ಪಟ್ಟಣದ ಕಾವೇರಿ ರಸ್ತೆಯ ರಾಮಮಂದಿರ ಮುಂಭಾಗದಲ್ಲಿ ಅಲಂಕೃತ ತೆರೆದ ವಾಹನದಲ್ಲಿ ಇರಿಸಲಾಗಿದ್ದ ಭಾರತಾಂಬೆ ಭಾವಚಿತ್ರಕ್ಕೆ ಮುಡಿಗುಂಡ ವಿರಕ್ತ ಮಠದ ಶ್ರೀಕಂಠಸ್ವಾಮೀಜಿ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಪ್ರಮುಖ ರಸ್ತೆಗಳಲ್ಲಿ ಮಂಗಳವಾದ್ಯ, ಡೊಳ್ಳು ಕುಣಿತ, ಕಂಸಾಳೆ ಕುಣಿತ, ವೀರಗಾಸೆ ಕುಣಿತ ಸಮೇತ ನೂರಾರು ಮಹಿಳೆಯರು ಕಳಸ ಹಿಡಿದು ಸಾಗಿದರು. ಈ ವೇಳೆ ಹಿಂದೂ ಕಾರ್ಯಕರ್ತರು ಭಾರತ ಮಾತೆಗೆ ಜೈಕಾರ ಮೊಳಗಿಸಿದರು. ಅಂತಿಮವಾಗಿ ಮೆರವಣಿಗೆ ಚೌಡೇಶ್ವರಿ ಕಲ್ಯಾಣ ಮಂಟಪ ತಲುಪಿತು. ಮೆರವಣಿಗೆಯಲ್ಲಿ ಮಾಜಿ ಶಾಸಕ ಎಸ್. ಬಾಲರಾಜು, ವೀರಾಂಜನೇಯ ಸ್ವಾಮಿ ದೇವಾಲಯ ಅರ್ಚಕ ರಾಘವನ್, ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ ಸದಸ್ಯರು, ವಿವಿಧ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.