ಅಲಗಾಪುರ ಗ್ರಾಮದ ಕೆರೆಯಲ್ಲಿ ಗಿಡಗಂಟಿಗಳ ತೆರೆವು ಕಾರ್ಯಕ್ಕೆ ಶಾಸಕ ಎಂ.ಆರ್ ಮಂಜುನಾಥ್ ಶುಕ್ರವಾರ ಚಾಲನೆ ನೀಡಿದರು. ಗುರುಮಲ್ಲಪ್ಪ, ಉದ್ದನೂರು ಪ್ರಸಾದ್, ರವಿ, ಮಂಜೇಶ್ ಇತರರಿದ್ದರು.
ಹನೂರು : ತಾಲೂಕಿನ ಮಣಗಳ್ಳಿ ಹಾಗೂ ಅಲಗಾಪುರ ಕೆರೆಗೆ ಮುಂಬರುವ ದಿನಗಳಲ್ಲಿ ಕಬಿನಿ ಜಲಾಶಯದಿಂದ ನೀರೊದಗಿಸಲು ಅಗತ್ಯ ಕ್ರಮ ವಹಿಸಲಾಗಿದೆ ಎಂದು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು.
ತಾಲೂಕಿನ ಅಲಗಾಪುರ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿರುವ ಕೆರೆಯಲ್ಲಿ ಬೆಳೆದು ನಿಂತಿರುವ ಗಿಡಗಂಟಿಗಳ ತೆರೆವು ಹಾಗೂ ಬಂಡ್ ನಿರ್ಮಾಣ ಕಾರ್ಯಕ್ಕೆ ಶುಕ್ರವಾರ
ಚಾಲನೆ ನೀಡಿ ಮಾತನಾಡಿದರು. ಅರಣ್ಯ ಪ್ರದೇಶದ ಅಂಚಿನಿಂದ ಕೂಡಿರುವ ಈ ಕೆರೆಯನ್ನು ಕಳೆದ 40 ವರ್ಷದ ಹಿಂದೆ ನಿರ್ಮಿಸಲಾಗಿದೆ. ಈ ಭಾಗದ 239 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಕರ್ಯವನ್ನು ಒದಗಿಸಬಹುದಾಗಿದೆ. ಆದರೆ ಅಭಿವೃದ್ಧಿ ಹೊಂದದ ಪರಿಣಾಮ ನೀರು ಸಂಗ್ರಹಕ್ಕೆ ತೊಡಕಾಗಿ ಪರಿಣಮಿಸಿದೆ ಎಂದರು.
ಕೆರೆಯನ್ನು ಅಭಿವೃದ್ಧಿ ಪಡಿಸಿ ಅನುಕೂಲ ಕಲ್ಪಿಸುವಂತೆ ಗ್ರಾಮಸ್ಥರ ಮನವಿ ಮಾಡಿದ್ದರು. ಈ ಹಿಂದೆ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಲಾಗಿತ್ತು. ಇದೀಗ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ 50 ಲಕ್ಷ ರೂ. ವೆಚ್ಚದಲ್ಲಿ ಗಿಡಗಂಟಿಗಳ ತೆರೆವು ಹಾಗೂ ಬಂಡ್ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗುತ್ತಿದೆ. ಇದರಿಂದ ಮಳೆಗಾಲದಲ್ಲಿ ನೀರು ಸಂಗ್ರಹವಾಗಲಿದೆ. ಅಂತರ್ಜಲ ಮಟ್ಟ ಸುಧಾರಣೆಯಿಂದ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ. ಕೃಷಿಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.
ಕ್ಷೇತ್ರದ ಕೊತ್ತನೂರು ಡ್ಯಾಂಗೆ ಕಬಿನಿಯಿಂದ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಹೆಚ್ಚುವರಿ ನೀರು ಹಳ್ಳದಲ್ಲಿ ವ್ಯರ್ಥವಾಗಿ ಹರಿಯಿತು. ಕೊತ್ತನೂರು ಕೆರೆಯಿಂದ ಈ ಭಾಗದ ಮಣಗಳ್ಳಿ ಹಾಗೂ ಅಲಗಾಪುರ ಕೆರೆಗೆ ಗುರುತ್ವಾಕರ್ಷಣೆಯ ಮೂಲಕ ನೀರು ತರಲು ಅವಕಾಶವಿದೆ. ಹಾಗಾಗಿ ಈ ಬಗ್ಗೆ ಸರ್ವೇ ಕಾರ್ಯ ನಡೆಸಿ ಈ ಕೆರೆಗಳಿಗೂ ನಿರೊದಗಿಸಲು ಅಗತ್ಯ ಕ್ರಮ ವಹಿಸಲಾಗಿದೆ ಎಂದರು.
ಕ್ಷೇತ್ರದ 28 ಕೆರೆಗಳ ಅಭಿವೃದ್ಧಿಗೆ 6 ಕೋಟಿ ರೂ ಅನುದಾನವನ್ನು ನೀಡಲಾಗಿದೆ. ಹಂತಹಂತವಾಗಿ ಅಭಿವೃದ್ಧಿ ಹೊಂದಲಿದೆ. ಇದರಿಂದ ರೈತರು ಹಾಗೂ ಜನರಿಗೆ ಅನುಕೂಲವಾಗಲಿದೆ ಎಂದರು.
ಪಿಡಬ್ಲ್ಯುಡಿ ಎಇಇ ಚಿನ್ನಣ್ಣ, ಕೆಆರ್‌ಐಡಿಎಲ್ ಎಇ ಕಾರ್ತಿಕ್, ನೀರಾವರಿ ಇಲಾಖೆಯ ಎಇ ಪ್ರತಾಪ್, ಚಾಮುಲ್ ಮಾಜಿ ಅಧ್ಯಕ್ಷ ಗುರುಮಲ್ಲಪ್ಪ, ಹಾಲಿ ನಿರ್ದೇಶಕ ಉದ್ದನೂರು ಪ್ರಸಾದ್, ಮುಖಂಡರಾದ ಶಾಗ್ಯ ರವಿ, ನಟರಾಜು, ಮಹೇಂದ್ರ, ಮಂಜೇಶ್, ಮಹದೇವಪ್ಪ, ನಾಗರಾಜು, ರಾಚಪ್ಪ ಹಾಗೂ ಇನ್ನಿತರರಿದ್ದರು.