3.62 ಕೋಟಿ ರೂ.ವೆಚ್ಚದಲ್ಲಿ ದೇಗುಲದ ಅಭಿವೃದ್ಧಿ ನಡೆಯುತ್ತಿದ್ದು, ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಕಾಮಗಾರಿಯನ್ನು ಪರಿಶೀಲಿಸಿದರು. ಬಳಿಕ ಮಾತನಾಡಿದ ಅವರು, ಹರದನಹಳ್ಳಿ ದಿವ್ಯಲಿಂಗೇಶ್ವರ ದೇವಸ್ಥಾನ ಪುರಾತನ ದೇವಾಲಯವಾಗಿದ್ದು, ಇತಿಹಾಸದಲ್ಲಿ ದಾಖಲೆಗಳನ್ನು ಹೊಂದಿದೆ. ಇಲ್ಲಿ ವಜ್ರ, ಚಿನ್ನ ಮಾರಾಟ ಮಾಡಲಾಗುತ್ತಿತ್ತು ಎಂದೇ ಹೇಳಲಾಗುತ್ತದೆ. ಇಂತಹ ವೈಭವದ ಇತಿಹಾಸವಿರುವ ದೇವಸ್ಥಾನದ ಗೋಪುರ ಸಂಪೂರ್ಣ ಶಿಥಿಲಗೊಂಡಿತ್ತು. ಇದನ್ನು ಅಭಿವೃದ್ಧಿ ಮಾಡಬೇಕೆಂಬುದು ಭಕ್ತರ ಕೋರಿಕೆಯಾಗಿತ್ತು. ಜತೆಗೆ ನನಗೂ ಸಹ ಹೊಸದಾಗಿ ಗೋಪುರ ನಿರ್ಮಾಣ ಮಾಡಿಸಬೇಕೆಂಬ ಆಸೆ ಇತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ 3.62 ಕೋಟಿ ರೂ. ಅನುದಾನವನ್ನು ಪಡೆದುಕೊಂಡು ಗೋಪುರ ನಿರ್ಮಾಣ ಕಾಮಗಾರಿ ಶುರು ಮಾಡಿಸಲಾಗಿದೆ ಎಂದರು.