2025ರಲ್ಲಿ ನೀರಿನ ಪ್ರಮಾಣ ತಗ್ಗಿ ಪ್ರವಾಹದ ಆತಂಕ ದೂರವಾಗಿತ್ತು. 2024ರಲ್ಲಿ ಕಬಿನಿ ಮತ್ತು ಕೆಆರ್‌ಎಸ್‌ನ ಹೊರ ಹರಿವು ಹೆಚ್ಚಾಗಿ ಮುಳ್ಳೂರು, ಹಳೇ ಹಂಪಾಪುರ, ದಾಸನಪುರ, ಯಡಕುರಿಯಾ, ಹರಳೆ ಗ್ರಾಮಗಳು ಜಲಾವೃತಗೊಂಡಿದ್ದರು. ಪ್ರವಾಹದಲ್ಲಿ ಮನೆಗಳಿಗೆ ನೀರು ನುಗ್ಗಿದ್ದ ಹಿನ್ನೆಲೆಯಲ್ಲಿ ಪ್ರಾಣಹಾನಿ ಸಂಭವಿಸುವುದನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ 951 ಜನರನ್ನು ಕಾಳಜಿ ಕೇಂದ್ರದಲ್ಲಿ ಇರಿಸಲಾಗಿತ್ತು. ಸರ್ಕಾರಿ ಶಾಲೆ, ಹಾಸ್ಟೆಲ್‌ಗಳಲ್ಲಿ ಕೇಂದ್ರ ತೆರೆಯಾಗಿತ್ತು. 6 ವರ್ಷದೊಳಗಿನ 52 ಮಕ್ಕಳು, 342 ಪುರುಷರು, 557 ಮಹಿಳೆಯರು ಸೇರಿ ಒಟ್ಟು 951 ಜನರು ಕಾಳಜಿ ಕೇಂದ್ರದಲ್ಲಿದ್ದರು. ಸುತ್ತಮುತ್ತಲಿನ ಗ್ರಾಮಗಳ ಜಮೀನುಗಳಿಗೂ ನೀರು ನುಗಿತ್ತು. ಈ ವಿಪತ್ತು ಇತ್ತೀಚಿನ ತಾಜಾ ಉದಾಹರಣೆಯಾಗಿದ್ದು, ಕಳೆದ ಹಲವು ವರ್ಷಗಳಿಂದ ಈ ಗ್ರಾಮಗಳನ್ನು ಪ್ರವಾಹ ಬಿಟ್ಟು ಬಿಡದೆ ಕಾಡುತ್ತಲೇ ಇದೆ. ಹಾಗಾಗಿ ಈ ಬಾರಿ ಮಳೆ ಮತ್ತು ಕಾವೇರಿ, ಕಬಿನಿ ನದಿ ನೀರಿನ ಹರಿವಿನ ಹೆಚ್ಚಳವನ್ನು ಎದುರಿಸಲು ಈಗಿನಿಂದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಒಂದು ವೇಳೆ ಮಳೆಗಾಲಕ್ಕೆ ಮಳೆ ಶುರುವಾದ ಮೇಲೆ ಸಿದ್ಧತೆ ಕೈಗೊಂಡು ಅಧಿಕಾರಿಗಳು ಗಡಿಬಿಡಿಯ ಮುಳುಗಿದರೆ, ಜನರು ಸಮಸ್ಯೆಯ ಸುಳಿಯಲ್ಲಿ ಸಿಲುಕುತ್ತಾರೆ.