಯ ಮುಖಂಡ ಪೊನ್ನಾಚಿ ಮಹದೇವಸ್ವಾಮಿ ಅವರನ್ನು ನೇಮಕ ಮಾಡಲಾಯಿತು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net