ಹನೂರು: ಪಟ್ಟಣದ ಇಂದಿರಾ ಕ್ಯಾಂಟೀನ್ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಶುಕ್ರವಾರ ಶಾಸಕ ಎಂ.ಆರ್ ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಸೂಚನೆ ನೀಡಿದರು.
ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿದ ಶಾಸಕರು ಆಹಾರದ ಗುಣಮಟ್ಟವನ್ನು ಪರಿಶೀಲಿಸಿದರು. ಜನರಿಗೆ ಪ್ರತಿನಿತ್ಯ ಮೆನುವಿನ ಪ್ರಕಾರ ಹಾಗೂ ಸಾರ್ವಜನಿಕರ ಸಂಖ್ಯೆಗೆ ಅನುಗುಣವಾಗಿ ತಿಂಡಿ, ಊಟವನ್ನು ನೀಡಬೇಕು. ಹೆಚ್ಚು ತರಕಾರಿಯನ್ನು ಬಳಸಬೇಕು. ಶುಚಿತ್ವವನ್ನು ಕಾಯ್ದುಕೊಳ್ಳಬೇಕು. ಈ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು. ಆವರಣದಲ್ಲಿ ಮಳೆ ನೀರು ನಿಲ್ಲದಂತೆ ಅಗತ್ಯ ಕ್ರಮವಹಿಸಬೇಕು. ಎಂದು ಸಿಬ್ಬಂದಿಗೆ ಸೂಚಿಸಿದರು.
ಇನ್ನು ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಶಾಸಕರು ಇತ್ತೀಚಿಗೆ ನಿರ್ಮಾಣವಾಗಿರುವ ಶೌಚಗೃಹಕ್ಕೆ ತೆರಳಿ ಗಾಳಿ, ಬೆಳಕಿಗೆ ದೊಡ್ಡದಾದ ಕಿಟಕಿಗಳನ್ನು ಅಳವಡಿಸಬೇಕು. ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಳ್ಳುವುದರ ಜತೆಗೆ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಕಸದ ರಾಶಿಯನ್ನು ಗಮನಿಸಿದ ಶಾಸಕರು ಬಸ್ ನಿಲ್ದಾಣಕ್ಕೆ ಮ.ಬೆಟ್ಟಕ್ಕೆ ತೆರಳುವ ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಾರೆ. ಹಾಗಾಗಿ ಸ್ವಚ್ಛತೆ ಕಾಪಾಡಬೇಕು. ಬಸ್ ನಿಲ್ದಾಣದ ಮುಂಭಾಗದಲ್ಲಿ ಪಾರ್ಕಿಂಗ್ ಸ್ಥಳವನ್ನು ಬದಲಾಯಿಸಬೇಕು. ಪ್ರವೇಶ ದ್ವಾರದಲ್ಲಿ ನಿರ್ಮಾಣವಾಗಿರುವ ಗುಂಡಿಯನ್ನು ಮುಚ್ಚಿಸಬೇಕು. ಈ ಮೂಲಕ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಂಚಾರಿ ನಿಯಂತ್ರಣಾಧಿಕಾರಿ ರಂಗಸ್ವಾಮಿ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪಪಂ ಮುಖ್ಯಾಧಿಕಾರಿ ರೇಖಾ, ಇಂಜಿನಿಯರ್ ನಾಗರಾಜು, ಗುತ್ತಿಗೆದಾರ ಷಣ್ಮುಗಂ, ಮುಖಂಡರಾದ ವಿಜಯಕುಮಾರ್, ಅಮೀನ್, ವೆಂಕಟಾಚಲ, ಗುರುಸ್ವಾಮಿ ಹಾಗೂ ಇನ್ನಿತರರಿದ್ದರು.