ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ

 ಹನೂರು ಸಮೀಪದ ಮಂಗಲ ಗ್ರಾಮದ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಿನ್ನೆಲೆ ಧರ್ಮ ಗುರುಗಳು ಪ್ರವಚನ ನೀಡಿದರು.
ಹನೂರು ಸಮೀಪದ ಮಂಗಲ ಗ್ರಾಮದ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಿನ್ನೆಲೆ ಧರ್ಮ ಗುರುಗಳು ಪ್ರವಚನ ನೀಡಿದರು.
Published on
ಹನೂರು: ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಗುರುವಾರ ಮುಸ್ಲಿಮರು ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾಥನೆ ಸಲ್ಲಿಸುವುದರ ಮೂಲಕ ಬಕ್ರೀದ್ ಅನ್ನು ಸಂಭ್ರಮ ಸಡಗರದಿಂದ ಆಚರಿದರು.
ಪಟ್ಟಣದಲ್ಲಿ ಮುಸ್ಲಿಮರು ಬೆಳಗ್ಗೆ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಸಮೀಪದ ಆರ್.ಎಸ್.ದೊಡ್ಡಿ ಬಳಿಯಿರುವ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು
ಈದ್ಗಾ ಮೈದಾನದಿಂದ ಮಲೆಮಹದೇಶ್ವರ ಬೆಟ್ಟ ಮುಖ್ಯ ರಸ್ತೆಯ ಮೂಲಕ ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣದ ರಸ್ತೆಯಲ್ಲಿ ಮೆರವಣಿಗೆ ತೆರಳಿ ಧರ್ಮ ಸಂದೇಶ ಸಾರಿದರು. ಈ ಸಂದರ್ಭದಲ್ಲಿ ಮುಸ್ಲಿಮರು ಇತರ ಧರ್ಮದವರಿಗೂ ಕೂಡ ಬಕ್ರೀದ್ ಹಬ್ಬದ ಶುಭಾಶಯ ಕೋರಿ ಔತಣಕ್ಕೆ ಆಹ್ವಾನವಿತ್ತರು.
ಪ್ರವಾದಿ ಇಬ್ರಾಹಿಂ ಅವರ ತ್ಯಾಗ, ಬಲಿದಾನವನ್ನು ನೆನೆಯುವ ಸಲುವಾಗಿ ಆಚರಿಸುವ ಈ ಬಕ್ರೀದ್ ಅನ್ನು ತಾಲೂಕಿನಲ್ಲಿ ಹೆಚ್ಚಾಗಿ ಮುಸ್ಲಿಮರು ವಾಸಿಸುವ ಬಂಡಳ್ಳಿ, ಮಂಗಲ, ಕೌದಳ್ಳಿ, ಕಣ್ಣೂರು, ಎಲ್ಲೇಮಾಳ, ಬಸಪ್ಪನದೊಡ್ಡಿ, ಅಜ್ಜೀಪುರ, ಚಿಗತಾಪುರ, ಕುರುಬರದೊಡ್ಡಿ, ಒಡೆಯರಪಾಳ್ಯ ಹಾಗೂ ಈ ಭಾಗದ ಇನ್ನಿತರ ಗ್ರಾಮಗಳಲ್ಲಿ ಆಚರಿಸಲಾಯಿತು. ಬೆಳಗ್ಗೆ ಮುಸ್ಲಿಮರು ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮೆರವಣಿಗೆಯ ಮೂಲಕ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾಥನೆ ಸಲ್ಲಿಸಿದರು. ಈ ವೇಳೆ ಧರ್ಮ ಗುರುಗಳು ಇಸ್ಲಾಂ ಧರ್ಮ ಕುರಿತು ಉಪನ್ಯಾಸ ನೀಡಿದರು. ಬಳಿಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಪ್ರಾರ್ಥನೆ ಮುಗಿದ ಬಳಿಕ ತಮ್ಮ ತಮ್ಮ ಮನೆಗಳಿಗೆ ತೆರಳಿದ ಮುಸ್ಲಿಮರು ಅಜಾರತ್ ಇಬ್ರಾಹಿಂ ಅಲಿ ಸಲಾಂ ಹೆಸರಿನಲ್ಲಿ ಬಂಧು, ಬಾಂಧವರಿಗೆ ದಾನ ಮಾಡಿ ಸಂಭ್ರಮಪಟ್ಟರು. ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net