ಮಾ.25 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ಚಾಮರಾಜನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಯ್ಯನಪುರ ಶಿವಕುಮಾರ್ ಮಾತನಾಡಿದರು.
ಚಾಮರಾಜನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಯ್ಯನಪುರ ಶಿವಕುಮಾರ್ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಮುಖಂಡ ಅಯ್ಯನಪುರ ಶಿವಕುಮಾರ್ ಮಾಹಿತಿ
  • ಚಾ.ನಗರ ವಿಧಾನಸಭಾ ಕ್ಷೇತ್ರದಿಂದ 30 ಬಸ್ ವ್ಯವಸ್ಥೆ
  • ಒಳಮೀಸಲಾತಿಯನ್ನು ವಿರೋಧಿಸಿ ಧರಣಿ
ಚಾಮರಾಜನಗರ: ರಾಜ್ಯ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಒಳಮೀಸಲಾತಿಯನ್ನು ವಿರೋಧಿಸಿ ಮಾ.25 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬಲಗೈ ಸಮುದಾಯದ ಜನರು ಭಾಗವಹಿಸಬೇಕು ಎಂದು ಮುಖಂಡ ಅಯ್ಯನಪುರ ಶಿವಕುಮಾರ್ ಮನವಿ ಮಾಡಿದರು.
ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀಜ್ಞಾನಪ್ರಕಾಶಸ್ವಾಮೀಜಿ ನೇತೃತ್ವದಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಯಲಿದೆ. ಚಾಮರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಸುಮಾರು 30 ಬಸ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಜಿಲ್ಲೆಯಿಂದ ಸುಮಾರು 10-15 ಸಾವಿರ ಜನರು ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಬಲಗೈ ಸಮುದಾಯಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು.
ನ್ಯಾ.ನಾಗಮೋಹನ್‌ದಾಸ್ ಒಂದು ಸಮುದಾಯದ ಪರವಾಗಿದ್ದು, ಬಲಗೈ ಸಮುದಾಯದ ವಿರುದ್ಧವಾಗಿ ಒಳಮೀಸಲಾತಿ ವರದಿಯನ್ನು ನೀಡಿದ್ದಾರೆ. ಕೆಲವು ಮುಖಂಡರು ಆರ್‌ಎಸ್‌ಎಸ್ ಏಜೆಂಟ್‌ಗಳಂತೆ ಕೆಲಸ ಮಾಡುತ್ತಿದ್ದಾರೆ. ಒಳಮೀಸಲಾತಿ ಹಿಂದೆ ಆರ್‌ಎಸ್‌ಎಸ್ ತಂತ್ರಗಾರಿಕೆ ಇದ್ದು, ಇದರಿಂದ ಒಳಮೀಸಲಾತಿಯಲ್ಲಿ 101 ಜಾತಿಗಳಿಗೂ ಸಮಾನ ಅವಕಾಶ ಸಿಗುತ್ತಿಲ್ಲ. ಬಲಗೈ ಸಮುದಾಯದ ಸಚಿವರು ಮತ್ತು ಶಾಸಕರು ಸಮುದಾಯದ ಪರವಾಗಿದ್ದಾರೆ ಎಂದರು.
ರಾಜ್ಯ ಸರ್ಕಾರ ಒಳಮೀಸಲಾತಿಯಲ್ಲಿ ಬಲಗೈ ಸಂಬಂಧಿತ ಜಾತಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಹಳೆ ಮೀಸಲಾತಿ ಪದ್ಧತಿಯನ್ನೇ ಜಾರಿಗೊಳಿಸಬೇಕು. ನ್ಯಾ.ನಾಗಮೋಹನ್ ದಾಸ್ ವರದಿಯನ್ನು ಸರ್ಕಾರ ತಿರಸ್ಕರಿಸಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಮುಖಂಡ ಆರ್.ಮಹದೇವ್, ನಲ್ಲೂರು ಸೋಮೇಶ್ವರ್, ಮಧುಸೂದನ್, ಮಹದೇವಸ್ವಾಮಿ, ರಂಗಸ್ವಾಮಿ, ಗೋವಿಂದರಾಜು, ಅಶೋಕ ಹಾಜರಿದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net