ಚಾಮರಾಜನಗರದ ಹಳೇ ಕೆಡಿಪಿ ಸಭಾಂಗಣದಲ್ಲಿ ಭಾರತ ಸರ್ಕಾರದ ವಾರ್ತಾ ಶಾಖೆ ವತಿಯಿಂದ ಕೇಂದ್ರ ಸರ್ಕಾರದ 12 ವರ್ಷಗಳ ಕಾರ್ಯ ಸಾಧನೆಗಳು ಹಾಗೂ ನಶಾಮುಕ್ತ ಭಾರತ ಅಭಿಯಾನದ ಕುರಿತ ಗುರುವಾರ ಆಯೋಜಿಸಲಾಗಿದ್ದ ವಾರ್ತಾಲಾಪ ಕಾರ್ಯಾಗಾರವನ್ನು ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಉದ್ಘಾಟಿಸಿದರು. ಮಹಮದ್ ಅಸ್ಗರ್ ಮುನ್ನ, ಎಚ್.ವಿ.ಚಂದ್ರು, ಶ್ರೀರೂಪಾ, ಮೋನಾರೋತ್, ಎ.ರಮೇಶ್, ಎಂ.ಸುರೇಖಾ ಇತರರಿದ್ದರು.
ಚಾಮರಾಜನಗರ: ಕೇಂದ್ರ ಸರ್ಕಾರ 2047ರ ವಿಕಸಿತ ಭಾರತ ಧ್ಯೇಯವನ್ನು ಸಾಧಿಸಲು ಕೃಷಿಕರು, ಹಿಂದುಳಿದ ವರ್ಗ, ಮಹಿಳೆ ಹಾಗೂ ಯುವ ಜನರನ್ನು ಕೇಂದ್ರಿಕೃತವಾಗಿಸಿ ಅನೇಕ ಯೋಜನೆಗಳನ್ನು ರೂಪಿಸಿದೆ ಎಂದು ಭಾರತ ಸರ್ಕಾರದ ವಾರ್ತಾ ಶಾಖೆಯ ಹೆಚ್ಚುವರಿ ಮಹಾನಿರ್ದೇಶಕ ಎಸ್.ಜಿ. ರವೀಂದ್ರ ಹೇಳಿದರು.
ನಗರದ ಹಳೇ ಕೆಡಿಪಿ ಸಭಾಂಗಣದಲ್ಲಿ ಭಾರತ ಸರ್ಕಾರದ ವಾರ್ತಾ ಶಾಖೆ ವತಿಯಿಂದ ಕೇಂದ್ರ ಸರ್ಕಾರದ 12 ವರ್ಷಗಳ ಕಾರ್ಯ ಸಾಧನೆಗಳು ಹಾಗೂ ನಶಾಮುಕ್ತ ಭಾರತ ಅಭಿಯಾನದ ಕುರಿತ ಗುರುವಾರ ಆಯೋಜಿಸಲಾಗಿದ್ದ ವಾರ್ತಾಲಾಪ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಪ್ರಸ್ತುತ ಕೇಂದ್ರ ಸರ್ಕಾರವು 12 ವರ್ಷಗಳ ಸಾಧನೆಗಳ ಕುರಿತು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಪ್ರಸ್ತುತ ದೇಶಾದ್ಯಂತ ನಶಾಮುಕ್ತ ಭಾರತ ವಿಶೇಷ ಅಭಿಯಾನವೂ ಸಹ ನಡೆಯುತ್ತಿದೆ. ಜಿಲ್ಲೆಯ ಯೋಜನೆಗಳ ಅನುಷ್ಠಾನದ ಬಗ್ಗೆ ಮತ್ತಷ್ಟು ಪ್ರಚಾರ ಮಾಡಬೇಕು ಎಂದರು.
ವಾರ್ತಾಲಾಪದ ಗೋಷ್ಠಿಯಲ್ಲಿ ನಶಾ ಮುಕ್ತ ಭಾರತ ಅಭಿಯಾನದ ಕುರಿತು ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್ ಮಾತನಾಡಿ, ಉಚಿತ ಸಹಾಯವಾಣಿ ಸಂಖ್ಯೆ 1908ಯನ್ನು ಇದಕ್ಕಾಗಿ ಮೀಸಲಿಡಲಾಗಿದೆ. 18 ರಿಂದ 35 ವರ್ಷಗಳ ಯುವಜನರನ್ನು ವ್ಯಸನಗಳಿಂದ ದೂರವಿರಿಸಲು ಹಾಗೂ ವ್ಯಸನಕ್ಕೆ ತುತ್ತಾದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸನ್ಮಿತ್ರ ಎಂಬ ಆಪ್ತಸಮಾಲೋಚನೆ ಕಾರ್ಯವನ್ನು ಸಹ ನಡೆಸಲಾಗುತ್ತಿದೆ ಎಂದು ಹೇಳಿದರು.
ಮಾದಕ ವಸ್ತುಗಳ ಬಳಕೆಯನ್ನು ತಡೆಗಟ್ಟಲು ಯೋಜನೆ ರೂಪಿಸಲಾಗಿದೆ. ರೆಫ್ಯೂಸ್- ಇನ್ಫಾರ್ಮ್ -ಸಪೋರ್ಟ್ ಎಂಪವರ್‌ಮೆಂಟ್ ಎಂಬುದು ಇದರ ಅರ್ಥ. ಮಾದಕ ವಸ್ತುಗಳನ್ನು ತ್ಯಜಿಸುವುದು, ಅದರ ಬಳಕೆಯಾಗುತ್ತಿರುವ ಬಗ್ಗೆ ಮಾಹಿತಿ ನೀಡುವುದು, ಅಭಿಯಾನಕ್ಕೆ ಬೆಂಬಲ ನೀಡುವುದು ಹಾಗೂ ವ್ಯಸನಿಗಳನ್ನು ಮುಖ್ಯವಾಹಿನಿಗೆ ತರಲು ಅವರನ್ನು ಸಬಲೀಕರಿಸುವುದು ಈ ಯೋಜನೆಯ ಮುಖ್ಯ ಉದ್ದೇಶ ಎಂದು ವಿವರಿಸಿದರು.
ಬುಡಕಟ್ಟು ಸಮುದಾಯಗಳ ಸಬಲೀಕರಣದ ಕುರಿತು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಎಚ್.ಎಸ್.ಬಿಂದ್ಯಾ ಮಾತನಾಡಿ, ಶಿಕ್ಷಣ, ಮೂಲಸೌಕರ್ಯ, ಆರೋಗ್ಯ ಸೇರಿದಂತೆ ಬುಡಕಟ್ಟು ಸಮುದಾಯಗಳ ಸಮಗ್ರ ಅಭ್ಯುದಯಕ್ಕಾಗಿ ಕೇಂದ್ರ ಸರ್ಕಾರವು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಬುಡಕಟ್ಟು ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ಕೇಂದ್ರ ಸರ್ಕಾರವು ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಮೈಸೂರು ಕಾವೇರಿ ಜಲಾನಯನ ಯೋಜನೆಯ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ. ಮರಿಸ್ವಾಮಿ ಕಾರ್ಯಾಗಾರ ಉದ್ಘಾಟನೆ ಮಾಡಿದರು. ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ. ಚಂದ್ರು, ಜಿಲ್ಲಾಧಿಕಾರಿ ಶ್ರೀರೂಪಾ, ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್ ಮಾತನಾಡಿದರು.
ಮಹಿಳೆ ಮತ್ತು ಮಕ್ಕಳ ಸಶಕ್ತೀಕರಣದ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾ ಅಧಿಕಾರಿ ಮಂಜುಳಾ, ಸಮೃದ್ಧ ರಾಷ್ಟ್ರಕ್ಕಾಗಿ ರೈತ ಕಾರ್ಯಕ್ರಮಗಳ ಕುರಿತು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ಬಾನುಪ್ರಕಾಶ್, ಆರ್ಥಿಕ ಸೇರ್ಪಡೆಯ ಕುರಿತು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ನ ವ್ಯವಸ್ಥಾಪಕಿ ಎಂ.ಸುರೇಖಾ ಮಾಹಿತಿ ಹಂಚಿಕೊಂಡರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಎ. ರಮೇಶ್, ಪಿಐಬಿಯ ಸಹಾಯಕ ನಿರ್ದೇಶಕ ಎಂ.ಮಧು, ಪುರುಷೋತ್ತಮ್ ಮತ್ತು ನಿತೀಶ್ ಇದ್ದರು.